ಚಂಡೀಗಢ: ಬಸ್ ಚಾಲನೆ ಮಾಡುತ್ತಲೇ ಟಿಕ್‍ಟಾಕ್ ವಿಡಿಯೋ ಮಾಡಿಕೊಂಡಿದ್ದ ಚಾಲಕನನ್ನು ಕೆಲಸದಿಂದ ಅಮಾನತುಗೊಳಿಸಿದ ಘಟನೆ ಪಂಜಾಬ್‍ನಲ್ಲಿ ನಡೆದಿದೆ.
ಅಮನ್ ಜೋತ್ ಬ್ರಾರ್ ಅಮಾನತುಗೊಂಡ ಚಾಲಕ. ಅಮನ್ ಜೋತ್ ಬ್ರಾರ್ ಪಂಜಾಬ್ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಜಲಂಧರ್ ನಿಂದ ದೆಹಲಿಗೆ ಜುಲೈ 7ರಂದು ತೆರಳುತ್ತಿದ್ದಾಗ ಟಿಕ್‍ಟಾಕ್ ವಿಡಿಯೋ ಹುಚ್ಚಿಗೆ ಬಿದ್ದು ಕೆಲಸ ಕಳೆದುಕೊಂಡಿದ್ದಾನೆ.
ಆಗಿದ್ದೇನು?:
ಚಾಲಕ ಅಮನ್ ಜೋತ್ ಬ್ರಾರ್ ಜಲಂಧರ್ ನಿಂದ ದೆಹಲಿಗೆ ಪ್ರಯಾಣಿಕರಿದ್ದ ಬಸ್ ಚಾಲನೆ ಮಾಡುತ್ತಿದ್ದ. ಈ ವೇಳೆ ನಿದ್ದೆ ಮಾಡದಂತೆ ಎಚ್ಚರವಹಿಸಲು ಪ್ಲೇಯರ್ ನಲ್ಲಿ ಹಾಡುಗಳನ್ನು ಹಾಕಿಕೊಂಡು ತಾನೂ ಹಾಡುತ್ತಾ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ. ಟಿಕ್‍ಟಾಕ್ ಸಾಮಾಜಿಕ ಜಾಲತಾಣದ ಬಗ್ಗೆ ನೆನಪಾಗಿ, ಬಸ್ ಚಾಲನೆ ಮಾಡುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಅದನ್ನು ಟಿಕ್‍ಟಾಕ್‍ನಲ್ಲಿ ಅಪ್ಲೋಡ್ ಮಾಡಿ ಜನಪ್ರಿಯತೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದ.
God save us from #TikTok craze – Punjab Roadways bus driver makes a video while driving and uploads on social media. After the video surfaced, driver has been suspended. pic.twitter.com/A3vsVi7m7f
— Kirandeep (@raydeep) July 11, 2019
ಅಮನ್ ಜೋತ್ ಬ್ರಾರ್ ವಿಡಿಯೋಗೆ ಅಷ್ಟಾಗಿ ಲೈಕ್, ಕಮೆಂಟ್ಸ್ ಸಿಕ್ಕಿಲ್ಲ. ಆದರೆ ದುರದೃಷ್ಟಕ್ಕೆ ವಿಡಿಯೋವನ್ನು ಪಂಜಾಬ್ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ನೋಡಿದ್ದಾರೆ. ಪರಿಣಾಮ ಚಾಲಕನ ಮೇಲೆ ಕಿಡಿಕಾರಿದ ಅಧಿಕಾರಿಗಳು, ಬಸ್ ಚಾಲನೆ ಮಾಡುತ್ತಲೇ ಅಮನ್ ಜೋತ್ ಬ್ರಾರ್ ಟಿಕ್‍ಟಾಕ್ ವಿಡಿಯೋ ಮಾಡಿಕೊಂಡಿದ್ದಾನೆ. ಈ ಮೂಲಕ ಪ್ರಯಾಣಿಕರ ಪ್ರಾಣದ ಜೊತೆಗೆ ಆಟವಾಡಿದ್ದಾನೆ ಎಂದು ಆರೋಪಿಸಿ ಕೆಲಸದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ ಅಮನ್ ಜೋತ್ ಬ್ರಾರ್ ನನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.