ಪಂಜಾಬ್‌ನಲ್ಲಿ ರೈತರಿಂದ ಬಂದ್ – 221 ರೈಲುಗಳ ಸಂಚಾರ ವ್ಯತ್ಯಯ – 163 ರೈಲುಗಳು ಕ್ಯಾನ್ಸಲ್

Public TV
1 Min Read

– ರಸ್ತೆಗಳನ್ನು ಬ್ಲಾಕ್ ಮಾಡಿ ರೈತರ ಆಕ್ರೋಶ

ಚಂಡೀಗಢ: ಪಂಜಾಬ್‌ನಲ್ಲಿ (Punjab) ನಡೆದ ರೈತರ ಪ್ರತಿಭಟನೆ (Farmer Protest) ಹಿನ್ನೆಲೆ ಇಂದು 221 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, 163 ರೈಲುಗಳನ್ನು ರದ್ದುಗೊಳಿಸಲಾಗಿತ್ತು.

ಇಂದು (ಡಿ.30) ಪಂಜಾಬ್‌ನಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಕಿಸಾನ್ ಮಜ್ದೂರ್ ಮೋರ್ಚಾ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಪಂಜಾಬ್ ಬಂದ್‌ಗೆ ಕರೆ ನೀಡುವ ಮೂಲಕ ಬೆಳಿಗ್ಗೆ 7 ರಿಂದ ಸಂಜೆ 4 ಗಂಟೆಯವರೆಗೆ ಪ್ರತಿಭಟನೆ ನಡೆಸಿದರು. ಜೊತೆಗೆ `ರೈಲ್ ರೋಕೊ’ ಪ್ರತಿಭಟನೆಯಿಂದಾಗಿ ಈ ಅಡಚಣೆಗಳು ಉಂಟಾಗಿವೆ.ಇದನ್ನೂ ಓದಿ: ಸಿಂಗ್ ಶೋಕಾಚರಣೆ ವೇಳೆ ರಾಹುಲ್ ವಿಯೆಟ್ನಾಂ ಪ್ರವಾಸ – ಬಿಜೆಪಿ ಆರೋಪಕ್ಕೆ ಕಾಂಗ್ರೆಸ್‌ ಗರಂ

ಪ್ರತಿಭಟನೆ ಹಿನ್ನೆಲೆ ಫಿರೋಜ್‌ಪುರ ಮತ್ತು ಅಂಬಾಲಾ ವಿಭಾಗೀಯ ರೈಲ್ವೆ ಕಚೇರಿಗಳ ವರದಿ ಪ್ರಕಾರ, ಪಂಜಾಬ್ ಮೂಲಕ ಹಾಯ್ದು ಹೋಗುವ ಹಾಗೂ ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಿಗೂ ಸಂಪರ್ಕಿಸುವ ರೈಲುಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ದೆಹಲಿ ಮತ್ತು ಪಂಜಾಬ್ ನಡುವೆ ಕಾರ್ಯನಿರ್ವಹಿಸುವ ಶತಾಬ್ದಿ, ವಂದೇ ಭಾರತ್ ಸೇರಿದಂತೆ ಒಟ್ಟು 163 ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ಒಟ್ಟು 221 ರೈಲುಗಳ ಸಂಚಾರದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಮಾಹಿತಿ ನೀಡಿದೆ.

ಇವುಗಳ ಜೊತೆಗೆ, ಪ್ಯಾಸೆಂಜರ್, ಎಕ್ಸ್ಪ್ರೆಸ್ ಮತ್ತು ಇಂಟರ್‌ಸಿಟಿ ರೈಲುಗಳ ಮೇಲೆಯೂ ಸಹ ಪರಿಣಾಮ ಬೀರುತ್ತವೆ. ಪಂಜಾಬ್, ಹರಿಯಾಣ ಮತ್ತು ಚಂಡೀಗಢದಲ್ಲಿ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದರಿಂದಾಗಿ ನಿಲ್ದಾಣಗಳಲ್ಲಿ ಸಹಾಯ ಕೇಂದ್ರಗಳು ಹಾಗೂ ಪ್ರಮುಖ ನಿಲ್ದಾಣಗಳಲ್ಲಿ ಹೆಚ್ಚುವರಿ ಟಿಕೆಟ್ ಕೌಂಟರ್‌ಗಳ ಸ್ಥಾಪನೆ, ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲು ಮೇಲ್ವಿಚಾರಕರು ಮತ್ತು ವಾಣಿಜ್ಯ ನಿರೀಕ್ಷಕರು ಗೊತ್ತುಮಾಡಲಾಗುವುದು ಎಂದು ಡಿಆರ್‌ಎಂ ಫಿರೋಜ್‌ಪುರ ಕಚೇರಿ ತಿಳಿಸಿತ್ತು.

ರೈಲು ಸೇವೆಗಳು ಸಂಜೆ 4ರ ನಂತರ ಎಂದಿನಂತೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದರು.ಇದನ್ನೂ ಓದಿ: ಹೊಸ ವರ್ಷಾಚರಣೆ ಆಹ್ವಾನಿತರಿಗೆ ಈ ಪಬ್‌ನಲ್ಲಿ ಕಾಂಡೋಮ್‌, ಒಆರ್‌ಎಸ್‌ ಗಿಫ್ಟ್‌ – ಕಾಂಗ್ರೆಸ್‌ ದೂರು

Share This Article