ಪಂಜಾಬಿ ಸ್ಟೈಲ್ ಪನೀರ್ ಭುರ್ಜಿ ತಿಂದು ನೋಡಿ

Public TV
1 Min Read

ಪನೀರ್ ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಪನೀರ್‌ನಿಂದ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮಕ್ಕಳು ಪನೀರ್‌ನಿಂದ ತಯಾರಿಸಲ್ಪಟ್ಟ ತಿನಿಸುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಂಜಾಬಿ ಸ್ಟೈಲ್‌ನ ಪನೀರ್ ಭುರ್ಜಿ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಇದನ್ನು ಸ್ಯಾಂಡ್‌ವಿಚ್ ಒಳಗೆ ಅಥವಾ ಚಪಾತಿಗೆ ಸೈಡ್ ಡಿಶ್ ಆಗಿಯೂ ತಿನ್ನಬಹುದು. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು:
ಪನೀರ್ – 200 ಗ್ರಾಂ
ಎಣ್ಣೆ – 1 ಚಮಚ
ಜೀರಿಗೆ – ಕಾಲು ಚಮಚ
ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಹೆಚ್ಚಿದ ಈರುಳ್ಳಿ – 1
ಅರಶಿಣ ಪುಡಿ – ಕಾಲು ಚಮಚ
ಗರಂ ಮಸಾಲ ಪುಡಿ – ಅರ್ಧ ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಹೆಚ್ಚಿದ ಟೊಮೊಟೊ – 1
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿಗಿಡಿ. ಎಣ್ಣೆ ಕಾದ ಬಳಿಕ ಅದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಂಡು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ.
* ಬಳಿಕ ಅದಕ್ಕೆ ಹಸಿರು ಮೆಣಸಿನ ಕಾಯಿ, ಟೊಮೆಟೊ ಹಾಕಿಕೊಂಡು ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿಕೊಳ್ಳಬೇಕು.
* ನಂತರ ಈ ಮಿಶ್ರಣಕ್ಕೆ ಅರಶಿಣ ಪುಡಿ, ಗರಂ ಮಸಾಲ, ಉಪ್ಪು ಹಾಗೂ ಸ್ವಲ್ಪ ನೀರನ್ನು ಸೇರಿಸಿಕೊಂಡು ಚನ್ನಾಗಿ ತಿರುವಿಕೊಳ್ಳಿ.
* ಬಳಿಕ ಇದಕ್ಕೆ ತುರಿದ ಪನೀರ್ ಹಾಕಿಕೊಂಡು 5 ನಿಮಿಷಗಳ ಕಾಲ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಮಸಾಲೆ ಪನೀರ್‌ನೊಂದಿಗೆ ಸರಿಯಾಗಿ ಹೊಂದಿಕೊಳ್ಳಬೇಕು.
* ಬಳಿಕ ಇದನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
* ಬಿಸಿಬಿಸಿ ಪನೀರ್ ಭುರ್ಜಿ ಸವಿಯಲು ಸಿದ್ಧ. ಪನೀರ್ ಭುರ್ಜಿ ಚಪಾತಿ, ಪರೋಟ ಅಥವಾ ಸ್ಯಾಂಡ್‌ವಿಚ್‌ಗೆ ಪರ್ಫೆಕ್ಟ್ ಕಾಂಬಿನೇಷನ್.

Share This Article