ಮೊಬೈಲ್ ಟಾರ್ಚ್ ಹಿಡ್ಕೊಂಡು ಕೆಲಸ- ಬೆಂಗ್ಳೂರು ವಿಶ್ವೇಶ್ವರಯ್ಯ ಕೇಂದ್ರದ ಅವ್ಯವಸ್ಥೆ

Public TV
4 Min Read

– ಕೆಟ್ಟು ನಿಂತಿವೆ ಮೆಟಲ್ ಡಿಟೆಕ್ಟರ್
– ಭದ್ರತೆ ವ್ಯವಸ್ಥೆಯೂ ಇಲ್ಲ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಬೆಂಗಳೂರಿನ ವಿವಿ ಟವರ್ ನ  ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಲ್ಲಿ ಕತ್ತಲಲ್ಲಿ ಟಾರ್ಚ್ ಹಿಡ್ಕೊಂಡು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಸಾವಿರಾರು ಹೈಪ್ರೊಫೈಲ್ ಕಡತಗಳಿವೆ. ಅವುಗಳ ರಕ್ಷಣೆಗೆ ಟಾರ್ಚ್ ಹಿಡ್ಕೊಂಡು ಸಿಬ್ಬಂದಿ ನಿಂತುಕೊಂಡಿರುತ್ತಾರೆ. ಈ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಸೌಲಭ್ಯವಿದೆ. ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕವಿಲ್ಲದಿದ್ದಾಗ ಹೆಚ್ಚುವರಿಯಾಗಿ ಜನರೆಟರ್‍ಗಳನ್ನೂ ಅಳವಡಿಸಿದ್ದಾರೆ. ಆದರೆ ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಕರೆಂಟ್ ಹೋದಾಗ ಕತ್ತಲಲ್ಲೇ ಕೆಲಸ ಮಾಡಬೇಕಾಗುತ್ತೆ. ಈ ವೇಳೆ ಸರ್ಕಾರಿ ಕಡತಗಳನ್ನ ಖದೀಮರು ಸುಲಭವಾಗಿ ಎಗರಿಸಬಹುದು. ರಾಜ್ಯದ ಬಹುತೇಕ ಸರ್ಕಾರಿ ಇಲಾಖೆಯ ಕಡತಗಳಿಗೆ ಅಂತಿಮ ಮುದ್ರೆ ಬೀಳುವ ಈ ಕಚೇರಿಗಳಲ್ಲೇ ಕತ್ತಲು ತಾಂಡವವಾಡುತ್ತಿದೆ.

ಪ್ರತಿನಿಧಿ: ಎಕ್ಸ್ ಕ್ಯೂಸ್ ಮೀ ಸರ್.. ಯಾರಾದ್ರೂ ಇದ್ದೀರಾ. ಕಾಣಿಸ್ತಿಲ್ಲ
ಸಿಬ್ಬಂದಿ: ಹೇಳಿ..ಹೇಳಿ
ಪ್ರತಿನಿಧಿ: ಇಷ್ಟು ಕತ್ತಲಲ್ಲಿ ಇದ್ದೀರಾ. ಯಾರಾದ್ರೂ ಇದ್ದೀರಾ ಇಲ್ಲ ಅಂತ ಗೊತ್ತೇ ಆಗೋದಿಲ್ಲ. ಲೈಟ್ ಇಲ್ವಾ..?
ಸಿಬ್ಬಂದಿ: ಇಲ್ಲ.. ಹೋಗಿ..
ಪ್ರತಿನಿಧಿ: ಹಾ..ಯಾಕೆ ಕತ್ತಲಲ್ಲಿ ಇದ್ದೀರಿ..?
ಸಿಬ್ಬಂದಿ: ಕತ್ತಲಲ್ಲಿ ಇಲ್ಲದೆ ಏನು ಮಾಡೋಕೆ ಆಗುತ್ತೆ
ಪ್ರತಿನಿಧಿ: ಮೇಡಂ, ಇಷ್ಟು ಕತ್ತಲಿದೆ ಡಿಪಾಟ್ರ್ಮೆಂಟ್‍ನಲ್ಲಿ ಹೇಗೆ ಕೂರ್ತಿರಿ
ಸಿಬ್ಬಂದಿ: ಸುಮ್ನೆ ಕೂತಿದ್ದೀವಿ.. ಕೆಲಸ ಮಾಡೋಕೆ ಆಗಲ್ಲ. ಐದೂವರೆ ತನಕ ಆಫೀಸ್ ನಿಂದ ಹೊಗ್ಬಾರ್ದು ಅಲ್ವಾ..?

ಹೀಗೆ ಸರ್ಕಾರದ ಮೇಲೆ ಇಲ್ಲಿನ ಸಿಬ್ಬಂದಿಗೆ ಆಕ್ರೋಶವಿದೆ, ಆವೇಶವಿದೆ. ಆದರೆ ಮೇಲಾಧಿಕಾರಿಗಳಿಗೆ ಪ್ರಶ್ನಿಸದೆ ಅನಿವಾರ್ಯವಾಗಿ ಮೊಬೈಲ್ ಟಾರ್ಚ್ ಹಿಂಡ್ಕೊಂಡು ಕೆಲಸ ಮಾಡ್ತಾರೆ. ಮುಖ್ಯವಾಗಿ ಈ ಬಹುಮಡಿ ಕಟ್ಟಡ, ರಾಜಭವನ ವಿಧಾನಸೌಧ ಪಕ್ಕದಲ್ಲಿಯೇ ಇದೆ. ಯಾವುದೇ ತುರ್ತು ಸಂದರ್ಭದಲ್ಲಿ ಕಡತಗಳನ್ನ ವಿಧಾನಸೌಧಕ್ಕೆ ರವಾನಿಸಬೇಕಾದ್ರೂ ಇಲ್ಲಿಂದಲೇ ವ್ಯವಸ್ಥೆ ಮಾಡಲಾಗುತ್ತೆ. ಆದರೆ ಇಲ್ಲಿ ಭದ್ರತೆ ಇಲ್ಲ. ಇದೇ ಕಟ್ಟಡದಲ್ಲಿ ಸರ್ಕಾರದ ಬಹುತೇಕ ಇಲಾಖಾ ನಿರ್ದೇಶಕರ ಕಚೇರಿಗಳಿವೆ. ಈ ಕಚೇರಿಗಳಲ್ಲೂ ಕಡತಗಳನ್ನು ಬೇಕಾಬಿಟ್ಟಿ ಇಟ್ಟಿರ್ತಾರೆ. ಇವುಗಳ ಕಾವಲಿಗೆ ಅಂತ ಯಾವ ಸೆಕ್ಯೂರಿಟಿ ಕೂಡ ಇರಲ್ಲ. ಸರ್ಕಾರದ ಕಡತಗಳು ಖದೀಮರ ಕೈಗೆ ಸುಲಭವಾಗಿ ಇಲ್ಲಿ ಸಿಗಲಿವೆ.

ಸಂಸದ, ಕೇಂದ್ರ ಸಚಿವರ ಕಚೇರಿಗೂ ಇಲ್ಲ ಸೆಕ್ಯೂರಿಟಿ!
ಈ ಬಹುಮಹಡಿ ಕಟ್ಟಡದಲ್ಲಿ ಮೀನುಗಾರಿಕೆ ನಿರ್ದೇಶನಾಲಯ, ಕೃಷಿ ಇಲಾಖೆಯ ಜಾಗೃತ ಕೋಶ, ಸೇರಿದಂತೆ ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿಸಿ ಮೋಹನ್, ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದ ಗೌಡರ ಕಚೇರಿ, ಸಂಸತ್ ಸದಸ್ಯ (ರಾಜ್ಯಸಭೆ) ಡಾ. ಎಲ್ ಹನುಮಂತಯ್ಯ, ಕುಪೇಂದ್ರ ರೆಡ್ಡಿ ಕಚೇರಿಗೂ ಯಾವುದೇ ಭದ್ರತೆಯಿಲ್ಲ. ಯಾರು, ಯಾವ ಸಮಯದಲ್ಲಾದ್ರೂ ದುಷ್ಕೃತ್ಯವೆಸಗಿದರೂ ಪ್ರಶ್ನಿಸುವವರು ಯಾರೂ ಇಲ್ಲ. ಭದ್ರತೆಯ ಲೋಪದೋಷದ ಬಗ್ಗೆ ಇದೇ ಕಟ್ಟಡದಲ್ಲಿರೋ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ರೆ ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ. ವಿಧಾನಸೌಧ ಪೊಲೀಸರ ಜೊತೆ ಮಾತನಾಡಿ. ನಮ್ಮಿಂದ ಏನೂ ಮಾಡೋಕೆ ಆಗಲ್ಲ ಅಂತ ಅಲ್ಲಿನ ಪೊಲೀಸ್ ಸಿಬ್ಬಂದಿಯೊಬ್ಬರು ಅಸಹಾಯಕತೆ ತೋಡಿಕೊಂಡಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಫೇಸ್ ಬುಕ್ ನಲ್ಲಿ ಫುಲ್ ಬ್ಯುಸಿಯಾಗಿದ್ದ. ಹೀಗೆ ಪೊಲೀಸರ ನಿರ್ಲಕ್ಷ್ಯವೋ, ಸರ್ಕಾರದ ಇಚ್ಛಾಶಕ್ತಿಯ ಕೊರತೆಯೋ ಗೊತ್ತಿಲ್ಲ. ವಿವಿ ಟವರ್ ಗೆ ಬರೋ ಜನರಿಗೆ ಭದ್ರತೆಯಿಲ್ಲ ಅಂದ್ಮೇಲೆ ಯಾವ ಸೀಮೆಗೆ ಸರ್ಕಾರ, ಪೊಲೀಸ್ ಇಲಾಖೆ ಇರಬೇಕು ಅಂತ ಅಲ್ಲಿಗೆ ಬರೋ ಜನ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ವಿವಿ ಟವರ್ ನ ಮೂರು ಮುಖ್ಯ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟ್ ಗಳು ಕೆಟ್ಟು ನಿಂತಿವೆ. ಇವುಗಳನ್ನ ಶೋಕಿಗಾಗಿ ನಿಲ್ಲಿಸಿದ್ದು, ಅಲ್ಲದೆ ಭದ್ರತಾ ಸಿಬ್ಬಂದಿಯನ್ನೂ ಈ ಶೋಕಿ ಮೆಟಲ್ ಡಿಟೆಕ್ಟರ್ ನ ಭದ್ರತೆಗೆ ನಿಯೋಜನೆ ಮಾಡಿದ್ದಾರೆ.

ಪ್ರತಿನಿಧಿ: ಏನು ಮೇಡಂ, ಸೌಂಡ್ ಆಗಲ್ವಾ..?
ಪೊಲೀಸ್ ಸಿಬ್ಬಂದಿ: ಆಫ್ ಆಗಿದೆ. ಸ್ವಲ್ಪ ಪ್ರಾಬ್ಲಂ ಇದೆ. ವರ್ಕ್ ಆಗ್ತಿಲ್ಲ
ಪ್ರತಿನಿಧಿ: ನಾವೇ ಮೂರು ಸಲ ಹೋದ್ವಿ. ಸೌಂಡೇ ಆಗ್ಲಿಲ್ಲ.
ಪೊಲೀಸ್ ಸಿಬ್ಬಂದಿ: ಆಫ್ ಆಗಿದೆ ಅಂತ ಹೇಳ್ತಿದ್ದೀನಿ ಅಲ್ವಾ. ಇದು ಹಾಳಾಗಿದೆ. ಹಾಗಾಗಿ ಚೆನ್ನಾಗಿರೋದು ಎಂಎಸ್ ಬಿಲ್ಡಿಂಗ್‍ಗೆ ಎತ್ತಿಕೊಂಡು ಹೋದ್ರು. ಅಲ್ಲಿ ಹಾಳಾಗಿರೋದು ಇಲ್ಲಿ ಹಾಕಿದ್ದಾರೆ. ಅದ್ಕೆ ಇದು ವರ್ಕ್ ಆಗ್ತಿಲ್ಲ. ಪಬ್ಲಿಕ್ ಇಲ್ಲಿಂದ ಜಾಸ್ತಿ ಬರೋದಿಲ್ಲ. ಹಾಗಾಗಿ ಇಲ್ಲೇ ಹಾಕಿದ್ದೀವಿ.
ಪ್ರತಿನಿಧಿ: ಮಧ್ಯಾಹ್ನ ಪಬ್ಲಿಕ್ ಇಲ್ಲಿಂದನೇ ಸುಮಾರು ಜನ ಹೋದ್ರು
ಪೊಲೀಸ್ ಸಿಬ್ಬಂದಿ: ಪಬ್ಲಿಕ್ ಆ ಗೇಟ್ ನಿಂದಲೇ ಹೋಗ್ತಾರೆ. ಸುಮ್ನೆ ಏನಕ್ಕೆ ಅಂತ. ಅಷ್ಟೊಂದು ಇದಿಲ್ಲ. ಹೇಳ್ಕೊಳ್ಳುವಂತದ್ದು ಏನಿಲ್ಲ. ಪ್ರೊಸೆಸ್ ಏನಿಲ್ಲ..ಸೋ…

ಹೀಗೆ ಒಂದಲ್ಲ, ಎರಡಲ್ಲ, ಸಾಲು ಸಾಲು ಅವ್ಯವಸ್ಥೆಗಳು ವಿವಿ ಟವರ್ ನಲ್ಲಿ ತಾಂಡವಾವಾಡ್ತಿವೆ. ಸರ್ಕಾರಿ ಇಲಾಖೆಯ ಹಲವು ನಿರ್ದೇಶಕರು ಕೂಡ ಪ್ರತಿನಿತ್ಯ ಕೆಟ್ಟು ನಿಂತಿರೋ ಮೆಟಲ್ ಡಿಟೆಕ್ಟರ್ ಗಳ ಮೂಲಕವೇ ತಮ್ಮ ಕಚೇರಿಗಳಿಗೆ ಹೋಗ್ತಾರೆ. ಆದರೆ ಈ ಬಗ್ಗೆ ಒಬ್ಬೇ ಒಬ್ಬರು ಚಕಾರ ಎತ್ತದಿರೋದು ವಿಪರ್ಯಾಸ. ಜನ ಹಾಗೂ ಸರ್ಕಾರಿ ಕಚೇರಿಗಳ ಬಗ್ಗೆ ಇಷ್ಟೊಂದು ತಾತ್ಸರ ಮನೋಭಾವ ಹೊಂದಿರೋ ಸರ್ಕಾರ ಹಾಗೂ ಪೊಲೀಸರು ಯಾವ ಸೀಮೆಗೆ ಬೇಕು ಅಂತ ಬೇಸರ ವ್ಯಕ್ತಪಡಿಸ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *