ನಿಮ್ಮ ಪಬ್ಲಿಕ್‌ ಟಿವಿಗೆ 13ನೇ ಸಂಭ್ರಮ!

Public TV
8 Min Read

“ಯಾರ ಆಸ್ತಿಯೂ ಅಲ್ಲ. ಇದು ನಿಮ್ಮ ಟಿವಿ” ಎಂಬ ಘೋಷ ವಾಕ್ಯದೊಂದಿಗೆ ಫೆಬ್ರವರಿ 12, 2012ರಂದು ಲೋಕಾರ್ಪಣೆಗೊಂಡ ಕನ್ನಡಿಗರ ಹೆಮ್ಮೆಯ ಸುದ್ದಿವಾಹಿನಿ ನಿಮ್ಮ ಪಬ್ಲಿಕ್ ಟಿವಿಗೆ (PUBLiC TV) ಇಂದು 13ನೇ ಹುಟ್ಟುಹಬ್ಬದ ಸಂಭ್ರಮ. ಪಬ್ಲಿಕ್ ಮೂವೀಸ್‌ಗೆ (PUBLIC MOVIES) 7 ರ ಸಂಭ್ರಮ.

ಪಬ್ಲಿಕ್ ಟಿವಿಯ ಈ 13 ವರ್ಷ ಸಾಧನೆಯ ಹಿಂದೆ ಸ್ಫೂರ್ತಿದಾಯಕ ಕಥೆಯಿದೆ. ಪುಟ್ಟ ಕುಟುಂಬವಾಗಿ ಶುರುವಾದ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ ಇಂದು ಇಷ್ಟು ದೊಡ್ಡ ಬಳಗ ಹೊಂದಲು ನಿಮ್ಮೆಲ್ಲರ ಪ್ರೀತಿಯೇ ಮುಖ್ಯ ಕಾರಣ. ನಮ್ಮನ್ನು ನೀವು ನಿರಂತರವಾಗಿ ಪ್ರೋತ್ಸಾಹಿಸಿದ್ದರಿಂದ ನಾವು ಅಂಬೆಗಾಲಿನಿಂದ 12 ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ನಿಧಾನವಾಗಿ ನಡೆಯಲು ಆರಂಭಿಸಿದ್ದೇವೆ.

12 ಪುಟ್ಟ ಹೆಜ್ಜೆಗಳನ್ನು ಇಟಿದ್ದೇವೆ ಹೌದು. ಆದರೆ ನಮ್ಮು ಮುಂದಿನ ಹೆಜ್ಜೆಯ ಮುಂದೆ ದೊಡ್ಡ ಸವಾಲಿದ್ದು ಇಂದು ಜನರ ಕೈಯಲ್ಲೇ ಟಿವಿಯಿದೆ. ಕೈಯಲ್ಲೊಂದು ಫೋನ್‌ ಇದ್ದರೆ ವಿಶ್ವದ ಸಕಲ ಮಾಹಿತಿಗಳು ಬೆರಳಂಚಿನಲ್ಲೇ ಸಿಗುತ್ತಿದೆ. ಸಾಮಾಜಿಕ ಜಾಲತಾಣಗಳು ಇಂದು ಮಾಧ್ಯಮವಾಗಿ ಬದಲಾಗಿದ್ದು ಲೆಕ್ಕವಿಲ್ಲದ್ದಷ್ಟು ಚಾನೆಲ್‌ಗಳು ಸೃಷ್ಟಿಯಾಗಿವೆ. ಪರಿಸ್ಥಿತಿ ಹೀಗಿರುವಾಗ ಸುದ್ದಿಯನ್ನು ಅತ್ಯಂತ ಶೀಘ್ರವಾಗಿ, ಎಲ್ಲರಿಗಿಂತ ಮೊದಲು ಮತ್ತು ಘಟನೆಯ ಸತ್ಯಾಸತ್ಯತೆಯ ಪರಿಶೀಲನೆ ಮಾಡಿ ಪ್ರಸಾರ ಮಾಡುವುದು ಅಂದರೆ ಸುಲಭದ ಮಾತಲ್ಲ. ಸುದ್ದಿ ಹೊತ್ತು ತಂದ ವರದಿಗಾರನಿಂದ ಹಿಡಿದು, ಸುದ್ದಿಪ್ರತಿಯನ್ನು ತಿದ್ದಿ ತೀಡಿ, ಸುದ್ದಿವಾಚಕರ ಮೂಲಕ ವೀಕ್ಷಕರಿಗೆ ತಲುಪಿಸುವವರೆಗೂ ಆ ವಾರ್ತೆಯ ಹಿಂದೆ ಹಲವರ ಶ್ರದ್ಧೆ ಮತ್ತು ಶ್ರಮವಿರುತ್ತದೆ.

ಇಚ್ಛಾಶಕ್ತಿ, ದೃಢ ಸಂಕಲ್ಪ, ಹಠ-ಛಲವಿದ್ದರೆ ಬೆಟ್ಟವನ್ನೇ ಕುಟ್ಟಿ ಪುಡಿಗಟ್ಟಬಹುದು ಎನ್ನುತ್ತಾರೆ ಹಿರಿಯರು. ಪಬ್ಲಿಕ್ ಟಿವಿಯ ಆರೋಹಣದ ಹಿಂದೆಯೂ ಇಂಥದ್ದೇ ಸ್ಫೂರ್ತಿದಾಯಕ ಕಥೆಯಿದೆ. ಹೆಚ್.ಆರ್.ರಂಗನಾಥ್ (HR Ranganath) ಅವರು ತಮ್ಮ ಪ್ರತಿಭೆ, ಸಾಮರ್ಥ್ಯವನ್ನೇ ಶಕ್ತಿಯಾಗಿಸಿ, ವೃತ್ತಿನಿಷ್ಠೆ ಹಾಗೂ ಸ್ಪಷ್ಟ ಗುರಿಯೊಂದಿಗೆ ಉತ್ತಮ ತಂಡವನ್ನು ಕಟ್ಟಿದ್ದರಿಂದ ಪಬ್ಲಿಕ್‌ ಟಿವಿ ಇಂದು ಕನ್ನಡದ ಜನಪ್ರಿಯ ಸುದ್ದಿ ವಾಹಿನಿಯಾಗಿ ಹೊರಹೊಮ್ಮಿದೆ.

ಈ 13 ವರ್ಷದ ಪಬ್ಲಿಕ್‌ ಟಿವಿ ಪ್ರಯಾಣ ಸುಲಭವಾಗಿರಲಿಲ್ಲ. ಹಲವು ಸಂಕಷ್ಟಗಳು ಬಂದರೂ ನಮ್ಮ ಕೈ ಹಿಡಿದು ಮುನ್ನಡೆಸಿದ್ದು ವೀಕ್ಷಕರಾದ ನೀವು. ವೀಕ್ಷಕ ಪ್ರಭುವಿನ ಪ್ರೀತಿಯಿಲ್ಲದೆ ನಾವಿಲ್ಲ. ನಿಮ್ಮೆಲ್ಲರ ಸಹಕಾರಕ್ಕೆ ಕೋಟಿ ನಮನ. 13 ವರುಷಗಳ ನಮ್ಮ ನಿಮ್ಮ ಈ ಅವಿಸ್ಮರಣೀಯ ಅನುಬಂಧ ಸದಾ ಹೀಗೆಯೇ ಮುಂದುವರಿಯಬೇಕು ಎನ್ನುವುದು ನಮ್ಮ ಆಶಯ. ನಮ್ಮ ಈ ಬೆಳವಣಿಗೆಯಲ್ಲಿ ಸಹಕಾರ ನೀಡಿದ ಜಾಹೀರಾತುದಾರರು ಹಾಗೂ ಕೇಬಲ್ ಆಪರೇಟರ್‌ಗಳಿಗೂ ಹೃದಯಪೂರ್ವಕ ಧನ್ಯವಾದ ಹೇಳುತ್ತಾ 2012 ರಿಂದ 2024 ವರೆಗಿನ 12 ವರ್ಷದ ಪಬ್ಲಿಕ್‌ ಟಿವಿ ಪ್ರಯಾಣ ಹೇಗಿತ್ತು ಎಂಬ ಕಿರು ವಿವರವನ್ನು ಇಲ್ಲಿ ನೀಡಲಾಗಿದೆ.

2012:
ಜನರಿಗಾಗಿ, ಜನರಿಗೋಸ್ಕರ ಎಂಬ ಘೋಷವಾಕ್ಯದೊಂದಿಗೆ ಪಬ್ಲಿಕ್‌ ಟಿವಿ ಆರಂಭಗೊಂಡಿತ್ತು. ಪರೀಕ್ಷೆ ಬರೆದು ತೇರ್ಗಡೆಯಾದ ಅಭ್ಯರ್ಥಿಗಳಿಗೆ 3 ತಿಂಗಳು ತರಬೇತಿ ನೀಡಿದ ಬಳಿಕ ವಾಹಿನಿಯನ್ನು ಆರಂಭಿಸಲಾಗಿತ್ತು. ಉದ್ಯೋಗಿಗಳ ಪೈಕಿ ಶೇ.80 ರಷ್ಟು ಮಂದಿ ಮಾಧ್ಯಮ ಜಗತ್ತಿಗೆ ಹೊಸಬರು. ಲೋಕಾರ್ಪಣೆಗೊಂಡ ಮೊದಲ ವಾರ್ತೆಯಲ್ಲೇ ಭಾಷೆ, ನೆಲ, ಜಲದ ವಿಷಯದಲ್ಲಿ ನಾವು ರಾಜಿಯಾಗುವುದಿಲ್ಲ ಎಂದು ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ ಅವರು ಜನರಿಗೆ ಆಶ್ವಾಸನೆ ನೀಡಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ಡಿವಿ ಸದಾನಂದ ಗೌಡ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ , ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಾಹಿನಿಗೆ ಶುಭ ಹಾರೈಸಿದ್ದರು.

2013:
ಮೊದಲ ವರ್ಷದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ನಟ ಟಿಎಸ್‌ ನಾಗಾಭರಣ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಹೆಚ್‌.ಆರ್‌. ರಂಗನಾಥ್‌ ಅವರ ಪತ್ರಿಕೋದ್ಯಮ ಗುರು ಸತ್ಯ, ನಟ ನೆನಪಿರಲಿ ಪ್ರೇಮ್‌, ಕ್ರೀಡಾಪಟು ಗಿರೀಶ್‌, ಆಟೋ ಚಾಲಕ ವೇಣುಗೋಪಾಲ್‌ ಸೇರಿದಂತೆ ಹಲವು ಗಣ್ಯರ ಜೊತೆ ʼಪಬ್ಲಿಕ್‌ ವಿಥ್‌ ಪಬ್ಲಿಕ್ಸ್‌ʼ ಹೆಸರಿನ ಕಾರ್ಯಕ್ರಮ ನಡೆಯಿತು. ಅಂದು ಸಂಜೆ ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರ ಸಂದರ್ಶನ ʼಕೃಷ್ಣ ಪಯಣʼ ನಡೆಯಿತು.

2014:
ರಾಷ್ಟ್ರವಾಪಿ ಲೋಕಪಾಲ್‌ ವಿರುದ್ಧ ಹೋರಾಟ ನಡೆದ ವರ್ಷ ಇದು. ಎರಡನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಅಂದೇ ಸಿಎಂ ಸಿದ್ದರಾಮಯ್ಯನವರ ಜೊತೆಗಿನ ವಿಶೇಷ ಸಂದರ್ಶನ ಸಹ ಪ್ರಸಾರವಾಗಿತ್ತು. 2014 ರ ಸೆಪ್ಟೆಂಬರ್‌ 27 ರಂದು ರೈಟ್‌ಮೆನ್‌ ಮೀಡಿಯಾದ ಎರಡನೇ ವಾಹಿನಿ ʼಪಬ್ಲಿಕ್‌ ಮ್ಯೂಸಿಕ್‌ʼ ಆರಂಭವಾಗಿತ್ತು.

2015:
ಸರಳವಾಗಿ ಪಬ್ಲಿಕ್‌ ಟಿವಿ ಕಚೇರಿಯಲ್ಲಿ 3ನೇ ವಾರ್ಷಿಕೋತ್ಸವ ನಡೆಯಿತು. ಪಬ್ಲಿಕ್‌ ಟಿವಿ ಸಹೋದ್ಯೋಗಿಗಳ ಜೊತೆ ಹೆಚ್‌ ಆರ್‌ ರಂಗನಾಥ್‌ ದಂಪತಿ ಅವರು ಕೇಕ್‌ ಕತ್ತರಿಸಿದರು. ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ಸೇರಿದಂತೆ ಹಲವು ಗಣ್ಯರು ಪಬ್ಲಿಕ್‌ ಟಿವಿ ಕಚೇರಿಗೆ ಆಗಮಿಸಿ ಶುಭ ಹಾರೈಸಿದ್ದರು.

2016:
ಫೆಬ್ರವರಿ 3 ರಂದು ವಿಶ್ವ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ 9 ಮಂದಿ ಮೃತಪಟ್ಟಿದ್ದರೆ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ಹನುಮಂತಪ್ಪ ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ವೀರ ಮರಣ ಹೊಂದಿದ್ದರು. 10 ಮಂದಿ ವೀರ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿ 4ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿತ್ತು.

2017:
ಪಬ್ಲಿಕ್‌ ಟಿವಿ 5ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ,  ದಿ.ಎಸ್‌ಎಂ ಕೃಷ್ಣ, ಕೇಂದ್ರ ಸಚಿವರಾಗಿದ್ದ ದಿ.ಅನಂತ್‌ ಕುಮಾರ್‌, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಆರ್‌ ಅಶೋಕ್‌ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. 5ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯದ ಸಾಧಕರನ್ನು ಪುರಸ್ಕರಿಸಲಾಗಿತ್ತು. ಖ್ಯಾತ ನಿರೂಪಕಿ ಅನುಶ್ರೀ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.

2018:
6ನೇ ವಾರ್ಷಿಕೋತ್ಸವದಂದು ಪಬ್ಲಿಕ್‌ ಟಿವಿಯ ಮಾತೃ ಸಂಸ್ಥೆ ರೈಟ್‌ ಮೆನ್‌ ಮೀಡಿಯಾದ ಮೂರನೇ ಕೂಡಿ ʼಪಬ್ಲಿಕ್‌ ಮೂವೀಸ್‌ʼ ಲೋಕಾರ್ಪಣೆಗೊಂಡ ವರ್ಷ. ಈ ವಾಹಿನಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌, ರಮೇಶ್‌ ಅರವಿಂದ್‌, ಶ್ರೀನಾಥ್‌, ಜಯಮಾಲಾ, ಲಹರಿ ಮ್ಯೂಸಿಕ್‌ ಸಂಸ್ಥೆಯ ಜಿ. ಮನೋಹರ ನಾಯ್ಡು, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಭಾಗಿಯಾಗಿದ್ದರು.

2019:
ಲಕ್ಷಾಂತರ ಮಕ್ಕಳಿಗೆ ಆಶ್ರಯ, ಅನ್ನ, ಅಕ್ಷರ ನೀಡಿದ ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಜನವರಿಯಲ್ಲಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಸಪ್ತ ಸಂವತ್ಸರ ಸಂಭ್ರಮಾಚರಣೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿತ್ತು. ಸಂಭ್ರಮಾಚರಣೆಯ ಬದಲು ಶ್ರೀಗಳ ಗೌರವಾರ್ಥ ಮಠದ ದಾಸೋಹ ನಿಧಿಗೆ ವಾಹಿನಿ ವತಿಯಿಂದ ಅಳಿಲು ಸೇವೆ ಮಾಡಲು ನಿರ್ಣಯಿಸಲಾಯಿತು. ಅದರಂತೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಸಿದ್ದಲಿಂಗ ಶ್ರೀಗಳಿಗೆ 5 ಲಕ್ಷ ರೂ. ಚೆಕ್ ಹಸ್ತಾಂತರಿಸಿದ್ದರು.

2020:
2019ರ ಕೊನೆಯಲ್ಲಿ ಆರಂಭಗೊಂಡ ಕೋವಿಡ್‌ 2020ರ ಆರಂಭದಲ್ಲಿ ವಿಶ್ವಾದ್ಯಂತ ಹರಡಲು ಆರಂಭವಾಯಿತು. ಈ ಕಾರಣಕ್ಕೆ ಪಬ್ಲಿಕ್‌ ಟಿವಿಯ 8ನೇ ವರ್ಷ ಮತ್ತು ಪಬ್ಲಿಕ್‌ ಮೂವೀಸ್‌ನ 2ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಆಹ್ವಾನಿಸಿರಲಿಲ್ಲ. ಪಬ್ಲಿಕ್‌ ಟಿವಿ ಕಚೇರಿಯಲ್ಲಿ ಸರಳವಾಗಿ ಕೇಕ್‌ ಕತ್ತರಿಸುವ ಮೂಲಕ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಲಾಕ್‌ಡೌನ್‌ ನಿಂದ ಸಂಕಷ್ಟ ಅನುಭವಿಸಿದ ಜನರಿಗೆ ನೆರವಾಗಲು ಹೆಚ್‌.ಆರ್‌.ರಂಗನಾಥ್‌ ಅವರು ನಡೆಸಿಕೊಡುತ್ತಿದ್ದ ʼಮನೆಯೇ ಮಂತ್ರಾಲಯʼ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಸಂಕಷ್ಟದಲ್ಲಿದ್ದ ಸಾವಿರಾರು ಮಂದಿಗೆ ಈ ಕಾರ್ಯಕ್ರಮ ಸಹಾಯ ನೀಡಿತ್ತು. ಇದರ ಜೊತೆ ರಾಜ್ಯದ ಸರ್ಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ನೆರವು ನೀಡಲು ರೋಟರಿ ಸಹಾಯೋಗದೊಂದಿಗೆ ʼಜ್ಞಾನದೀವಿಗೆʼ ಹೆಸರಿನಲ್ಲಿ ಉಚಿತ ಟ್ಯಾಬ್ಲೆಟ್‌ ನೀಡುವ ಮಹತ್ವಾಕಾಂಕ್ಷಿಯ ಯೋಜನೆಗೆ ಚಾಲನೆ ನೀಡಲಾಗಿತ್ತು.

 

2021:
9ನೇ ವರ್ಷದ ಸಂಭ್ರಮಾಚರಣೆಗೂ ಕೋವಿಡ್‌ ಭೀತಿ ಇತ್ತು. ಈ ಕಾರಣಕ್ಕೆ ಸರಳವಾಗಿಯೇ ಕಚೇರಿಯಲ್ಲಿ ವಾರ್ಷಿಕೋತ್ಸವ ಆಚರಿಸಲಾಯಿತು. ಅಂದು ಸಂಜೆ ʼದಿಗ್ಗಜರ ಬೆಳ್ಳಿ ಹಬ್ಬʼ ವಿಶೇಷ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್‌ ಮತ್ತು ರಂಗನಾಥ್‌ ಅವರನ್ನು ದಿವ್ಯಜ್ಯೋತಿ ಅವರು ಸಂದರ್ಶಿಸಿದರು.

 

2022:
ಪಬ್ಲಿಕ್‌ ಟಿವಿಗೆ ದಶಕದ ಸಂಭ್ರಮ. ಹತ್ತು ವರ್ಷ ಪೂರೈಸಿದ ಹಿನ್ನಲೆ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಲು ʼಪಬ್ಲಿಕ್ ರಥʼ ರಾಜ್ಯದ್ಯಾಂತ ಸಂಚಾರ ಮಾಡಿತ್ತು. ಮಾಜಿ ಸಿಎಂ ಯಡಿಯೂರಪ್ಪನವರು ಪಬ್ಲಿಕ್‌ ರಥಕ್ಕೆ ಚಾಲನೆ ನೀಡಿದ್ದರು. ವಾರ್ಷಿಕೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ನಟ ಶಿವರಾಜ್‌ ಕುಮಾರ್‌, ಗೀತಾ ಶಿವರಾಜ್‌ಕುಮಾರ್‌, ಲಹರಿ ಸಂಸ್ಥೆಯ ಮುಖ್ಯಸ್ಥ ಮನೋಹರ ನಾಯ್ಡು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪುನೀತ್‌ ಗೌರವಾರ್ಥ ‘ಶಕ್ತಿಧಾಮʼಕ್ಕೆ 25 ಲಕ್ಷ ರೂ.ನೀಡಲಾಯಿತು. ಅಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದರು. ದಶಕದ ಸಂಭ್ರಮದ ಹಿನ್ನೆಲೆಯಲ್ಲಿ ಪಬ್ಲಿಕ್‌ ಟಿವಿಯ ಎಲ್ಲಾ ಸಿಬ್ಬಂದಿಗೆ ಸನ್ಮಾನ ಮಾಡಲಾಗಿತ್ತು.

 

2023:
ಪಬ್ಲಿಕ್‌ ಟಿವಿ ಎಲ್ಲಾ ವಿಭಾಗದ ಮುಖ್ಯಸ್ಥರು ಕೇಕ್‌ ಕತ್ತರಿಸುವ ಮೂಲಕ 11 ವರ್ಷದ ಸಂಭ್ರಮಾಚರಣೆ ಮಾಡಲಾಯಿತು. ಒಂದು ಸಂಸ್ಥೆ ಬೆಳೆಯಬೇಕಾದರೆ ಉದ್ಯೋಗಿಗಳ ಪಾಲು ದೊಡ್ಡದು. ಉದ್ಯೋಗಿಗಳು ಶ್ರದ್ಧೆಯಿಂದ ಕೆಲಸ ಮಾಡಿದರೆ ಆ ಸಂಸ್ಥೆ ಮುಂದುವರಿಯುತ್ತದೆ. ಸಿಬ್ಬಂದಿಯಿಂದಲೇ ನಮ್ಮ ಸಂಸ್ಥೆಗೆ ಗೌರವ ಬಂದಿದೆ. ಪಬ್ಲಿಕ್‌ ಟಿವಿಗೆ ಗೌರವ ಬರಲು ಕಾರಣಾರಾದವರನ್ನು ಗೌರವಿಸಲು ಸಹೋದ್ಯೋಗಿಗಳ ಕೈಯಿಂದ ಕೇಕ್‌ ಕತ್ತರಿಸಲಾಗಿದೆ ಎಂದು ಹೆಚ್‌.ಆರ್‌.ರಂಗನಾಥ್‌ ಈ ಸಂದರ್ಭದಲ್ಲಿ ತಿಳಿಸಿದ್ದರು.

 

2024:
ರಾಮಮಂದಿರಕ್ಕೆ ಕೊಡುಗೆ ಕೊಟ್ಟ ಕರುನಾಡಿನ ಅಪರೂಪದ ಸಾಧಕರ ಜೊತೆಗೆ 12 ವರ್ಷದ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ ಕರ್ನಾಟಕದ ʼನವರತ್ನʼಗಳನ್ನು ಸನ್ಮಾನಿಸಲಾಯಿತು.

ರಾಮ ಲಲ್ಲಾನ ಪರ ಹಿಂದೆ ಅಲಹಾಬಾದ್ ಹೈಕೋರ್ಟ್​​ನಲ್ಲಿ ವಾದ ಮಂಡನೆ ಮಾಡಿದ್ದ ಕನ್ನಡಿಗ, ಸುಪ್ರೀಂ ಕೋರ್ಟ್​ ಹಿರಿಯ ವಕೀಲ, ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎನ್ ಭಟ್, ಬಾಲರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ ಮೈಸೂರಿನ ಅರುಣ್‌ ಯೋಗಿರಾಜ್‌, ರಾಮನ ಮೂರ್ತಿಗೆ ಮೂಲವಾದ ಕೃಷ್ಣ ಶಿಲೆಯನ್ನು ನೀಡಿದ ಜಾಗದ ಮಾಲೀಕ ರಾಮದಾಸ್‌, ರಾಮಮೂರ್ತಿ ನಿರ್ಮಾಣ ಮಾಡಿದ ಗಣೇಶ್‌ ಭಟ್‌, ಅಡಿಪಾಯ ಹಾಕುವುದರಿಂದ ಹಿಡಿದು ಕೆತ್ತನೆವರೆಗೂ ಎಲ್ಲಾ ಕಲ್ಲುಗಳ ಪರೀಕ್ಷೆಯನ್ನು ಮಾಡಿದ ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ (ಎನ್‌ಐಆರ್‌ಎಂ) ಪ್ರಾಂಶುಪಾಲ ಡಾ.ರಾಜನ್‌ ಬಾಬು, ಮುಹೂರ್ತ ನೀಡಿದ ವಿಜಯೇಂದ್ರ ಶರ್ಮಾ, ದೇಗುಲದ ಲೈಟಿಂಗ್ ಹೊಣೆ ಹೊತ್ತ ರಾಜೇಶ್‌ ಶೆಟ್ಟಿ, ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ರಚಿಸಿದ ಗಜಾನನ ಶರ್ಮಾ, ಲೋಗೋ ವಿನ್ಯಾಸಗಾರ ರಮೇಶ್‌ ಜಿ ಅವರನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ, ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌, ಲಹರಿ ಕಂಪನಿಯ ಮುಖ್ಯಸ್ಥ ಮನೋಹರ್‌ ನಾಯ್ಡು ಅವರು ಅಭಿನಂದಿಸಿದ್ದರು.

 

Share This Article