ರಷ್ಯಾ ಮೇಲೆ ಕ್ರೂಸ್‌ ಕ್ಷಿಪಣಿ ದಾಳಿಗೆ ಉಕ್ರೇನ್‌ ಪ್ಲ್ಯಾನ್‌ – ಉನ್ನತಾಧಿಕಾರಿಗಳ ತುರ್ತುಸಭೆ ಕರೆದ ಪುಟಿನ್‌

By
2 Min Read

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರು ಮಾಸ್ಕೋದ ಭದ್ರತಾ ಮಂಡಳಿಯ ಉನ್ನತ ಅಧಿಕಾರಿಗಳ ತುರ್ತು ಸಭೆಗೆ ಕರೆದಿದ್ದಾರೆ.

ಹೌದು. ರಷ್ಯಾದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ಕ್ರೂಸ್‌ ಕ್ಷಿಪಣಿಗಳಿಂದ ದಾಳಿ (Cruise Missile Attack) ನಡೆಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ (Ukraine) ಬೆಂಬಲ ನೀಡಿವೆ ಎಂಬ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪುಟಿನ್‌ ಕೂಡಲೇ ಭದ್ರತಾ ಮಂಡಳಿಯ ಉನ್ನತ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಮಿಸೈಲ್‌ ದಾಳಿ ತಡೆಗಟ್ಟುವಿಕೆಯ ಬಗ್ಗೆ ಚರ್ಚಿಸಲು ತುರ್ತು ಸಭೆ ಕರೆದಿದ್ದಾರೆ‌ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ವಾರ ಯುಕೆ ತನ್ನ ʻಸ್ಟಾರ್ಮ್‌ ಶ್ಯಾಡೋʼ ಕ್ರೂಸ್‌ ಕ್ಷಿಪಣಿಯನ್ನು ರಷ್ಯಾ ಮೇಲೆ ಪ್ರಯೋಗಿಸುವ ಯೋಜನೆ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿತ್ತು. ಈ ಮಧ್ಯೆ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಯುಎಸ್ ಅಧ್ಯಕ್ಷ ಜೋ ಬೈಡನ್‌ ಅವರನ್ನು ಭೇಟಿ ಮಾಡಲು ವಾಷಿಂಗ್ಟನ್ ಡಿಸಿಗೆ ಹಾರಿದ್ದರು. ರಷ್ಯಾದ ಮೇಲೆ ಉಕ್ರೇನ್‌ ಶಸ್ತ್ರಾಸ್ತ್ರಗಳ ಬಳಕೆ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಸಹ ವರದಿಗಳು ಉಲ್ಲೇಖಿಸಿದ್ದವು.

ಈ ಎಲ್ಲ ಬೆಳವಣಿಗೆಗಳ ನಡುವೆ ಪುಟಿನ್‌ ಮಾಸ್ಕೋದಲ್ಲಿರುವ ಉನ್ನತ ರಕ್ಷಣಾ ಅಧಿಕಾರಿಗಳನ್ನು ಭೇಟಿಯಾಗಲು ತುರ್ತು ಸಭೆ ಕರೆದಿದ್ದಾರೆ. ಅವರೊಂದಿಗೆ ಯುದ್ಧತಂತ್ರಗಳ ಕುರಿತು ಚರ್ಚಿಸಲಿದ್ದಾರೆ ಎಂದು ಮಾಸ್ಕೋ ಭದ್ರತಾ ಮಂಡಳಿ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧದಿಂದ ಕಲಿತ ಪಾಠ.. ಚೀನಾಗೆ ಟಕ್ಕರ್‌ ಕೊಡಲು ‘ಮೌಂಟೆನ್‌ ಟ್ಯಾಂಕ್’ ಅಭಿವೃದ್ಧಿ‌ – ಇಂಡಿಯನ್‌ ಆರ್ಮಿಗೆ ಆನೆ ಬಲ

ಈ ಕುರಿತು ಮಾತನಾಡಿರುವ ಪುಟಿನ್‌, ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಕ್ಷಿಪಣಿ ದಾಳಿಗೆ ಉಕ್ರೇನ್‌ನನ್ನು ಬೆಂಬಲಿಸಿದರೆ, ಅದು ರಷ್ಯಾದೊಂದಿಗೆ ನೇರವಾಗಿ ಹೋರಾಟಕ್ಕಿಳಿದಂತೆ. ಅಂತಹ ಸನ್ನಿವೇಶದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾಸ್ಕೋ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅತಿ ವೇಗವಾಗಿ ಹರಡುವ ಕೋವಿಡ್‌ ಹೊಸ ತಳಿ ಪತ್ತೆ – ಯುಕೆ, ಯುಎಸ್‌, ಉಕ್ರೇನ್‌ ಸೇರಿ 27 ದೇಶಗಳಿಗೆ XEC ಆತಂಕ

ರಷ್ಯಾ ಉಕ್ರೇನ್‌ ಯುದ್ಧ ಕೆಲ ದಿನಗಳ ಮಟ್ಟಿಗೆ ತಣ್ಣಗಾಗಿತ್ತು. ಆದ್ರೆ ಮೂರು ತಿಂಗಳ ಹಿಂದೆ ರಷ್ಯಾ ಉಕ್ರೇನ್‌ ಮೇಲೆ 100 ಕ್ಷಿಪಣಿ, 100 ಅಟ್ಯಾಕಿಂಗ್‌ ಡ್ರೋನ್‌ಗಳಿಂದ ಏಕಾಏಕಿ ದಾಳಿ ನಡೆಸಿದ ನಂತರ ಮತ್ತೆ ಧಗಧಗ ಶುರುವಾಯಿತು. ಇದಕ್ಕೆ ಪ್ರತಿಯಾಗಿ ಉಕ್ರೇನ್‌ ಸಹ ಬೆಂಕಿ ಉಂಡೆ ಉಗುಳುವ ʻಡ್ರ್ಯಾಗನ್‌ ಡ್ರೋನ್‌ʼ ಅಸ್ತ್ರ ಪ್ರಯೋಗಿಸಿ ಪ್ರತೀಕಾರದ ದಾಳಿ ನಡೆಸಿತ್ತು. ಇದೀಗ ಮತ್ತೆ ರಷ್ಯಾ ವಿರುದ್ಧ ಸಿಡಿದೇಳುತ್ತಿದೆ ಎಂದು ತಿಳಿದುಬಂದಿದೆ.

Share This Article