ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್

Public TV
2 Min Read

– ನಗುವಿನ ಶ್ರೀಮಂತನಿಗೆ ಕಣ್ಣೀರ ವಿದಾಯ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಇಂದು ಬೆಳಗ್ಗೆ 7.40ರ ಸುಮಾರಿಗೆ ಕಂಠೀರವ ಸ್ಟುಡಿಯೋದಲ್ಲಿ ಈಡಿಗ ಸಂಪ್ರದಾಯದಂತೆ ನಡೆಯಿತು.

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು. ಮೂರು ಬಾರಿ ಕುಶಾಲು ತೋಪು ಸಿಡಿಸಿ ಅಪ್ಪುಗೆ ಗೌರವ ಸಲ್ಲಿಸಲಾಯಿತು. ವಿನಯ್ ರಾಜ್ ಕುಮಾರ್ ಅವರು ಮೂರು ಸುತ್ತು ಸಮಾಧಿ ಸುತ್ತಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ನಂತರ ರಥದಲ್ಲಿ ಪುನೀತ್ ಶವವವನ್ನು ಮಲಗಿಸಿ ಪೂಜೆ ಸಲ್ಲಿಸಲಾಯಿತು. ಇದಾದ ಬಳಿಕ ಮೃತದೇಹವನ್ನು ಗುಂಡಿಗೆ ಇಳಿಸಿ ಅಲ್ಲಿ ಕೆಲವೊಂದು ವಿಧಿವಿಧಾನಗಳು ನಡೆದ ನಂತರ ಅಪ್ಪುವನ್ನು ಮಣ್ಣಲ್ಲಿ ಮಣ್ಣು ಮಾಡಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು.

ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.

ಸಂಜೆಯ ವೇಳೆ ಅಪ್ಪು ಮೃತದೇಹವನ್ನು ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಕುಟುಂಬಸ್ಥರಿಂದ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಕಂಠೀರ ಸ್ಟೇಡಿಯಂನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಶುಕ್ರವಾರ ಮಧ್ಯರಾತ್ರಿಯಿಂದ ಇಂದು ಬೆಳಗ್ಗಿನ ಜಾವದವರೆಗೂ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ನೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸಿದರು.

ಇಂದು ಮುಂಜಾನೆ 4.28ಕ್ಕೆ ಕಂಠೀರವ ಸ್ಟೇಡಿಯಂಗೆ ಸಿಎಂ ಆಗಮಿಸಿ, 4.34ಕ್ಕೆ ವೇದಿಕೆ ಬಳಿ ತೆರಳಿ ಶಿವಣ್ಣ ಜೊತೆ ಮಾತುಕತೆ ನಡೆಸಿದರು. ನಂತರ ಪುನೀತ್ ಗೆ ಅಂತಿಮ ನಮನ ಸಲ್ಲಿಸಿ ಹಣೆಗೆ ಮುತ್ತಿಟ್ಟು ಕಣ್ಣೀರು ಸುರಿಸಿದರು. ಬಳಿಕ 4.43ಕ್ಕೆ ಅಂತಿಮ ಯಾತ್ರೆ ಆರಂಭವಾಯಿತು. ಅಂತಿಮ ಯಾತ್ರೆ ವೇಳೆ ಒಟ್ಟು 10 ಪೊಲೀಸ್ ಬೈಕ್ ಗಳ ಎಸ್ಕಾರ್ಟ್ ನಿಯೋಜನೆ ಮಾಡಲಾಗಿತ್ತು. 5.30ಕ್ಕೆ ಯಶವಂತುರದಿಂದ ಮೃತದೇಹ ಪಾಸ್ ಆಗಿದ್ದು, 5.44ಕ್ಕೆ ಸ್ಟುಡಿಯೋಗೆ ತಲುಪಿತು. 5.52ಕ್ಕೆ ತೆರೆದ ವಾಹನದಿಂದ ಪುನೀತ್ ಮೃತದೇಹ ಇಳಿಸಿದ್ದು, 6.10ಕ್ಕೆ ಸಿಎಂ ಆಗಮಿಸಿದರು. 6.17 ಕ್ಕೆ ಸರ್ಕಾರದಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಪುನೀತ್ ಅವರನ್ನು ಮಣ್ಣು ಮಾಡಲಾಯಿತು. ಇದನ್ನೂ ಓದಿ: ಅಪ್ಪು ಹಣೆಗೆ ಮುತ್ತಿಟ್ಟು ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

Share This Article
Leave a Comment

Leave a Reply

Your email address will not be published. Required fields are marked *