ಪಿಯು ಬೋರ್ಡ್ ಎಡವಟ್ಟಿನಿಂದ ವಿದ್ಯಾರ್ಥಿ ಕನ್ನಡದಲ್ಲಿ ಫೇಲ್- ಉತ್ತರಪತ್ರಿಕೆಯ ಹಾಳೆಗಳೇ ನಾಪತ್ತೆ

Public TV
2 Min Read

– 2 ಪುಟ ಚೆಕ್ ಮಾಡಿ 17 ಅಂಕ- ಚಿಕ್ಕೋಡಿಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಯ ಭವಿಷ್ಯ ಅತಂತ್ರ

ಬೆಂಗಳೂರು/ಬೆಳಗಾವಿ: ಪಿಯುಸಿ ಪರೀಕ್ಷಾ ಮಂಡಳಿ ಪ್ರತಿಬಾರಿ ಪಿಯುಸಿ ಪರೀಕ್ಷೆಯಲ್ಲಿ ಒಂದಿಲ್ಲೊಂದು ಎಡವಟ್ಟು ಮಾಡ್ತಾನೆ ಇರುತ್ತೆ. ಈ ಬಾರಿ ಅದ್ರೂ ಯಾವುದೇ ಎಡವಟ್ಟು ಇಲ್ಲದೆ ಪರೀಕ್ಷೆ ಮುಗಿಸಿತು ಎನ್ನುವಷ್ಟರಲ್ಲಿ ಇಲ್ಲೊಬ್ಬ ವಿದ್ಯಾರ್ಥಿ ನನಗೆ ಅನ್ಯಾಯವಾಗಿದೆ ಅಂತಾ ಹೇಳಿದ್ದಾನೆ.

ಮೂಲತಃ ಯಾದಗಿರಿ ಜಿಲ್ಲೆಯ ಖಾಸಗಿ ಕಾಲೇಜಿನ ವಿಜ್ಞಾನ ವಿದ್ಯಾರ್ಥಿ ಅಕ್ಷಯ್ ಕುಮಾರ್ ದ್ವಿತಿಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಫಲಿತಾಂಶ ಏನೋ ಬಂತು. ಎಲ್ಲಾ ವಿಷಯದಲ್ಲೂ ಫಸ್ಟ್ ಕ್ಲಾಸ್. ಅದ್ರೇ ಕನ್ನಡದಲ್ಲಿ ಜಸ್ಟ್ 15 ಅಂಕ. ಕನ್ನಡದಲ್ಲಿ ಫೇಲ್ ಅಗೋ ಛಾನ್ಸೇ ಇಲ್ಲ, 60 ಮೇಲೆ ಮಾಕ್ರ್ಸ್ ಬರಬೇಕಿತ್ತು ಅಂತಾ ಮರುಮೌಲ್ಯಮಾಪನಕ್ಕೆ ಹಾಗೂ ಫೋಟೋ ಕಾಪಿಗೆ ಅರ್ಜಿ ಹಾಕಿದ್ದ.

ಕನ್ನಡ ಉತ್ತರಪತ್ರಿಕೆಯ ಫೋಟೋ ಕಾಪಿ ಏನೋ ಬಂತು. ಆದ್ರೆ ಫೋಟೋ ಕಾಪಿ ನೋಡಿದ ಹುಡುಗ ತುಂಬಾ ಶಾಕ್ ಆಗಿದ್ದ. ಯಾಕಂದ್ರೆ ಉತ್ತರಪತ್ರಿಕೆಯ 22 ಪುಟಗಳಲ್ಲಿ 3 ರಿಂದ 8ರವರೆಗಿನ ಪುಟಗಳು ನಾಪತ್ತೆಯಾಗಿವೆ. ಅಂದ್ರೆ ಒಟ್ಟು 6 ಪುಟಗಳು ನಾಪತ್ತೆಯಾಗಿವೆ. ಈ ವಿಷಯವನ್ನ ಯಾದಗಿರಿ ಕಾಲೇಜಿನ ಅಧಿಕಾರಿಗಳಿಗೆ ಅಕ್ಷಯ್ ತಿಳಿಸಿದ್ದಾನೆ. ಅಲ್ಲಿಯ ಅಧಿಕಾರಿಗಳು ನೀನು ಪಿಯು ಬೋರ್ಡ್‍ಗೆ ಹೋಗಿ ನಿನ್ನ ಸಮಸ್ಯೆಯನ್ನ ಬಗೆಹರಿಸಿಕೊಳ್ಳಬೇಕು ಅಂತಾ ಹೇಳಿದ್ದಾರೆ.

ಕಾಣೆಯಾಗಿರೋ ಪುಟಗಳನ್ನ ಹುಡುಕಿ ನನ್ನ ಅಂಕ ನನಗೆ ಬರುವಂತೆ ಮಾಡಿ ಅಂತಾ ಈ ವಿದ್ಯಾರ್ಥಿ ಪಿಯು ಬೋರ್ಡ್‍ಗೆ ಅಲೆದು ಅಲೆದು ಸಾಕಗಿದೆ. ಈಗಾಗಲೇ ಸಿಇಟಿ ಕೌನ್ಸಿಲಿಂಗ್ ಶುರುವಾಗಿದ್ದು, ಡಾಕ್ಯುಮೆಂಟ್ ವೆರಿಫಿಕೇಷನ್ ನಡೀತಿದೆ. ಆದ್ರೂ ಸರಿಯಾದ ರಿಸಲ್ಟ್ ದೊರೆತ್ತಿಲ್ಲ. ಈ ತಪ್ಪಿನಲ್ಲಿ ಕೊಠಡಿ ಮೇಲ್ವಿಚಾರಕ, ಪರೀಕ್ಷಾ ಕೇಂದ್ರದ ಇನ್ಚಾರ್ಜ್, ಜೊತೆಗೆ ಉತ್ತರಪತ್ರಿಕೆ ಮೌಲ್ಯಮಾಪನ ಮಾಡಿದ ಅಧ್ಯಾಪಕ, ಹಾಗೂ ಮೇನ್ ವ್ಯಾಲ್ಯೂವರ್ ನೇರ ಹೊಣೆಯಾಗ್ತಾರೆ.

ಅತ್ತ ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ಅವಾಂತರದಿಂಗಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಅಪ್ತಾದ ಶೇಖಜಿ ಎಂಬ ವಿದ್ಯಾರ್ಥಿಯ ಮುಂದಿನ ಭವಿಷ್ಯ ಅತಂತ್ರವಾಗಿದೆ. ಈ ವಿದ್ಯಾರ್ಥಿಯ ಇಂಗ್ಲಿಷ್ ಉತ್ತರ ಪತ್ರಿಕೆಯಲ್ಲಿ ಕೇವಲ 2 ಪುಟಗಳನ್ನ ಚೆಕ್ ಮಾಡಿ ಇನ್ನುಳಿದ ಪುಟಗಳನ್ನ ಹಾಗೆಯೇ ಬಿಟ್ಟಿದ್ದಾರೆ. ಇನ್ನೂ 2 ಪುಟಗಳಿಗೆ ಕೇವಲ 17 ಅಂಕಗಳನ್ನ ನೀಡಿದ್ದು, ವಿದ್ಯಾರ್ಥಿಯನ್ನ ಇಂಗ್ಲಿಷ್ ವಿಷಯದಲ್ಲಿ ಅನುತ್ತೀರ್ಣ ಮಾಡಿದ್ದಾರೆ.

 

ಇನ್ನುಳಿದ ವಿಷಯಗಳಲ್ಲಿ ವಿದ್ಯಾರ್ಥಿಯು 80ಕ್ಕೂ ಹೆಚ್ಚು ಅಂಕಗಳನ್ನು ಪಡೆದಿದ್ದಾನೆ. ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ಅವಾಂತರದಿಂಗಾಗಿ ಈಗ ಕಾಲೇಜಿನಲ್ಲಿ ದಾಖಲಾತಿ ಸಿಗದೆ ಪರದಾಡುತ್ತಿದ್ದಾನೆ ಶಾಲೆಯಲ್ಲಿ ಆದರ್ಶ ವಿದ್ಯಾರ್ಥಿ ಎನಿಸಿಕೊಂಡಿರುವ ಅಪ್ತಾಬ್ ಈಗ ಮಾನಸಿಕವಾಗಿ ಕುಗ್ಗಿ ಹೊಗಿದ್ದಾನೆ. ಎಸ್‍ಎಸ್‍ಎಲ್‍ಸಿ ಬೋರ್ಡ್‍ನಿಂದ ಉತ್ತರಪತ್ರಿಕೆ ನಕಲು ಪ್ರತಿ ತರಿಸಿಕೊಂಡಾಗ ಬರೀ 2 ಪುಟಗಳನ್ನು ಮಾತ್ರ ಚೆಕ್ ಮಾಡಿ ಇನ್ನುಳಿದ ಪತ್ರಿಕೆಗಳನ್ನ ಚೆಕ್ ಮಾಡದೆ ಹಾಗೆಯೇ ಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಪ್ರತಿಯನ್ನ ಸ್ಥಳೀಯ ಶಿಕ್ಷಕರು ಚೆಕ್ ಮಾಡಿದ್ದು 50ಕ್ಕೂ ಹೆಚ್ಚು ಅಂಕಗಳು ಈ ವಿಧ್ಯಾರ್ಥಿಗೆ ಬರುತ್ತೆ ಅಂತಾ ಹೇಳಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಈಗ ವಿಧ್ಯಾರ್ಥಿ ಪರದಾಡುವಂತಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *