ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಪಾಟೀಲ್

Public TV
1 Min Read

ಬೆಂಗಳೂರು: ಬೆಂಬಲ ಬೆಲೆಯಲ್ಲಿ ಕಡಲೆಕಾಳು (Chickpea) ಖರೀದಿ ಮಾಡಲು ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌. ಪಾಟೀಲ್ (Shivananda Patil) ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ ಅನುಮತಿ ನೀಡಿದ್ದು, ಕ್ವಿಂಟಲ್‌ಗೆ 5,650 ರೂ. ಗಳಂತೆ ಖರೀದಿ ಮಾಡಲಾಗುವುದು. ನೋಂದಣಿಗೆ 80 ದಿನ ಹಾಗೂ ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ನಾಫೆಡ್‌ ಮತ್ತು ಎನ್‌ಸಿಸಿಎಫ್‌ ಸಂಸ್ಥೆಗಳನ್ನು ಹಾಗೂ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಮತ್ತು ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ಖರೀದಿ ಸಂಸ್ಥೆಗಳನ್ನಾಗಿ ನೇಮಕ ಮಾಡಲಾಗಿದೆ. ಈ ಮಂಡಳಿಗೆ ಕಡಲೆಕಾಳು ಖರೀದಿ ಮಾಡಬೇಕಾದ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ರೈತರು ತಮ್ಮ ಸಮೀಪದ ಟಿ.ಎ.ಪಿ.ಸಿ.ಎಂ.ಎಸ್‌, ಎಫ್‌.ಪಿ.ಒ ಹಾಗೂ ಪಿ.ಎ.ಸಿ.ಎಸ್‌. ಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article