– ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಮರ್ಸಿಡಿಸ್, ಬೆಂಜ್, ಆಡಿ ಕಾರುಗಳು ಲಭ್ಯ!
ಭಾರತದ ಜನತೆಗೆ ಗುಡ್ ನ್ಯೂಸ್ ಸಿಕ್ಕಿದೆ. ತಾವು ಖರೀದಿಸುತ್ತಿದ್ದ ವಿದೇಶಿ ವಸ್ತುಗಳು ಇನ್ಮುಂದೆ ಕಡಿಮೆ ಬೆಲೆಗೆ ಸಿಗುತ್ತದೆ ಎಂದರೆ ಯಾರಿಗೆ ಖುಷಿಯಾಗಲ್ಲ ಹೇಳಿ? ಅಂತಹ ಶುಭ ಸಂದರ್ಭ ಈಗ ಭಾರತೀಯರಿಗೆ ಒದಗಿ ಬಂದಿದೆ. ಈಚೆಗೆ ಭಾರತ ಮತ್ತು ಯುರೋಪ್ ಒಕ್ಕೂಟ ‘ಮದರ್ ಆಫ್ ಆಲ್ ಡೀಲ್ಸ್’ (ಎಲ್ಲ ಒಪ್ಪಂದಗಳ ತಾಯಿ) ಎನ್ನುವ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದವು ಜಾಗತಿಕ ವ್ಯಾಪಾರದ ದಿಕ್ಕನ್ನೇ ಬದಲಿಸಿದೆ. ವ್ಯಾಪಾರ ನಿರ್ಬಂಧಗಳ ಮೂಲಕ ಅಮೆರಿಕ ಸಾಕಷ್ಟು ಅಡ್ಡಿ ಆತಂಕಗಳನ್ನು ಸೃಷ್ಟಿಸಿದೆ. ಯುಎಸ್ ನಡೆಯಿಂದ ವ್ಯಾಪಾರ ವಲಯದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ-ಇಯು (India-EU Trade Deal) ನಡುವಿನ ಒಪ್ಪಂದ ಜಾಗತಿಕವಾಗಿ ಗಮನ ಸೆಳೆಯುತ್ತಿದೆ. ವೈನ್ನಿಂದ ಹಿಡಿದು ವಿಸ್ಕಿ, ಆಲಿವ್ ಎಣ್ಣೆಯವರೆಗೆ, ಔಷಧಿ ಉಪಕರಣಗಳಿಂದ ಹಿಡಿದು ಯಂತ್ರೋಪಕರಣಗಳವರೆಗೆ ಎಲ್ಲವೂ ಕಡಿಮೆ ದರದಲ್ಲಿ ಲಭ್ಯವಾಗಲಿದೆ. ಆಟೋಮೊಬೈಲ್, ಕಾರು ಪ್ರಿಯರಿಗೂ ಲಾಭವಾಗಲಿದೆ. ಯಾವ್ಯಾವ ವಸ್ತು, ಉಪಕರಣಗಳು ಅಗ್ಗದ ದರದಲ್ಲಿ ಸಿಗುತ್ತವೆ ಎಂಬುದನ್ನು ನೋಡೋಣ.
18 ವರ್ಷಗಳ ಕಾಯುವಿಕೆಗೆ ಕೊನೆಗೂ ಮುಕ್ತಿ?
ಭಾರತ-EU ಮುಕ್ತ ವ್ಯಾಪಾರ ಒಪ್ಪಂದ ಪ್ರಯಾಣವು 2007ರ ಜೂನ್ನಲ್ಲಿ ಪ್ರಾರಂಭವಾಯಿತು. ಆದರೆ, 2013 ರ ಹೊತ್ತಿಗೆ 15 ಸುತ್ತಿನ ಮಾತುಕತೆಗಳು ನಡೆದವು. ಆಟೋಮೊಬೈಲ್, ಡೈರಿ ಮತ್ತು ವೃತ್ತಿಪರ ಚಲನಶೀಲತೆಯ ಮೇಲಿನ ಭಿನ್ನಾಭಿಪ್ರಾಯಗಳಿಂದಾಗಿ ಒಪ್ಪಂದ ಸ್ಥಗಿತಗೊಂಡಿತು. 2022ರ ಜೂನ್ನಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು EU ವ್ಯಾಪಾರ ಆಯುಕ್ತ ವಾಲ್ಡಿಸ್ ಡೊಂಬ್ರೊವ್ಸ್ಕಿಸ್ ಅವರು ಮಾತುಕತೆ ಪುನರಾರಂಭಿಸಿದರು. ಎರಡೂ ಕಡೆಯವರು 2025 ರವರೆಗೆ ಮಾಸಿಕ ಸುತ್ತಿನ ಮಾತುಕತೆಗಳಿಗೆ ಬದ್ಧರಾಗಿರುವುದಾಗಿ ತಿಳಿಸಿದರು. ಬರೋಬ್ಬರಿ 18 ವರ್ಷಗಳ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಮುಕ್ತ ವ್ಯಾಪಾರ ಒಪ್ಪಂದವು 200 ಕೋಟಿ ಜನತೆಗೆ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಇದನ್ನೂ ಓದಿ: ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಒಪ್ಪಂದ: ಭಾರತಕ್ಕೆ ಏನು ಅನುಕೂಲ?
ಏನಿದು ಭಾರತ-ಇಯು ವ್ಯಾಪಾರ ಒಪ್ಪಂದ?
* ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ (FTA) ವ್ಯಾಪಕ ಆರ್ಥಿಕ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಹೀಗಾಗಿ, ಅದನ್ನು ಎರಡೂ ಕಡೆಯವರು ‘ಎಲ್ಲಾ ಒಪ್ಪಂದಗಳ ತಾಯಿ’ ಎಂದು ಕರೆಯುತ್ತಿದ್ದಾರೆ.
* ಭಾರತೀಯರಿಗೆ ಯುರೋಪಿಯನ್ ಕಾರುಗಳು, ಬಿಯರ್ ಮತ್ತು ಹಲವಾರು ಆಹಾರ ಪದಾರ್ಥಗಳು ಅಗ್ಗವಾಗಲಿವೆ. ಭಾರತಕ್ಕೆ ಯುರೋಪಿಯನ್ ಒಕ್ಕೂಟದ ಸರಕುಗಳ ರಫ್ತಿನ ಮೇಲಿನ 96.6% ಸುಂಕಗಳನ್ನು ತೆಗೆದುಹಾಕಲಾಗುವುದು ಅಥವಾ ಕಡಿಮೆ ಮಾಡಲಾಗುತ್ತದೆ ಎಂದು ಯುರೋಪಿಯನ್ ಒಕ್ಕೂಟ ಹೇಳಿದೆ. ಇದು ಯುರೋಪಿಯನ್ ಉತ್ಪನ್ನಗಳ ಮೇಲಿನ ಸುಂಕದಲ್ಲಿ ವರ್ಷಕ್ಕೆ 4 ಬಿಲಿಯನ್ ಯುರೋಗಳಷ್ಟು ಉಳಿತಾಯವನ್ನು ನೀಡುತ್ತದೆ.
* ಈ ಒಪ್ಪಂದವು ಹಣ್ಣಿನ ರಸಗಳು ಮತ್ತು ಸಂಸ್ಕರಿಸಿದ ಆಹಾರಗಳಂತಹ EU ರಫ್ತಿನ ಮೇಲಿನ ಸುಂಕವನ್ನು ತೆಗೆದುಹಾಕುತ್ತದೆ. ಆಲಿವ್ ಎಣ್ಣೆ, ಮಾರ್ಗರೀನ್ ಮತ್ತು ಇತರ ಸಸ್ಯಜನ್ಯ ಎಣ್ಣೆಗಳ ಮೇಲಿನ ಸುಂಕವನ್ನು ಕಡಿತಗೊಳಿಸುತ್ತದೆ. ಸ್ಪಿರಿಟ್ಗಳ ಮೇಲಿನ ಸುಂಕವನ್ನು 40% ಕ್ಕೆ ಇಳಿಸುತ್ತದೆ.
* ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಭಾರತದ ಪ್ರಯತ್ನಗಳಿಗೆ ಸಹಾಯ ಮಾಡಲು ಮುಂದಿನ ಎರಡು ವರ್ಷಗಳಲ್ಲಿ 500 ಮಿಲಿಯನ್ ಯುರೋಗಳ ಬೆಂಬಲವನ್ನು EU ಕಲ್ಪಿಸಿದೆ. ಇದು ಒಪ್ಪಂದದ ಆರ್ಥಿಕ ಮತ್ತು ಹವಾಮಾನ ಆಯಾಮಗಳನ್ನು ಒತ್ತಿಹೇಳುತ್ತದೆ.
* ಯುರೋಪಿಯನ್ ಆಪ್ಟಿಕಲ್, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಮೇಲಿನ 90% ಸುಂಕಗಳನ್ನು ತೆಗೆದುಹಾಕಲಾಗುವುದು. ಭಾರತಕ್ಕೆ ಬಹುತೇಕ ಎಲ್ಲಾ EU ವಿಮಾನಗಳು ಮತ್ತು ಬಾಹ್ಯಾಕಾಶ ನೌಕೆಗಳ ರಫ್ತಿನ ಮೇಲಿನ ಸುಂಕಗಳನ್ನು ಸಹ ತೆಗೆದುಹಾಕಲಾಗುವುದು ಎಂದು ಯುರೋಪಿಯನ್ ಒಕ್ಕೂಟ ತಿಳಿಸಿದೆ.
* ಈ ಒಪ್ಪಂದವು ಯಂತ್ರೋಪಕರಣಗಳ ಮೇಲಿನ 44%, ರಾಸಾಯನಿಕಗಳ ಮೇಲಿನ 22% ಮತ್ತು ಔಷಧಗಳ ಮೇಲಿನ 11% ವರೆಗಿನ ಸುಂಕಗಳನ್ನು ರದ್ದುಗೊಳಿಸುತ್ತದೆ. ಈ ಕ್ರಮವು EU ಮಾರುಕಟ್ಟೆ ಪ್ರವೇಶವನ್ನು ಗಮನಾರ್ಹವಾಗಿ ಬಲಪಡಿಸಲು ಮತ್ತು 2032 ರ ವೇಳೆಗೆ ಭಾರತಕ್ಕೆ ಯುರೋಪಿಯನ್ ಒಕ್ಕೂಟದ ರಫ್ತುಗಳನ್ನು ದ್ವಿಗುಣಗೊಳಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸುತ್ತದೆ. ಇದನ್ನೂ ಓದಿ: 1 ಒಪ್ಪಂದ, 27 ಯುರೋಪ್ ಮಾರುಕಟ್ಟೆಗಳು – ಕರ್ನಾಟಕಕ್ಕೆ ಏನು ಪ್ರಯೋಜನ?
ಮರ್ಸಿಡಿಸ್, ಬಿಎಂಡಬ್ಲ್ಯು, ಆಡಿ ಕಾರುಗಳು ಅಗ್ಗ
ಯುರೋಪ್ನ ಐಷಾರಾಮಿ ಕಾರುಗಳಾದ ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯೂ, ಆಡಿ ಕಾರುಗಳು ಇನ್ಮುಂದೆ ಭಾರತದಲ್ಲಿ ಅಗ್ಗವಾಗಲಿವೆ. ಯುರೋಪಿಯನ್ ಕಾರುಗಳು ಪ್ರಸ್ತುತ 70% ಕ್ಕಿಂತ ಹೆಚ್ಚು ಆಮದು ಸುಂಕವನ್ನು ಹೊಂದಿವೆ. ಒಪ್ಪಂದದಂತೆ ಕಾರುಗಳ ಮೇಲಿನ ಸುಂಕವನ್ನು 10%ಗೆ ಇಳಿಸಲಾಗುತ್ತದೆ. ಆಗ ಐಷಾರಾಮಿ ಕಾರುಗಳ ಬೆಲೆಯಲ್ಲಿ ಲಕ್ಷ ಲಕ್ಷ ಇಳಿಕೆಯಾಗಲಿದೆ. ಇದರಿಂದ ಕಾರು ಮಾರುಕಟ್ಟೆಗೆ ಉತ್ತೇಜನ ಸಿಗಲಿದೆ. ‘ಕೋಟಾ’ ಆಧಾರಿತ ಸುಂಕ ರಿಯಾಯಿತಿಗಳಿಗೆ ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ವೇಗವಾಗಿ ಬೆಳೆಯುತ್ತಿರುವ ಭಾರತೀಯ ಆಟೋ ಉದ್ಯಮವನ್ನು ರಕ್ಷಿಸಲು ಈ ಕ್ರಮಕೈಗೊಳ್ಳಲಾಗಿದೆ. ಭಾರತೀಯ ಆಟೋ ಮಾರುಕಟ್ಟೆಯಲ್ಲಿ 10 ಲಕ್ಷದಿಂದ 25 ಲಕ್ಷ ರೂ. ವರೆಗಿನ ಬೆಲೆಯ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಇದರಲ್ಲಿ ಯುರೋಪ್ ಒಕ್ಕೂಟ ಆಸಕ್ತಿ ಹೊಂದಿಲ್ಲ. ಹೀಗಾಗಿ, ಭಾರತದಲ್ಲೇ ಕಾರುಗಳನ್ನು ತಯಾರಿಸಿ ರಫ್ತು ಮಾಡುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಕಡಿಮೆ ಬೆಲೆಗೆ ವೈನ್
ಫ್ರಾನ್ಸ್, ಇಟಲಿ ಮತ್ತು ಸ್ಪೇನ್ನಂತಹ ಯುರೋಪಿಯನ್ ಮಾರುಕಟ್ಟೆಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ವೈನ್ ಮತ್ತಷ್ಟು ಅಗ್ಗವಾಗಲಿದೆ. ಪ್ರಸ್ತುತ, ಭಾರತವು ಆಮದು ಮಾಡಿಕೊಳ್ಳುವ ವೈನ್ಗೆ 150% ರಷ್ಟು ಆಮದು ಸುಂಕವನ್ನು ವಿಧಿಸುತ್ತದೆ. ಹೊಸ ಒಪ್ಪಂದವು ಇದನ್ನು 20%ಗೆ ಇಳಿಸಲು ಪ್ರಸ್ತಾಪ ಹೊಂದಿದೆ. ಇದರಿಂದ ವೈನ್ ಬೆಲೆ ಗಮನಾರ್ಹವಾಗಿ ಕಡಿಮೆಯಾಗಲಿದೆ. ಬಿಯರ್ ಮೇಲಿನ ಸುಂಕವನ್ನು 50% ಕ್ಕೆ ಇಳಿಸಲಿದೆ. ಇದರಿಂದ ದೇಶೀಯ ಮಾರುಕಟ್ಟೆಗಳ ಮೇಲಿನ ಪರಿಣಾಮ ಬೀರಬಹುದು. ಇದನ್ನು ನಿರ್ವಹಿಸಲು 5-10 ವರ್ಷಗಳ ಅವಧಿಯಲ್ಲಿ ಕ್ರಮೇಣ ಜಾರಿಗೆ ತರಲಾಗುತ್ತದೆ. ಭಾರತದಲ್ಲಿ ಕಾಗ್ನ್ಯಾಕ್, ಪ್ರೀಮಿಯಂ ಜಿನ್ಗಳು ಮತ್ತು ವೋಡ್ಕಾಗಳು ಅಗ್ಗವಾಗಲಿವೆ. 2.5 ಯುರೋಗಳಿಗಿಂತ ಕಡಿಮೆ ಬೆಲೆಯ ವೈನ್ಗಳಿಗೆ ಯಾವುದೇ ಸುಂಕ ರಿಯಾಯಿತಿ ಇರುವುದಿಲ್ಲ. ಇದು ಭಾರತೀಯ ಮಾರುಕಟ್ಟೆಯನ್ನು ರಕ್ಷಿಸುವ ಉದ್ದೇಶವಾಗಿದೆ. ಒಪ್ಪಂದದ ಪ್ರಕಾರ, ಭಾರತೀಯ ವೈನ್ಗಳು ಸಹ EU ಸದಸ್ಯ ರಾಷ್ಟ್ರಗಳಲ್ಲಿ ಸುಂಕ ರಿಯಾಯಿತಿಗಳನ್ನು ಪಡೆಯುತ್ತವೆ.
ಔಷಧಿಗಳ ಬೆಲೆಯಲ್ಲೂ ಇಳಿಕೆ
ಯುರೋಪ್ ತನ್ನ ಅತ್ಯಾಧುನಿಕ ಆರೋಗ್ಯ ರಕ್ಷಣಾ ತಂತ್ರಜ್ಞಾನಗಳಿಗೆ ಹೆಸರುವಾಸಿಯಾಗಿದೆ. ಈ ಒಪ್ಪಂದದಿಂದ ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಆಮದು ಮಾಡಿಕೊಳ್ಳುವ ಔಷಧಿಗಳು ಭಾರತದಲ್ಲಿ ಅಗ್ಗವಾಗಲಿವೆ. ಯುರೋಪಿನಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ವೈದ್ಯಕೀಯ ಉಪಕರಣಗಳ ಬೆಲೆಗಳನ್ನು ಸಹ ಕಡಿಮೆ ಮಾಡುತ್ತದೆ. ಈ ಒಪ್ಪಂದವು ಭಾರತ ತಯಾರಿಸಿದ ಔಷಧಿಗಳಿಗೆ 27 ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರುಕಟ್ಟೆಯನ್ನು ಒದಗಿಸುತ್ತದೆ. ಇದನ್ನೂ ಓದಿ: ಭಾರತ-ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದಕ್ಕೆ ಸಹಿ
ಎಲೆಕ್ಟ್ರಾನಿಕ್ ಮತ್ತು ಹೈಟೆಕ್ ಯಂತ್ರೋಪಕರಣ
ಯುರೋಪ್ನಿಂದ ಆಮದು ಮಾಡಿಕೊಳ್ಳುವ ವಿಮಾನಗಳ ಬಿಡಿಭಾಗಗಳು, ಮೊಬೈಲ್ ಫೋನ್ಗಳು ಮತ್ತು ಹೈಟೆಕ್ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಲಾಗುವುದು. ಇದು ಭಾರತದಲ್ಲಿ ಗ್ಯಾಜೆಟ್ಗಳ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದ ಗ್ರಾಹಕರಿಗೆ ತುಂಬಾ ಪ್ರಯೋಜನವಾಗಲಿದೆ. ಮೊಬೈಲ್ ಫೋನ್ಗಳು ಅಗ್ಗದ ದರದಲ್ಲಿ ಸಿಗಲಿವೆ.
ಮನೆ ಖರೀದಿದಾರರಿಗೆ ಲಾಭ
ಕಬ್ಬಿಣ, ಉಕ್ಕು ಮತ್ತು ರಾಸಾಯನಿಕ ಉತ್ಪನ್ನಗಳ ಮೇಲೆ 0% ಸುಂಕದ ಪ್ರಸ್ತಾಪವಿದೆ. ಇದು ನಿರ್ಮಾಣ ಮತ್ತು ಕೈಗಾರಿಕಾ ವಲಯಗಳಲ್ಲಿ ಕಚ್ಚಾ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬಹುದು. ಮನೆ ಖರೀದಿದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಈ ವ್ಯಾಪಾರ ಒಪ್ಪಂದವು ಭಾರತೀಯ ರಫ್ತಿಗೆ ದೊಡ್ಡ ಗೆಲುವಾಗಿದೆ. ಭಾರತದಲ್ಲಿ ತಯಾರಿಸಿದ ಉಡುಪುಗಳು, ಚರ್ಮ ಮತ್ತು ಆಭರಣಗಳಿಗೆ ಬೃಹತ್ ಯುರೋಪಿಯನ್ ಮಾರುಕಟ್ಟೆಯನ್ನು ತೆರೆಯುತ್ತದೆ.
ಯುರೋಪ್ ಮಾರುಕಟ್ಟೆಯಲ್ಲಿ ಭಾರತ ಕಮಾಲ್
ಯುರೋಪಿಯನ್ ಒಕ್ಕೂಟವು ಏಳು ವರ್ಷಗಳ ಅವಧಿಯಲ್ಲಿ ವ್ಯಾಪಾರ ಮಾಡುವ ಸರಕುಗಳ 99.5% ರಷ್ಟು ಆಮದು ಸುಂಕವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಭಾರತೀಯ ಸಮುದ್ರ ಉತ್ಪನ್ನಗಳು, ಚರ್ಮ ಮತ್ತು ಜವಳಿ ಸರಕುಗಳು, ರಾಸಾಯನಿಕಗಳು, ರಬ್ಬರ್, ಮೂಲ ಲೋಹಗಳು, ರತ್ನಗಳು ಮತ್ತು ಆಭರಣಗಳ ಮೇಲಿನ ಸುಂಕವನ್ನು 0% ತರುವುದು ಸೇರಿದೆ ಎಂದು ಭಾರತದ ವ್ಯಾಪಾರ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಭಾರತಕ್ಕೆ ನಾವು 25% ದಂಡ ಹಾಕಿದ ನಂತರವೂ ಯರೋಪ್ ಒಪ್ಪಂದ ಮಾಡಿದ್ದು ನಿರಾಸೆಯಾಗಿದೆ: ಅಮೆರಿಕ





