ಮಾಯಾಬಜಾರ್​ನಲ್ಲಿ ಕುಣಿಯಲು ರೆಡಿಯಾದ ಯುವರತ್ನ!

Public TV
1 Min Read

ಬೆಂಗಳೂರು: ಸಂತೋಷ್ ಆನಂದ್‍ರಾಮ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕಾಂಬಿನೇಷನ್ನಿನ ಎರಡನೇ ಚಿತ್ರ ಯುವರತ್ನ. ರಾಜಕುಮಾರದಂಥಾ ಸೂಪರ್ ಹಿಟ್ ಸಿನಿಮಾ ಕೊಟ್ಟಿರೋ ಈ ಜೋಡಿಯ ಈ ಎರಡನೇ ಸಿನಿಮಾ ಬಗ್ಗೆ ಸಹಜವಾಗಿಯೇ ಭಾರೀ ನಿರೀಕ್ಷೆಗಳು ಮೂಡಿಕೊಂಡಿವೆ. ಇದೀಗ ಯುವರತ್ನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರೋ ಪುನೀತ್ ರಾಜ್ ಕುಮಾರ್ ಇದರ ನಡುವೆಯೇ ಬೇರೆ ಸಿನಿಮಾಗಳಿಗೆ ಸಪೋರ್ಟು ಮಾಡೋದು ಸೇರಿದಂತೆ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆ ಜೊತೆಗೇ ಮಾಯಾಬಜಾರ್ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಅದರಲ್ಲೊಂದು ಅತಿಥಿ ಪಾತ್ರವನ್ನು ನಿರ್ವಹಿಸಲೂ ತಯಾರಾಗಿದ್ದಾರೆ.

ಪಿಆರ್ ಕೆ ಬ್ಯಾನರ್ ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರೋ ಎರಡನೇ ಚಿತ್ರ ಮಾಯಾಬಜಾರ್. ಈ ಚಿತ್ರದ ಪ್ರತಿಯೊಂದು ವಿಚಾರದಲ್ಲಿಯೂ ಗಮನ ಹರಿಸಿಯೇ ಪುನೀತ್ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿರೋ ಈ ಚಿತ್ರದಲ್ಲಿ ಬೃಹತ್ ತಾರಾಗಣವೇ ಇದೆ. ರಾಜ್ ಬಿ ಶೆಟ್ಟಿ, ವಸಿಷ್ಟ ಸಿಂಹ, ಪ್ರಕಾಶ್ ರಾಜ್ ಸೇರಿದಂತೆ ಅನೇಕರು ಇದರಲ್ಲಿ ನಟಿಸಿದ್ದಾರೆ. ಈಗಾಗಲೇ ಹೊರಬಿದ್ದಿರೋ ಒಂದಷ್ಟು ವಿವರಗಳಿಂದಾಗಿ ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಿರೋ ಈ ಚಿತ್ರದ ಹಾಡೊಂದರಲ್ಲಿ ಪುನೀತ್ ನಟಿಸಲಿದ್ದಾರಂತೆ.

ಸಮಯ ಸಿಕ್ಕರೂ, ಸಮಯದ ಅಭಾವವಿದ್ದರೂ ಸದಾ ಬೇರೆಯವರ ಚಿತ್ರಗಳಿಗೆ ತಮ್ಮದೇ ರೀತಿಯಲ್ಲಿ ಸಾಥ್ ಕೊಡುವವರು ಪುನೀತ್. ಹಾಗಿದ್ದ ಮೇಲೆ ತಾವೇ ನಿರ್ಮಾಣ ಮಾಡುತ್ತಿರೋ ಈ ಚಿತ್ರದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ನಟಿಸುತ್ತಿರೋದು ಅಚ್ಚರಿಯ ವಿಚಾರವೇನಲ್ಲ. ಆದರೆ ಈ ಹಾಡನ್ನು ಎಲ್ಲರೂ ಬೆರಗಾಗುವಂತೆ ರೂಪಿಸುವ ಸಲುವಾಗಿ ಚಿತ್ರತಂಡ ಶ್ರಮ ವಹಿಸುತ್ತಿದೆ. ಈ ವಿಶೇಷವಾದ ಹಾಡಿಗೆ ನೃತ್ಯ ನಿದೇಶನ ಮಾಡೋ ಜವಾಬ್ದಾರಿಯನ್ನು ಎ ಹರ್ಷ ವಹಿಸಿಕೊಂಡಿದ್ದಾರೆ. ಇಷ್ಟರಲ್ಲಿಯೇ ಪುನೀತ್ ಯುವರತ್ನ ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಈ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *