ಹಾಡುಗಳ ಮೂಲಕ ಮೋಡಿ ಮಾಡಿದ ‘ನಮೋ’ ಈ ವಾರ ತೆರೆಗೆ!

Public TV
1 Min Read

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮಿನಲ್ಲಿ ಸದ್ದು ಮಾಡೋ ಚಿತ್ರಗಳೆಲ್ಲವೂ ಸಾಲು ಸಾಲಾಗಿ ಗೆದ್ದು ಬೀಗುತ್ತಿವೆ. ಟ್ರೇಲರ್, ಟೀಸರ್, ಹಾಡು ಮುಂತಾದವುಗಳ ಮೂಲಕ ವೈರಲ್ ಆಗುವ ಸಿನಿಮಾಗಳತ್ತು ಪ್ರೇಕ್ಷಕ ವರ್ಗವೂ ಮೋಹಗೊಳ್ಳುತ್ತಿದೆ. ಅಂಥಾದ್ದೊಂದು ಸಕಾರಾತ್ಮಕ ವಾತಾವರಣವನ್ನು ತನ್ನದಾಗಿಸಿಕೊಂಡಿರುವ ಚಿತ್ರ ‘ನಮೋ’. ಪುಟ್ಟರಾಜ ಸ್ವಾಮಿ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರ ಮೊದಲು ಪ್ರೇಕ್ಷಕರ ಆಸಕ್ತಿ ಸೆಳೆದುಕೊಂಡಿದ್ದು ಟೈಟಲ್ಲಿನ ಮೂಲಕ. ಆ ನಂತರದಲ್ಲಿ ಪ್ರಚಾರದ ಅಬ್ಬರ ತೋರಿಸಿದ್ದು ಚೆಂದದ ಹಾಡುಗಳ ಮೂಲಕ.

ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಂದು ಜವಾಬ್ದಾರಿಯನ್ನು ನಿರ್ವಹಿಸುವುದೇ ಕಷ್ಟದ ಕೆಲಸ. ಅಂಥಾದ್ದರಲ್ಲಿ ಪುಟ್ಟರಾಜ ಸ್ವಾಮಿಯವರು ಈ ಸಿನಿಮಾವನ್ನು ನಿರ್ದೇಶನ ಮಾಡಿರೋದು ಮಾತ್ರವಲ್ಲದೆ ನಾಯಕನಾಗಿಯೂ ನಟಿಸಿದ್ದಾರೆ. ಅದೆರಡೂ ಜವಾಬ್ದಾರಿಯನ್ನವರು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆಂಬುದಕ್ಕೆ ಟೀಸರ್, ಟ್ರೇಲರ್ ಮತ್ತು ಹಾಡುಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಈ ಸಿನಿಮಾ ನರೇಂದ್ರ ಮೋದಿ ಬಗೆಗಿನದ್ದಾ ಎಂಬಂಥಾ ಅನುಮಾನ ಹೊಂದಿದ್ದವರಿಗೆಲ್ಲ ಈ ಹಾಡುಗಳೇ ಕಥೆಯ ಬಗ್ಗೆ ನಾನಾ ದಿಕ್ಕುಗಳನ್ನೂ ತೋರಿಸಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನಮೋ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿರುವುದು ಸಾಯಿ ಸರ್ವೇಶ್. ಈ ಸಿನಿಮಾದ ಕಥೆಯ ಓಘ, ಹೊಸತನಕ್ಕೆ ಅನುಗುಣವಾಗಿಯೇ ಸಂಗೀತದ ಪಟ್ಟುಗಳನ್ನು ಹಾಕಿ ಪ್ರೇಕ್ಷಕರಿಗೆ ಹೊಸಾ ಫೀಲ್ ಕೊಡೋದರಲ್ಲಿ ಸರ್ವೇಶ್ ಗೆದ್ದಿದ್ದಾರೆ. ಒಂದು ಪಾರ್ಟಿ ಸಾಂಗ್ ಮತ್ತು ರೊಮ್ಯಾಂಟಿಕ್ ಹಾಡುಗಳಂತೂ ಈಗೊಂದಷ್ಟು ಕಾಲದಿಂದ ಟ್ರೆಂಡಿಂಗ್‍ನಲ್ಲಿದೆ. ಈ ಮೂಲಕ ಸದರಿ ಚಿತ್ರದಲ್ಲಿ ಅಪರೂಪದ ಪ್ರೇಮಕಥೆ ಮತ್ತು ಮಜವಾದ ಕಥಾ ಹೂರಣವಿದೆ ಎಂಬ ವಿಚಾರ ಸಮರ್ಥವಾಗಿಯೇ ಪ್ರೇಕ್ಷಕರತ್ತ ದಾಟಿಕೊಂಡಿದೆ. ಸುಲಭದಲ್ಲಿ ಕಾಸು ಮಾಡಬೇಕೆಂಬ ಹಂಬಲದಿಂದ ಶಾರ್ಟ್ ಕಟ್ ಹುಡುಕೋ ಮನಸ್ಥಿತಿಯ ಸುತ್ತಾ ಈ ಕಥೆ ಹೆಣೆಯಲ್ಪಟ್ಟಿದೆಯಂತೆ. ಹೀಗೆ ಒಂದಷ್ಟು ಮಾಹಿತಿಗಳನ್ನು ಚಿತ್ರತಂಡ ಬಿಟ್ಟುಕೊಟ್ಟರೂ ಕುತೂಹಲವೆಂಬುದು ನಾನಾ ಸ್ವರೂಪದಲ್ಲಿ ಗಿರಕಿ ಹೊಡೆಯುತ್ತಲೇ ಇದೆ. ಅದೆಲ್ಲವೂ ಪರಿಹಾರವಾಗಿ ನಮೋ ಚಿತ್ರದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವ ಕ್ಷಣಗಳು ಹತ್ತಿರಾಗಿವೆ.

Share This Article
Leave a Comment

Leave a Reply

Your email address will not be published. Required fields are marked *