ಮುಂಬೈ: ಕೇವಲ 11 ದಿನಗಳಲ್ಲಿ ಹಣವನ್ನು ಡಬಲ್ ಮಾಡಿಕೊಳ್ಳುವ ಆಸೆಗೆ ಬಿದ್ದು ಪುಣೆಯ (Pune) ವೈದ್ಯರೊಬ್ಬರು 12 ಕೋಟಿ ರೂ. ಕಳೆದುಕೊಂಡಿದ್ದಾರೆ.
75 ವರ್ಷದ ವೈದ್ಯರೊಬ್ಬರಿಗೆ ಸೈಬರ್ ವಂಚಕರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ಕೇವಲ 11 ದಿನಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿ 12.31 ಕೋಟಿ ರೂ. ವಂಚಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥನ ಸಹಾಯಕ ಮಟಾಶ್
ವಂಚಕರು ವೃದ್ಧನಿಗೆ ತಮ್ಮ ಮೂಲಕ ಮಾಡಿದ ಹೂಡಿಕೆಯಿಂದ 11 ದಿನಗಳಲ್ಲಿ 54 ಕೋಟಿ ರೂ.ಗಳಷ್ಟು ಲಾಭ ಸಿಗುತ್ತದೆ ಎಂದು ಭರವಸೆ ನೀಡಿದ್ದರು. ಲಾಭದ ಭರವಸೆಯನ್ನು ನಂಬಿ ವೈದ್ಯ ಹಂತಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ವೈದ್ಯನನ್ನು ‘ವಿಐಪಿ ಸ್ಟಾಕ್ 24’ ಎಂಬ ವಾಟ್ಸಾಪ್ ಗ್ರೂಪ್‌ಗೆ ಸೈಬರ್ ವಂಚಕರು ಸೇರಿಸುತ್ತಾರೆ. ಆ ಗ್ರೂಪ್ ಮೂಲಕ ಆರೋಪಿಗಳು ಆಕರ್ಷಕ ಮತ್ತು ಲಾಭದಾಯಕ ಎಂಬಂತೆ ಹೂಡಿಕೆಗಳ ಕುರಿತು ಮಾಹಿತಿ ಹಂಚಿಕೊಳ್ತಾರೆ. ನಮ್ಮ ಸೂಚನೆಗಳನ್ನು ನಿಖರವಾಗಿ ಪಾಲಿಸಿದರೆ, ಹಣ ಕೇವಲ 11 ದಿನಗಳಲ್ಲಿ ಡಬಲ್ ಆಗುತ್ತದೆ ಎಂದು ಆಸೆ ತೋರಿಸಿದ್ದರು.
ವೈದ್ಯನ ವೈಯಕ್ತಿಕ ಮತ್ತು ಆರ್ಥಿಕ ವಿವರಗಳನ್ನು ಹಂಚಿಕೊಳ್ಳಲು ಕೇಳಲಾಯಿತು. ನಂತರ ಬಹು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಸೂಚಿಸಲಾಯಿತು. ಅವರು ಕಳುಹಿಸಿದ ಮೊತ್ತವನ್ನು ನಕಲಿ ಅಪ್ಲಿಕೇಶನ್‌ನಲ್ಲಿ ಹೂಡಿಕೆಗಳಾಗಿ ತೋರಿಸಲಾಗಿದೆ. ಮಾರ್ಚ್ 7 ರಿಂದ ಮಾರ್ಚ್ 18 ರ ನಡುವೆ ವೈದ್ಯ ಎಂಟು ಹಣಕಾಸಿನ ವಹಿವಾಟುಗಳನ್ನು ನಡೆಸಿದ್ದಾರೆ. ಒಟ್ಟು 12.31 ಕೋಟಿ ರೂ. ಹಣವನ್ನು ಸೈಬರ್ ವಂಚಕರು ದೋಚಿದ್ದಾರೆ.
ಹೂಡಿಕೆ ಹಣ ವಾಪಸ್ ಪಡೆಯಲು ಮುಂದಾದಾಗ, ವೈದ್ಯನ ಆಸ್ತಿ ವಶಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಮತ್ತಷ್ಟು ಹಣ ಹೂಡುವಂತೆ ಒತ್ತಾಯಿಸಿದ್ದಾರೆ. ಸುಮಾರು ಮೂರು ತಿಂಗಳ ಅವಧಿಯಲ್ಲಿ ವೈದ್ಯನಿಂದ ಹಣವನ್ನು ಹೂಡಿಕೆ ಮಾಡಿಸಲಾಗಿದೆ. ವಂಚನೆ ಬಗ್ಗೆ ತಿಳಿದು ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ – ಆಂಧ್ರ ದತ್ತಿ ಇಲಾಖೆ ಅಧಿಕಾರಿ ಬಂಧನ
ದೂರಿನ ಆಧಾರದ ಮೇಲೆ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಜಾಡನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

