ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ

Public TV
3 Min Read

ಚಂಡೀಗಢ: ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗಲೇ ಪಂಜಾಬ್‍ನ ಪಟಿಯಾಲದ ಐತಿಹಾಸಿಕ ಕಾಳಿ ಮಂದಿರದಲ್ಲಿ ವಿಗ್ರಹವನ್ನು ವಿರೂಪಗೊಳಿಸುವ ಯತ್ನ ನಡೆದಿದೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಆರೋಪಿಯನ್ನು ನೈಂಕಾಲನ್ ಗ್ರಾಮದ ನಿವಾಸಿಯೆಂದು ಗುರುತಿಸಲಾಗಿದೆ. ಮಾಸ್ಕ್ ಧರಿಸಿರುವ ವ್ಯಕ್ತಿಯೊಬ್ಬ ಕಾಳಿ ದೇವಿಯ ಮೂರ್ತಿಯನ್ನು ನಾಶ ಮಾಡಲು ಪ್ರಯತ್ನಿಸಿದ್ದಾನೆ. ಆತ ವಿಗ್ರಹ ಇರಿಸಿರುವ ಹೊಸ್ತಿಲ ಮೇಲೆ ಹತ್ತುತ್ತಾನೆ. ಆತನನ್ನು ನೋಡಿದ ದೇವಾಲಯದ ಅರ್ಚಕ ಹಾಗೂ ಸ್ಥಳೀಯರು ಹೊರದಬ್ಬುವ ವೀಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮಾತನಾಡಿ, ಚುನಾವಣೆಗೂ ಮುನ್ನ ಪಂಜಾಬ್‍ನ ಶಾಂತಿಯನ್ನು ಹಾಳು ಮಾಡಲು ಕಿಡಿಗೇಡಿಗಳು ಯತ್ನಿಸಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪ್ರತಿಯೊಬ್ಬರು ಸಮಾಜದ ಶಾಂತಿಯನ್ನು ಕಾಪಾಡಿ ಎಂದು ಮನವಿ ಮಾಡಿದ್ದಾರೆ.

ಘಟನೆ ಕುರಿತು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಪ್ರತಿಕ್ರಿಯಿಸಿದ್ದಾರೆ.

ಅಮರಿಂದರ್ ಸಿಂಗ್ ಮಾತನಾಡಿ, ಪಂಜಾಬ್‍ನಲ್ಲಿ ಶಾಂತಿ ಕದಡುವ ಈ ರೀತಿಯ ಪ್ರಯತ್ನಗಳನ್ನು ಎಂದಿಗೂ ಸಹಿಸಲಾಗುವುದಿಲ್ಲ. ರಾಜ್ಯದಲ್ಲಿ ವಾತಾವರಣಕ್ಕೆ ಧಕ್ಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಹಿಂದೂಗಳ ಮತ್ತು ಸಿಖ್ ದೇಗುಲಗಳ ನಡುವೆ ಕೋಮು ದ್ವೇಷವನ್ನು ಹರಡಲು ಪಂಜಾಬ್‍ನ ಹೊರಗಿನವರು ಈ ರೀತಿ ಪಿತೂರಿ ನಡೆಸುತ್ತಿದ್ದಾರೆ ಎಂದು ಸುಖಬೀರ್ ಬಾದಲ್ ಆರೋಪಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಚುನಾವಣೆ: ರಾಮನಗರದಿಂದ ಮಾಜಿ ಸಿಎಂ ಹರೀಶ್ ರಾವತ್ ಕಣಕ್ಕೆ

ಘಟನೆ ಕುರಿತು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕು. ಪಂಜಾಬ್‍ನಲ್ಲಿ ಶಾಂತಿ ಕದಡಲು ಹಲವಾರು ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

ಈ ಪ್ರಯತ್ನ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಘಟನೆ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *