ಪುಲ್ವಾಮಾ ಕೇಸ್ – ಎನ್‍ಐಎ ತನಿಖೆ ಎಲ್ಲಿಯವರೆಗೆ ಬಂದಿದೆ? ‘ಕೀ’ ಯಿಂದ ಕೇಸ್ ಓಪನ್ ಆದ ರೋಚಕ ಕಥೆ ಓದಿ

Public TV
5 Min Read

ನವದೆಹಲಿ: ಪುಲ್ವಾಮಾ ದಾಳಿ ನಡೆದ ಒಂದು ವರ್ಷ ಪೂರ್ಣಗೊಂಡರೂ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಇನ್ನೂ ಪೂರ್ಣ ಪ್ರಮಾಣದ ಚಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಈ ಪ್ರಕರಣದಲ್ಲಿ ಶಂಕಿತರು ಎಂದು ಗುರುತಿಸಲಾಗಿದ್ದ ಎಲ್ಲ ವ್ಯಕ್ತಿಗಳನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇನ್ನೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ ಎಂದು ಹೇಳಲಾಗುತ್ತಿದೆ.

ಈ ಪ್ರಕರಣದ ಸಂಬಂಧ ಶಂಕಿತ ಆರೋಪಿಗಳು ಎಂದು ಪರಿಗಣಿಸಿದ್ದ ಮುದಾಸ್ಸೀರ್ ಅಹ್ಮದ್ ಖಾನ್ ಮತ್ತು ಸಜ್ಜದ್ ಬಟ್ ಇಬ್ಬರು ಅನುಕ್ರಮವಾಗಿ ಮಾರ್ಚ್ ಮತ್ತು ಜೂನ್ ತಿಂಗಳಿನಲ್ಲಿ ಎನ್‍ಕೌಂಟರ್ ಮಾಡಿ ಹತ್ಯೆ ಮಾಡಲಾಗಿದೆ. ಶಂಕಿತ ಎಲ್ಲ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದ್ದರಿಂದ ಸಂಪೂರ್ಣವಾಗಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸುವುದು ಕಷ್ಟ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕೃತ್ಯಕ್ಕೆ ಸಂಚು ರೂಪಿಸಿದ್ದು ಪಾಕಿಸ್ತಾನದಲ್ಲಿ ಎನ್ನುವುದು ಖಚಿತವಾಗಿ ತಿಳಿದಿದೆ. ಕಾನೂನು ಬಾಹಿರ ತಡೆ ಕಾಯ್ದೆ ಅಡಿ ತನಿಖೆ ನಡೆಸಿದರೆ ಪ್ರಕರಣ ದಾಖಲಿಸಿದ 90 ದಿನಗಳ ಒಳಗಡೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕಾಗುತ್ತದೆ. ಆದರೆ ಪ್ರಕರಣದಲ್ಲಿ ಉಲ್ಲೇಖಿಸಲ್ಪಟ್ಟ ಆರೋಪಿಗಳು ಮೃತಪಟ್ಟರೆ ಅವಧಿ ವಿಸ್ತರಣೆಯಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಸ್ಫೋಟಕ ಸಾಮಾಗ್ರಿಗಳು ಉಗ್ರರಿಗೆ ಸಿಕ್ಕಿದ್ದು ಹೇಗೆ ಎನ್ನುವುದರ ಬಗ್ಗೆ ತನಿಖೆಯಲ್ಲಿ ಇನ್ನೂ ಉತ್ತರ ಸಿಕ್ಕಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ಉನ್ನತ ಮಟ್ಟದ ಮಿಲಿಟರಿ ಸ್ಫೋಟಕಗಳನ್ನು ಬಳಸಿ ಕೃತ್ಯ ನಡೆಸಲಾಗಿದೆ ಎಂದು ವರದಿ ನೀಡಿತ್ತು. ಘಟನೆ ನಡೆದ ಮರುದಿನ ಭಾರೀ ಮಳೆ ಸುರಿದು ಬೇಕಾಗಿದ್ದ ಪ್ರಮುಖ ಸಾಕ್ಷ್ಯಗಳು ನಾಶವಾಗಿದ್ದರಿಂದ ತನಿಖೆಗೆ ಹಿನ್ನಡೆ ಆಗಿತ್ತು.

ಆರೋಪಿಗಳು ಯಾರು ಬದುಕಿಲ್ಲ:
ಆರೋಪಿ ಎ1 ಆಗಿದ್ದ ಜೈಷ್ ಎ ಮೊಹಮ್ಮದ್ ಸಂಘಟನೆ ಉಗ್ರ ಆದಿಲ್ ಅಹ್ಮದ್ ದಾರ್ ಮಾರುತಿ ಇಕೋ ಕಾರ್ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಸೈನಿಕರಿದ್ದ ಬಸ್ ಮೇಲೆ ದಾಳಿ ಮಾಡಿದ್ದ. ಘಟನೆಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು. ವ್ಯವಸ್ಥಿತವಾಗಿ ದಾಳಿಗೆ ಸ್ಕೆಚ್ ಹಾಕಿದ್ದ ಆದಿಲ್ ದಾರ್ 300 ಕೆಜಿಗೂ ಹೆಚ್ಚು ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಬಸ್ಸಿಗೆ ಗುದ್ದಿಸಿದ್ದ. ಈ ಘಟನೆಯಲ್ಲಿ ದಾರ್ ಸಹ ಮೃತಪಟ್ಟಿದ್ದ.

ಕೃತ್ಯ ಎಸಗಲು ಸಹಕಾರ ನೀಡಿದ್ದ 23 ವರ್ಷ ವಯಸ್ಸಿನ ಎಲೆಕ್ಟ್ರಿಷಿಯನ್ ಮುದಾಸ್ಸೀರ್ ಅಹ್ಮದ್ ಖಾನ್ ನನ್ನು ಎನ್‍ಕೌಂಟರ್ ಮಾಡಿ ಮಾರ್ಚ್ 12 ರಂದು ಹತ್ಯೆ ಮಾಡಲಾಗಿತ್ತು. ಪುಲ್ವಾಮಾ ಜಿಲ್ಲೆಯವನಾದ ಮುದಾಸಿರ್ ಪದವೀಧರನಾಗಿದ್ದು ದಾಳಿಗೆ ಬೇಕಾದ ಸ್ಫೋಟಕ ವಸ್ತು ಹಾಗೂ ಕಾರನ್ನು ಪೂರೈಸಿದ್ದ. ಟ್ರಾಲ್ ಪ್ರದೇಶದ ಮಿರ್ ಮೊಹಲ್ಲಾಕ್ಕೆ ಸೇರಿದ ಮುದಾಸಿರ್ ಖಾನ್ 2017 ರಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಸೇರಿದ್ದ. ಕೃತ್ಯ ನಡೆಯುವ ಮೊದಲು ಅಹ್ಮದ್ ದಾರ್ ಹಾಗೂ ಮುದಾಸ್ಸೀರ್ ನಡುವಿನ ಸಂಭಾಷಣೆಯ ವಿವರ ಸಿಕ್ಕಿತ್ತು.

ಪುಲ್ವಾಮಾ ದಾಳಿಗೂ 10 ದಿನಕ್ಕೂ ಮೊದಲು ಸಜ್ಜದ್ ಬಟ್ ಇಕೋ ಕಾರನ್ನು ಖರೀದಿಸಿದ್ದ. ಈ ಕಾರನ್ನು ಆತ್ಮಹುತಿ ಬಾಂಬರ್ ಅಹ್ಮದ್ ದಾರ್ ಗೆ ನೀಡಿದ್ದ. ಶೋಪಿಯನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ಈತ ಜೈಷ್-ಇ-ಮೊಹಮ್ಮದ್ ಸಂಘಟನೆಯ ಸೇರಿದ್ದ. ಸಜ್ಜದ್ ಕೈಯಲ್ಲಿ ಬಂದೂಕು ಹಿಡಿದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಜೂನ್ 18 ರಂದು ಭದ್ರತಾ ಪಡೆಗಳು ಅನಂತ್‍ನಾಗ್ ಜಿಲ್ಲೆಯ ಬಿಜ್‍ಬಿಹಾರಾ ಪಟ್ಟಣ ಸಮೀಪದ ಮರ್ಹಾಮಾ ಸಂಗಮ ಎಂಬ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಈತನ ಹತ್ಯೆ ನಡೆಸಿತ್ತು.

‘ಕೀ’ಯಿಂದ ಕೇಸ್ ಓಪನ್:
ಫೆ.14ರ ಮಧ್ಯಾಹ್ನ 3.15ರ ವೇಳೆಗೆ ದಾಳಿ ನಡೆದಿತ್ತು. ಮರುದಿನ ಭಾರೀ ಮಳೆ ಬಂದ ಪರಿಣಾಮ ತನಿಖೆಗೆ ಬೇಕಾಗಿದ್ದ ಪ್ರಮುಖ ಸಾಕ್ಷ್ಯಗಳು ನಾಶವಾಗಿತ್ತು. ಹೀಗಾಗಿ ಎನ್‍ಐಎಗೆ ತನಿಖೆಗೆ ನಡೆಸುವುದು ಬಹಳ ಸವಾಲಿನ ಕೆಲಸವಾಗಿತ್ತು.

ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಲೇಥ್‍ಪುರಕ್ಕೆ ಕೃತ್ಯ ನಡೆದ ಕೆಲವೇ ಗಂಟೆಯಲ್ಲಿ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಅಟೋಮೊಬೈಲ್ ತಜ್ಞರು ಸ್ಥಳಕ್ಕೆ ಆಗಮಿಸಿದ್ದರು. ಸ್ಫೋಟದ ರಭಸಕ್ಕೆ ಬಸ್ ಸಂಪೂರ್ಣವಾಗಿ ಮುದ್ದೆಯಾಗಿ ಬಿದ್ದಿದ್ದರೆ ಕೃತ್ಯಕ್ಕೆ ಬಳಸಿದ ಕಾರು ಸಂಪೂರ್ಣವಾಗಿ ನಾಶವಾಗಿತ್ತು. ಭಾಗಗಳು ಎಲ್ಲೆಂದರಲ್ಲಿ ಬಿದ್ದಿತ್ತು. ಹೀಗಾಗಿ ತನಿಖೆಯ ಆರಂಭದ ದಿನದಲ್ಲಿ ಕಾರಿನ ಭಾಗಗಳನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿತ್ತು. ಕೊನೆಗೆ ಕಾರಿನ ಬಂಪರ್ ಮತ್ತು ನಂಬರ್ ಇರುವ ಶಾಕ್ ಅಬ್ಸರ್ಬರ್ ಸಿಕ್ಕಿತ್ತು. ಇದರ ಜೊತೆಯಲ್ಲಿ 25 ಲೀಟರಿನ ಕ್ಯಾನ್ ಸಿಕ್ಕಿತ್ತು. ತನಿಖಾಧಿಕಾರಿಗಳು ಈ ಕ್ಯಾನಿನಲ್ಲಿ 30 ಕೆಜಿ ಸ್ಫೋಟಕ ಇಟ್ಟಿರಬಹುದು ಎಂದು ಶಂಕಿಸಿದ್ದರು.

ಸಿಕ್ಕಿದ ಭಾಗಗಳನ್ನು ಚೆಕ್ ಮಾಡಿದಾಗ ಕೊನೆಗೆ ಕೃತ್ಯಕ್ಕೆ ಬಳಸಿದ್ದು ಮಾರುತಿ ಕಂಪನಿಯ ಕಾರು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ನಂತರ ಎನ್‍ಐಎ ಅಧಿಕಾರಿಗಳು ಮಾರುತಿ ಎಂಜಿನಿಯರ್ ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಮಾಹಿತಿ ಕಲೆ ಹಾಕಿದ್ದಾರೆ. ಸಿಕ್ಕಿದ ಭಾಗಗಳ ಮಾಹಿತಿಯನ್ನು ಕಲೆ ಹಾಕಿದಾಗ ಕಾರು 2011ರಲ್ಲಿ ಉತ್ಪಾದನೆಯಾಗಿದೆ ಎನ್ನುವ ವಿಚಾರ ಬೆಳಕಿಗೆ ಬರುತ್ತದೆ.

2011ರಲ್ಲಿ ಉತ್ಪಾದನೆಯಾದ ಕಾರಿನ ಮಾಲೀಕರನ್ನು ಪತ್ತೆ ಹಚ್ಚುವುದು ಹೇಗೆ? ಇದು ಬಹಳ ಕಷ್ಟದ ಕೆಲಸ. ತನಿಖೆಗೆ ಬಹಳ ದಿನಗಳು ನಡೆಯಬಹುದು ಎನ್ನುವುದನ್ನು ಅರಿತ ಎನ್‍ಐಎ ತಂಡ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ ಹೊಳೆದಿದ್ದೆ ಮೆಟಲ್ ಡಿಟೆಕ್ಟರ್ ಸಾಧನ. ಸ್ಫೋಟದ ತೀವ್ರತೆಗೆ ಸೈನಿಕರ ದೇಹದ ಭಾಗಗಳೇ ಸುಮಾರು 100 ಮೀಟರ್ ದೂರಕ್ಕೆ ಚಿಮ್ಮಿತ್ತು. ಹೀಗಾಗಿ ಕಾರಿನ ಭಾಗಗಳು ಹಲವು ಕಡೆ ಚಿಮ್ಮಿರಬಹುದು ಎನ್ನುವ ಬಲವಾದ ನಂಬಿಕೆಯೊಂದಿಗೆ ಎನ್‍ಐಎ ಮೆಟಲ್ ಡಿಟೆಕ್ಟರ್ ಮೊರೆ ಹೋಯ್ತು.

ಮೆಟಲ್ ಡಿಟೆಕ್ಟರ್ ತಂದು 200 ಮೀಟರ್ ವ್ಯಾಪ್ತಿಯಲ್ಲಿ ಸ್ಕ್ಯಾನ್ ಮಾಡಲು ಮುಂದಾದಾಗ ಒಂದು ಕೀ ಸಿಕ್ಕಿತು. ಇದಾದ ಬಳಿಕ ಕಾರಿನ ಚಾಸಿ ಪತ್ತೆಯಾಯಿತು. ಯಾವುದೇ ಚಾಸಿಯಲ್ಲಿ 19 ಸಂಖ್ಯೆಗಳು ಇರುತ್ತದೆ. ಈ ಚಾಸಿ ನಂಬರ್ ಮೂಲಕ ವೆಹಿಕಲ್ ಐಡಿಂಟಿಫಿಕೇಶನ್ ನಂಬರ್(ವಿಪಿಎನ್) ಪತ್ತೆ ಮಾಡಬಹುದು. ವಿಪಿಎನ್ 19 ಅಕ್ಷರಗಳಿಂದ ಕೂಡಿದ್ದು ಎಲ್ಲಾ ಕಾರುಗಳಿಗೆ ವಿಶಿಷ್ಟವಾಗಿ ನೀಡಲಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ಒಂದಕ್ಕೊಂದು ತಾಳೆ ಹಾಕಿದಾಗ ಈ ಕೃತ್ಯಕ್ಕೆ ಬಳಕೆ ಮಾಡಿದ್ದು ಇಕೋ ಕಾರು ಎನ್ನುವುದು ಖಚಿತವಾಯಿತು.

ಕಾರು ಪತ್ತೆಯಾದ ನಂತರ ಮಾಲೀಕನನ್ನು ಪತ್ತೆ ಹಚ್ಚಲು ಎನ್‍ಐಎ ಮತ್ತಷ್ಟು ಶ್ರಮ ಪಟ್ಟಿದೆ. ಕಾರು ಎಲ್ಲಿಂದ ಮಾರಾಟವಾಗಿ ಇದರ ಮೊದಲ ಮಾಲೀಕರ ಮಾಹಿತಿಯನ್ನು ಕಲೆ ಹಾಕಿದಾಗ 2011 ರಲ್ಲಿ ಅನಂತ್‍ನಾಗ್‍ನಿಂದ ಜಲೀಲ್ ಅಹ್ಮದ್ ಹಕ್ಕಾನಿ ಅವರು ಈ ಕಾರನ್ನು ಮೊದಲು ಖರೀದಿಸಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ವಿಳಾಸದ ಆಧಾರದಲ್ಲಿ ಅವರನ್ನು ವಿಚಾರಿಸಿದಾಗ ನಾನು ಕಾರನ್ನು ಮಾರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ. ಬಳಿಕ ಈ ಕಾರು 7 ಜನರಿಗೆ ಮಾರಾಟವಾಗಿ ಕೊನೆಯ ಬಾರಿ ಈ ವರ್ಷದ ಫೆ.4 ರಂದು ಅನಂತ್‍ನಾಗ್ ಜಿಲ್ಲೆಯ ಮುಕ್ಬುಲ್ ಬಟ್ ಮಗ ಸಜ್ಜದ್ ಬಟ್ ಖರೀದಿಸಿದ್ದ ವಿಚಾರ ಬೆಳಕಿಗೆ ಬರುತ್ತದೆ.

ಈ ಮಾಹಿತಿ ಸಿಕ್ಕಿದ ಕೂಡಲೇ ಎನ್‍ಐಎ ತಂಡ ಜಮ್ಮು ಕಾಶ್ಮೀರ ಪೊಲೀಸರ ಸಹಾಯದಿಂದ ಅನಂತ್‍ನಾಗ್ ಜಿಲ್ಲೆಯ ಬಿಜ್‍ಬೆಹ್ರಾಕ್ಕೆ ತೆರಳಿ ಸಜ್ಜದ್ ಬಟ್‍ಗಾಗಿ ಶೋಧಿಸಿದೆ. ಈ ವೇಳೆ ಆತ ನಾಪತ್ತೆಯಾಗಿದ್ದ. ಅಲ್ಲಿಗೆ ಈ ಕಾರು ಉಗ್ರರಿಗೆ ಸೇರಿದ್ದು ಎನ್ನುವುದು ಖಚಿತವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *