ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ

Public TV
2 Min Read

ಇಸ್ಲಾಮಾಬಾದ್: ಕೋವಿಡ್-19 ವೈರಸ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಹಣ ಸಂಗ್ರಹಿಸಲು ಪಾಕಿಸ್ತಾನ ಟೆಸ್ಟ್ ನಾಯಕ ಅಜರ್ ಅಲಿ ಅವರು ಹರಾಜಿಗೆ ಇಟ್ಟಿದ್ದ ಬ್ಯಾಟ್ ಅನ್ನು ಪುಣೆ ಸಂಸ್ಥೆಯೊಂದು 8 ಕೋಟಿ ರೂ.ಗೆ ಖರೀದಿಸಿದೆ.

ಅಜರ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 302 ರನ್ ಗಳಿಸಲು ಬಳಸಿದ ಬ್ಯಾಟ್ ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಧರಿಸಿದ್ದ ಜರ್ಸಿಯನ್ನು ಆನ್‍ಲೈನ್‍ನಲ್ಲಿ ಹರಾಜಿಗೆ ಇಟ್ಟಿದ್ದರು. ಈ ಮೂಲಕ ಹಣವನ್ನು ಸಂಗ್ರಹಿಸಿ ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಡುತ್ತಿರುವವರ ಸಹಾಯಕ್ಕೆ ಮುಂದಾಗಿದ್ದರು.

ಪಾಕ್ ಆಟಗಾರ ಅಜರ್ ಅಲಿ ಅವರು ಬ್ಯಾಟ್ ಮತ್ತು ಜರ್ಸಿ ಎರಡಕ್ಕೂ ಪಾಕಿಸ್ತಾನ ತಂಡದ ಆಟಗಾರರ ಆಟೋಗ್ರಾಫ್ ಹಾಕಿಸಿದ್ದರು. ಬ್ಯಾಟ್ ಜರ್ಸಿಗಾಗಿ ತಲಾ 10 ಲಕ್ಷ ಪಾಕಿಸ್ತಾನ ರೂ. ಮೂಲ ಬೆಲೆಯನ್ನು ನಿಗಧಿಪಡಿಸಿದ್ದರು.

ಪುಣೆ ಮೂಲದ ಬ್ಲೇಡ್ಸ್ ಆಫ್ ಗ್ಲೋರಿ ಕ್ರಿಕೆಟ್ ಮ್ಯೂಸಿಯಂ ಬ್ಯಾಟ್‍ಗೆ 7 ಕೋಟಿ ರೂ. ನೀಡುವ ಮೂಲಕ ಖರೀದಿಸಿದೆ. ಶರ್ಟ್ ಹರಾಜು ಕೂಡ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಕ್ಯಾಲಿಫೋರ್ನಿಯಾ ಮೂಲದ ಪಾಕಿಸ್ತಾನಿ ಕಾಶ್ ವಿಲ್ಲಾನಿ ಹರಾಜು ಮುಗಿಯುವ ಮುನ್ನ ಶರ್ಟ್ ಗಾಗಿ ಅತಿ ಹೆಚ್ಚು 8.30 ಕೋಟಿ ರೂ. ಬಿಡ್‍ನೊಂದಿಗೆ ಖರೀದಿಸಿದೆ.

ಕೊರೊನಾ ವೈರಸ್ ವಿರುದ್ಧದ ಅಜರ್ ಅಲಿ ಹೋರಾಟಕ್ಕೆ ನ್ಯೂಜೆರ್ಸಿಯಲ್ಲಿರುವ ಪಾಕಿಸ್ತಾನದ ಜಮಾಲ್ ಖಾನ್ ಕೂಡ ಸಾಥ್ ನೀಡಿದ್ದಾರೆ. ಅವರು 1,00,000 ರೂ. ದೇಣಿಗೆ ನೀಡಿದ್ದಾರೆ.

ಈ ಹಿಂದೆ ಟ್ವೀಟ್ ಮಾಡಿದ್ದ ಅಜರ್ ಅಲಿ, ಈ ಬ್ಯಾಟ್ ಮತ್ತು ಜರ್ಸಿ ನನ್ನ ಅತ್ಯಂತ ಪ್ರಿಯ ವಸ್ತುಗಳು. ಆದರೆ ಕಷ್ಟದ ಸಮಯದಲ್ಲಿ ಇವುಗಳನ್ನು ಜನರ ಅನುಕೂಲಕ್ಕಾಗಿ ಬಳಸಲು ಖುಷಿಯಾಗುತ್ತದೆ. ಇವೆರಡನ್ನೂ ಹರಾಜಿಗಿಟ್ಟು ಬಂದ ಹಣವನ್ನು ಕೊರೊನಾ ವೈರಸ್ ಸಂತ್ರಸ್ತರಿಗೆ ನೀಡಿಲು ನಿರ್ಧಸಿದ್ದೇನೆ. ಪ್ರತಿಯೊಂದರ ಮೂಲ ಬೆಲೆ 10 ಲಕ್ಷ ಪಾಕಿಸ್ತಾನ ರೂಪಾಯಿಗಳು. ಮೇ 5ರ ವರಗೂ ಹರಾಜು ಅವಧಿ ಇದೆ ಎಂದು ತಿಳಿಸಿದ್ದರು.

2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಜರ್ ಅಲಿ 59 ರನ್ ಗಳಿಸಿ ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ 2016ರಲ್ಲಿ ಯುಎಇಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 302 ರನ್ ಗಳಿಸಿದ್ದರು. ಈ ಮೂಲಕ ಡೇ-ನೈಟ್ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಗಳಿಸಿದ ಮೊದಲ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *