ಹಿಮಾಚಲ ಪ್ರದೇಶಕ್ಕೆ ಮತ್ತೆ ರೆಡ್ ಅಲರ್ಟ್ – ಭಾರೀ ಮಳೆ, ಭೂಕುಸಿತ, ಹಠಾತ್ ಪ್ರವಾಹ ಸಾಧ್ಯತೆ

Public TV
2 Min Read

– ಪಂಜಾಬ್, ಹಿಮಾಚಲ, ಉತ್ತರಾಖಂಡಕ್ಕೆ ರೆಡ್‌ ಅಲರ್ಟ್ ನೀಡಿದ ಹವಾಮಾನ ಇಲಾಖೆ
– ಭಾರೀ ಮಳೆ, ಪ್ರವಾಹ ಹಿನ್ನೆಲೆ ಪಂಜಾಬ್‌ನ ಎಲ್ಲ ವಿವಿಗಳು, ಕಾಲೇಜುಗಳಿಗೆ ಸೆ.3ರವರೆಗೆ ರಜೆ

ಶಿಮ್ಲಾ: ಪಂಜಾಬ್ (Punjab), ಹಿಮಾಚಲ (Himachal), ಉತ್ತರಾಖಂಡದಲ್ಲಿ (Uttarakhand) ಭಾರೀ (Rain) ಮಳೆಯಾಗುತ್ತಿದ್ದು, ಮತ್ತೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಹಿಮಾಚಲ ಪ್ರದೇಶದ ಆರು ಜಿಲ್ಲೆಗಳಾದ ಉನಾ, ಹಮೀರ್‌ಪುರ, ಬಿಲಾಸ್‌ಪುರ, ಕಾಂಗ್ರಾ, ಮಂಡಿ ಮತ್ತು ಸಿರ್ಮೌರ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಹಲವಾರು ಭಾಗಗಳಲ್ಲಿ ಭೂಕುಸಿತ ಸಂಭವಿಸಿದ್ದು ಹಲವಾರು ಮನೆಗಳಿಗೂ ಹಾನಿಯಾಗಿದೆ.

ಭಾರೀ ಮಳೆಯಿಂದ ಹಿಮಾಚಲ ಪ್ರದೇಶದ ಹಲವೆಡೆ ಹಾನಿಯಾಗಿದೆ. ಇಲ್ಲಿಯವರೆಗೆ ಭೂಕುಸಿತದಿಂದ ಐದು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಇತರ 788 ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. 2100ಕ್ಕೂ ಹೆಚ್ಚು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. 365 ಕುಡಿಯುವ ನೀರಿನ ಟ್ಯಾಂಕ್‌ ಹಾಗೂ ಇನ್ನಿತರ ಮೂಲಗಳಿಗೆ ಸಮಸ್ಯೆಯಾಗಿದೆ.

ಶಿಮ್ಲಾ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಮನೆಗಳು ಕುಸಿದು ಕಳೆದ 24 ಗಂಟೆಯಲ್ಲಿ 4 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿಗೀಡಾದವರ ಸಂಖ್ಯೆ 320ಕ್ಕೆ ಏರಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿಗಳು ಮತ್ತು ಹೊಳೆಗಳ ಸಮಿಪದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಬರುವಂತೆ ಎಚ್ಚರಿಕೆ ನೀಡಲಾಗಿದೆ.

ಉತ್ತರಾಖಂಡದಲ್ಲಿ, ಕಳೆದ 48 ಗಂಟೆಗಳಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ, ನದಿಗಳು ಮತ್ತು ಹೊಳೆಗಳ ನೀರಿನ ಮಟ್ಟ ಹೆಚ್ಚಾಗಿದೆ. ರಾಜ್ಯದ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಉಳಿದ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮುಂದಿನ 5 ದಿನಗಳವರೆಗೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಪಂಜಾಬ್‌ನ ಎಲ್ಲಾ ವಿವಿಗಳು, ಕಾಲೇಜುಗಳಿಗೆ ರಜೆ ಘೋಷಣೆ
ಪಂಜಾಬ್‌ನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಎಲ್ಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸೆಪ್ಟೆಂಬರ್ 3ರವರೆಗೆ ರಜೆ ಘೋಷಣೆ ಮಾಡಲಾಗಿದೆ.

ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳ ಸುರಕ್ಷತೆಯ ಜವಾಬ್ದಾರಿ ಅಲ್ಲಿನ ಆಡಳಿತ ಮಂಡಳಿ ಮೇಲಿದೆ. ಸ್ಥಳೀಯ ಅಧಿಕಾರಿಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಗುರುದಾಸ್ಪುರ್, ಹೋಶಿಯಾರ್ಪುರ್, ಕಪುರ್ತಲಾ, ಜಲಂಧರ್, ಪಟಿಯಾಲ ಮತ್ತು ನವಾಶಹರ್‌ನಲ್ಲಿ ಭಾರಿ ಮಳೆಯ ಸಾಧ್ಯತೆ ಇದ್ದು, ರೆಡ್ ಅಲರ್ಟ್ ನೀಡಲಾಗಿದೆ ಮತ್ತು ಇತರ ಜಿಲ್ಲೆಗಳಿಗೆ ಅರೆಂಜ್‌ ಮತ್ತು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

Share This Article