ನಗಿಸುತ್ತಲೇ ನೈಜತೆಯನ್ನು ಹೇಳಿ ಕಣ್ಣಂಚಲಿ ನೀರು ತರಿಸುವ ‘ಪುಕ್ಸಟ್ಟೆ ಲೈಫು’

By
3 Min Read

ಚಿತ್ರ: ಪುಕ್ಸಟ್ಟೆ ಲೈಫು
ನಿರ್ದೇಶನ : ಅರವಿಂದ್ ಕುಪ್ಳೀಕರ್
ನಿರ್ಮಾಣ : ಸರ್ವಸ್ವ ಪ್ರೊಡಕ್ಷನ್ಸ್
ಸಂಗೀತ : ವಾಸು ದೀಕ್ಷಿತ್
ಹಿನ್ನೆಲೆ ಸಂಗೀತ : ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ : ಅಧ್ವೈತ್ ಗುರುಮೂರ್ತಿ
ತಾರಾಗಣ: ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ರಂಗಾಯಣ ರಘು, ಮಾತಂಗಿ ಪ್ರಸನಾ, ಇತರರು.

ಪ್ರೇಕ್ಷಕ ವಲಯದಲ್ಲಿ ಹಾಗೂ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟುಹಾಕಿದ್ದ ‘ಪುಕ್ಸಟ್ಟೆ ಲೈಫು’ ಇಂದು ಚಿತ್ರಮಂದಿರಕ್ಕೆ ಕಾಲಿಟ್ಟಿದೆ. ನಿರೀಕ್ಷೆಯಂತೆ‌ ಚಿತ್ರ ಮೊದಲ ದಿನ ಎಲ್ಲಾ ಕಡೆಗಳಲ್ಲೂ ಉತ್ತಮ ಓಪನಿಂಗ್ ಪಡೆದುಕೊಂಡಿದೆ.

ನಾಯಕ ಶಹಜಾನ್ ಬೀಗ ರಿಪೇರಿ‌ ಮಾಡುವ ಪ್ರಾಮಾಣಿಕ ಮುಸ್ಲಿಂ ಯುವಕ. ಅಪ್ಪನಿಲ್ಲದ‌ ಮನೆಗೆ ತಾನೇ ಆಧಾರ ಸ್ತಂಭ. ಎಲ್ಲರನ್ನೂ ಪ್ರೀತಿಯಿಂದ ಆದರಿಸುವ ವ್ಯಕ್ತಿತ್ವ ಆತನದು. ಇರೋದ್ರಲ್ಲಿ ಸುಖ ಕಾಣುತ್ತಿದ್ದ ಆತನಿಗೆ ಪಕ್ಕದ‌ ಮನೆಯ ಹುಡುಗಿ ಶಾರದಾಳ ಮೇಲೆ ಒಲವು. ಮನೆಯ ಜವಾಬ್ದಾರಿ, ಶಾರದಾಳ ಜೊತೆಗಿನ ಪ್ರೀತಿಯ ಸುತ್ತಾಟ.. ಹೀಗೆ ಆತನ ದಿನಗಳು ಖುಷಿಯಿಂದ ಕೂಡಿತ್ತು. ಹೀಗಿರುವಾಗ ಅಚಾನಕ್ ಆಗಿ ಶಹಜಾನ್ ಸ್ವತಃ ತಾವೇ ನುಂಗುಬಾಕರಾಗಿದ್ದ ಪೊಲೀಸರ ಕೈಗೆ‌ ಸಿಕ್ಕಿಹಾಕಿಕೊಳ್ಳುತ್ತಾನೆ. ಮುಂದೆ ಅವರು ಮಾಡುವ ಎಲ್ಲಾ ಅಪರಾಧ, ದೋಚುವ ಕೆಲಸಕ್ಕೆ ಶಹಜಾನ್ ಅಮಾಯಕ ದಾಳವಾಗಿ ಬಳಕೆಯಾಗುತ್ತಾನೆ. ಇದೇನಾಯ್ತು ಎನ್ನುವಾಗಲೇ ಶಹಜಾನ್ ಇದಕ್ಕಿದ್ದಂತೆ ಕಣ್ಮರೆಯಾಗುತ್ತಾನೆ. ಇದರ‌ ಜೊತೆಗೆ ಸೀಟಿನ ಅಂಚಿಗೆ ಕೂರಿಸೋ ಟ್ವಿಸ್ಟ್‌ಗಳು, ಒಂದಿಷ್ಟು ನಗು ತರಿಸೋ ಕಾಮಿಡಿ, ಗಂಭೀರಗೊಳಿಸುವ ಕೆಲ ವಿಚಾರಗಳ ಜೊತೆ‌ ಕಥೆ ಸಾಗುತ್ತೆ.

ಪ್ರಾಮಾಣಿಕ ಹುಡುಗ ಶಹಜಾನ್ ಪೊಲೀಸರ ಕೈಗೆ ಸಿಕ್ಕಿದ್ದು ಹೇಗೆ, ಇಷ್ಟೆಲ್ಲ ಘಟನೆ ನಂತರ ಆತ ಹೇಗೆ ಪಾರಾಗುತ್ತಾನೆ, ಇದಕ್ಕಿದ್ದಂತೆ ಯಾಕೆ ಕಣ್ಮರೆಯಾಗುತ್ತಾನೆ, ಮುಂದೇನಾಗುತ್ತೆ ಎನ್ನುವುದೇ ಸಸ್ಪೆನ್ಸ್.

ಹೊಸ ಅಲೆಯ ಸಿನಿಮಾಗಳು ಬರುತ್ತಿವೆ ಎಂದು ಮಾತನಾಡುತ್ತಿರುತ್ತೇವೆ. ಆದ್ರೆ ಇಲ್ಲಿ ‘ಪುಕ್ಸಟ್ಟೆ ಲೈಫು’ ಹೊಸ ಅಲೆಯನ್ನು ಸೃಷ್ಟಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಅಂತಹ ಅದ್ಭುತ ಕಥಾ ಹೂರಣವನ್ನು ಸಿನಿಮಾ ಹೊಂದಿದೆ. ಬಹುಶಃ ಪ್ರೇಕ್ಷಕರಿಗೂ ಈ ಸಿನಿಮಾ ಬೇರೆಯದ್ದೇ ರೀತಿಯ ಫೀಲ್ ನೀಡಿರೋದ್ರಲ್ಲಿ ಡೌಟೇ ಇಲ್ಲ. ಇದನ್ನೂ ಓದಿ: ರಾಯನ್‍ಗೆ 11 ತಿಂಗಳು- ಕ್ಯೂಟ್ ವೀಡಿಯೋ ಹಂಚಿಕೊಂಡ ಮೇಘನಾ

ಸಿನಿಮಾ ನೋಡಿದ ಮೇಲೆ ಕನ್ನಡಕ್ಕೊಬ್ಬ ಅದ್ಭುತ ಹಾಗೂ ಪ್ರತಿಭಾವಂತ ‌ನಿರ್ದೇಶಕ ಸಿಕ್ಕಿದ್ರು ಎನ್ನುವ ಭಾವ‌ ಹೊಮ್ಮದೇ ಇರದು. ಕಥೆಯ ಮೇಲಿನ ನಿರ್ದೇಶಕರ ಹಿಡಿತ, ಪ್ರತಿ ಕಲಾವಿದರಿಗೂ ನೀಡಿದ ಪಾತ್ರ, ಎಲ್ಲೆ ಮೀರದ ಅಭಿನಯ‌ ಮತ್ತು ಡೈಲಾಗ್ ಪ್ರತಿಯೊಂದು ಕುಸುರಿ ಕೆಲಸವೂ ನಿರ್ದೇಶಕ ಅರವಿಂದ್ ಕುಪ್ಳೀಕರ್ ಪ್ರತಿಭೆಗೆ‌ ಹಿಡಿದ ಕನ್ನಡಿ.

ಚಿತ್ರದ ಕಥೆ ಹೇಗೆ ಗಟ್ಟಿತನ ಹೊಂದಿದೆಯೋ ಅದಕ್ಕೆ ಆಯ್ಕೆ ಮಾಡಿಕೊಂಡ ಕಲಾವಿದರು ಅಷ್ಟೇ ಪ್ರತಿಭಾವಂತರೂ. ಮೇಲಾಗಿ ಎಲ್ಲರೂ ರಂಗಭೂಮಿ ಹಿನ್ನೆಲೆಯುಳ್ಳವರೇ. ಹಾಗಾಗಿ ಸಿನಿಮಾವನ್ನು ನೈಜವಾಗಿ ತೆರೆ ಮೇಲೆ ಕಟ್ಟಿಕೊಡಲು ಇದು ಒಂದು ಮುಖ್ಯ ಕಾರಣ. ಪ್ರತಿಯೊಬ್ಬರದ್ದು ತಮ್ಮ ಪ್ರತಿಭೆಯನ್ನು ತಾವೇ ಒರೆಗೆ ಹಚ್ಚಿ ನೋಡುವಂತ ಅಭಿನಯ. ಯಾರ ನಟನೆಯೂ ಸುಮಾರಾಗಿತ್ತು ಎನ್ನುವ ಮಾತೇ ಬಾರದ ಹಾಗೆ ಪ್ರತಿ ಪಾತ್ರವೂ ಜೀವ ತುಂಬಿ ನಟಿಸಿವೆ.

ಸಂಚಾರಿ ವಿಜಯ್ ಮುಸ್ಲಿಂ ಯುವಕನ ಪಾತ್ರಕ್ಕೆ ತುಂಬಿದ ಜೀವ ಅವರನ್ನು ಬಿಟ್ಟು ಇನ್ನಾರು ಮಾಡಲಾರರೇನೋ ಎನ್ನುವಂತಿದೆ. ನಟ ದೈತ್ಯ ಪ್ರತಿಭೆಗಳಾದ ಅಚ್ಯುತ್ ಕುಮಾರ್, ರಂಗಾಯಣ ರಘು ಅಭಿನಯಕ್ಕೆ ಸರಿಸಾಟಿ ಇಲ್ಲದಂತೆ ನಟಿಸಿದ್ದಾರೆ. ಇಬ್ಬರ ನಟನಾ ತಾಕತ್ತು ತೆರೆ ಮೇಲೆ ಕಣ್ಣಿಗೆ ಹಬ್ಬ ನೀಡುತ್ತದೆ. ನಾಯಕಿ ಮಾತಂಗಿ ಪ್ರಸನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದು, ನೈಜ ಅಭಿನಯದ ಮೂಲಕ ಎಲ್ಲರನ್ನು ಸೆಳೆಯುತ್ತಾರೆ.

ವಾಸು ದೀಕ್ಷಿತ್ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು ಮನಸ್ಸಿಗೂ ಹತ್ತಿರವೆನಿಸುತ್ತೆ. ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ನಿರ್ದೇಶಕರ ವಿಷನ್ ಹಾಗೂ ಕ್ಯಾಮೆರಾ ಕೆಲಸ ಇವೆರಡಕ್ಕೂ ಪರಿಪೂರ್ಣತೆ ನೀಡಿದೆ.

ನಗುವಿನ ಹೂರಣ, ಗಂಭೀರತೆಯ ಲೇಪನ, ಒಂದೊಳ್ಳೆ ಸಂದೇಶ ಜೊತೆಗೆ ಒಂದೊಳ್ಳೆ ಅನುಭವ ನೀಡುತ್ತಾ, ಸಂಚಾರಿ ವಿಜಯ್ ಇರಬಾರದಿತ್ತಾ ಎನಿಸಿ ಕಣ್ಣಂಚಲಿ ನೀರು‌ ತರಿಸುತ್ತಾ ಕಾಡುವ ಸಿನಿಮಾ ‘ಪುಕ್ಸಟ್ಟೆ ಲೈಫು’.

ಪಬ್ಲಿಕ್ ರೇಟಿಂಗ್: 4/5

Share This Article
Leave a Comment

Leave a Reply

Your email address will not be published. Required fields are marked *