ಮತ್ತೆ ಅಧಿಕಾರಕ್ಕೆ ಬಂದರೆ 1 ಲಕ್ಷ ಉದ್ಯೋಗ: ಸಿಎಂ ಚನ್ನಿ ಭರವಸೆ

Public TV
2 Min Read

ಚಂಡೀಗಢ: ಮತದಾನಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಪಂಜಾಬ್‍ನಲ್ಲಿ ಚುನಾವಣೆ ಕಾವು ಜೋರಾಗಿದ್ದು, ಮತದಾರರನ್ನು ಓಲೈಸಲು ಹಲವು ಭರಪೂರ ಕೊಡುಗೆಗಳನ್ನು ಘೋಷಿಸಲಾಗುತ್ತಿದೆ. ಇದೇ ಹಾದಿಯಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಚಿತ ಕೊಡುಗೆಗಳ ಭರವಸೆ ನೀಡಿದ್ದಾರೆ.

ಇಂದು ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪಂಜಾಬ್‍ನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 1 ಲಕ್ಷ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಆರು ತಿಂಗಳಲ್ಲಿ ಬಡವರಿಗೆ ವಸತಿ ಕಲ್ಪಿಸುವುದಾಗಿ ಘೋಷಿಸಿದ್ದಾರೆ. ನಾವು ಶಿಕ್ಷಣ, ಆರೋಗ್ಯ ಮತ್ತು ವಸತಿಗಳಲ್ಲಿ ಕ್ಷೇತ್ರದಲ್ಲಿ ಕೇಂದ್ರಿಕರಿಸಲಿದ್ದು, ಸಣ್ಣ ಉದ್ಯಮಿಗಳಿಗೂ ತೇರಿಗೆ ರಿಯಾಯಿತಿ ನೀಡುತ್ತೇವೆ, ಮಹಿಳೆಯರ ಅಭ್ಯುದಯಕ್ಕಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ಎಂದು ಚನ್ನಿ ಟ್ವೀಟ್ ಮಾಡಿದ್ದಾರೆ.

ಆಟಾ – ದಾಲ್ ( ಹಿಟ್ಟು – ಬೇಳೆ ) ಹೊಟ್ಟೆಯನ್ನು ಮಾತ್ರ ತುಂಬಿಸುತ್ತದೆ. ಪಂಜಾಬಿನ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯವಾಗಿದೆ. ಆದರೆ ಖಾಸಗಿ ಸಂಸ್ಥೆಗಳಲ್ಲಿ ಓದುವುದು ತುಂಬಾ ದುಬಾರಿಯಾಗಿದ್ದು, ಪೋಷಕರು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ನಾವು ವಿದ್ಯಾವಂತರಾಗಿದ್ದೇವೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಉಚಿತ ಗುಣಮಟ್ಟದ ಶಿಕ್ಷಣ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಅಕಾಲಿ ಸರ್ಕಾರದ ಅವಧಿಯಲ್ಲಿ ರದ್ದುಪಡಿಸಿದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆಗಳನ್ನು ಮರುಪ್ರಾರಂಭಿಸಲಾಗುವುದು. ಸಾಮಾನ್ಯ ವರ್ಗದ ಬಡ ವಿದ್ಯಾರ್ಥಿಗಳು ಮತ್ತು ರೈತ ಕುಟುಂಬದಿಂದ ಬಂದವರು ಸಹ ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ. ಶುಲ್ಕದ ಮೇಲೆ ಕಡಿಮೆ ನಿಬಂಧನೆಗಳು ಇರುತ್ತವೆ ಎಂದು ಚನ್ನಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಒಡಹುಟ್ಟಿದವರೇ ಕಾಂಗ್ರೆಸ್‌ ನಾಶ ಮಾಡ್ತಾರೆ, ಚಿಂತಿಸಬೇಡಿ: ಯೋಗಿ ಆದಿತ್ಯನಾಥ್‌

ಯುವಕರಿಗೆ ಉದ್ಯೋಗದ ಭರವಸೆ ನೀಡಿರುವ ಅವರು, ಪ್ರತಿಯೊಬ್ಬ ಯುವಕರು ಉದ್ಯೋಗವನ್ನು ಹೊಂದಿರಬೇಕು, ಇದಕ್ಕಾಗಿ ಸರ್ಕಾರ ಸಾಲ ನೀಡಲಿದೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಹೊಂದಿರುವವರಿಗೆ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಅಥವಾ ಕೆಲಸ ಮಾಡಲು ಬಯಸುವವರಿಗೆ ಖಾತರಿ ಯೋಜನೆಯನ್ನು ಪರಿಚಯಿಸುತ್ತೇವೆ. ಅಂತಹ ಅಭ್ಯರ್ಥಿಗಳ ವಿದೇಶಿ ಪ್ರಯಾಣಕ್ಕೆ ಅನುಕೂಲವಾಗುವ ಯೋಜನೆಗಳನ್ನು ಸಹ ಪರಿಚಯಿಸಲಾಗುವುದು ಎಂದರು. ಇದನ್ನೂ ಓದಿ: ಹಿಜಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಕಲಬುರಗಿ ಕಾಂಗ್ರೆಸ್‍ ಶಾಸಕಿ

ನನಗೆ ಮೂರು ತಿಂಗಳು ಮಾತ್ರ ಸಿಕ್ಕಿತು. ಆದರೆ ಐದು ವರ್ಷ ಸಿಕ್ಕರೆ ಒಂದು ಲಕ್ಷ ಉದ್ಯೋಗ ಮಂಜೂರು ಮಾಡುತ್ತೇನೆ, ವಿದೇಶಿ ಆಸ್ಪತ್ರೆಗಳಲ್ಲಿ ಒದಗಿಸುವ ಸೌಲಭ್ಯಗಳ ಮಾದರಿಯಲ್ಲಿ ನಾವು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುತ್ತೇವೆ, ಆರು ತಿಂಗಳಲ್ಲಿ, ಪ್ರತಿಯೊಬ್ಬ ಬಡವನ ತಲೆಯ ಮೇಲೆ ಗಟ್ಟಿಯಾದ ಸೂರು ಇರುವುದನ್ನು ನಾನು ಖಚಿತಪಡಿಸುತ್ತೇನೆ. ಇದು ನನ್ನ ಬದ್ಧತೆ ಎಂದು ಅವರು ಟ್ವಿಟ್ ನಲ್ಲಿ ವಿವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *