ಡೆಡ್ಲಿ ವೆಪನ್ ಸಿಟಿಯಾದ ಸಿಲಿಕಾನ್ ಸಿಟಿ-ರೋಡ್ ರೋಡಲ್ಲಿ ಬಿಕರಿಯಾಗುತ್ತೆ ಬಾರ್ಚಿ?

Public TV
3 Min Read

-ಪಬ್ಲಿಕ್ ಟಿವಿಯಿಂದ ಸ್ಟಿಂಗ್ ಆಪರೇಷನ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿಯ ಭೂಗತ ಲೋಕವೊಂದು ಸದ್ದು ಮಾಡುತ್ತಲೇ ಇರುತ್ತದೆ. ಕೆಲವೊಮ್ಮೆ ರೌಡಿಗಳು ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗುತ್ತಾರೆ. ಕೊನೆಗೆ ಪೊಲೀಸರು ರೌಡಿಗಳ ಮೇಲೆ ಗುಂಡು ಹಾರಿಸಿ ಬಂಧಿಸುತ್ತಾರೆ. ಈ ಎಲ್ಲ ರೌಡಿಗಳಿಗೆ ಮಾರಕಾಸ್ತ್ರಗಳು ಎಲ್ಲಿ ಸಿಗುತ್ತವೆ ಎಂಬುದನ್ನು ಪತ್ತೆ ಹಚ್ಚಲು ಪಬ್ಲಿಕ್ ಟಿವಿ ತಂಡ ಪ್ರಾಣದ ಹಂಗು ತೊರೆದು `ಡೆಡ್ಲಿ ವೆಪನ್ ಅಡ್ಡಾ’ಗೆ ಎಂಟ್ರಿ ಕೊಟ್ಟಿತು. ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್ ಕ್ಯಾಮೆರಾದಲ್ಲಿ ಕಂಡಿದ್ದು ಮಾತ್ರ ಬೆಚ್ಚಿ ಬೀಳುವ ದೃಶ್ಯಗಳು.

ಡೆಡ್ಲಿ ವೆಪನ್‍ಗಳ ಮಾರಾಟ ಮಾಡುವ ಸ್ಥಳದ ಬಗ್ಗೆ ಖಚಿತ ಸುಳಿವು ಸಿಕ್ಕ ತಕ್ಷಣ ಪಬ್ಲಿಕ್ ಟಿವಿಯ ಸ್ಟಿಂಗ್ ಆಪರೇಷನ್ ಟೀಂ ಪ್ರಾಣದ ಹಂಗು ತೊರೆದು ಫೀಲ್ಡಿಗೆ ಇಳಿದಿತ್ತು. ಯಶವಂತಪುರ ರೈಲು ನಿಲ್ದಾಣದ ಹಿಂಭಾಗದಲ್ಲಿರುವ ಸ್ಲಂಗೆ ಸ್ಟಿಂಗ್ ಟೀಂ ಮೊದಲು ಎಂಟ್ರಿ ಕೊಟ್ಟಿತ್ತು. ಅಲ್ಲಿ ಎದುರಾಗಿದ್ದು ಓರ್ವ ಪಂಜಾಬಿ ವ್ಯಕ್ತಿ. ನೋಡೋದಕ್ಕೆ ಅಮಾಯಕನಂತೆ ಕಂಡರೂ ಇವನು ಮೋಸ್ಟ್ ಡೆಡ್ಲಿಯೆಸ್ಟ್ ಪರ್ಸನ್. ಈತನ ಕಂಕುಳಲ್ಲೇ ಇರುವ ಬ್ಯಾಗ್‍ನಲ್ಲಿ ಮಾರಕಾಸ್ತ್ರಗಳು ಬೆಚ್ಚಗೆ, ತಣ್ಣಗೆ ಮಲಗಿರುತ್ತವೆ.

ಮಾರಕಾಸ್ತ್ರಗಳ ಖರೀದಿಗೆ ಬಂದಿದ್ದೇವೆ ಎಂದು ಪರಿಚಯ ಮಾಡಿಕೊಂಡ ತಂಡ, ಆತನೊಂದಿಗೆ ವ್ಯವಹಾರಕ್ಕೆ ಇಳಿಯಿತು. ನಮ್ಮನ್ನು ಖರೀದಿದಾರರು ಎಂದು ನಂಬಿದ ವ್ಯಕ್ತಿ ತನ್ನ ಬ್ಯಾಗ್‍ನಲ್ಲಿದ್ದ ಮಾರಕಾಸ್ತ್ರಗಳನ್ನು ತೋರಿಸಲು ಆರಂಭಿಸಿದರು. ಇನ್ನು ಚೆನ್ನಾಗಿರೋದು ಬೇಕಾ ಎಂದು ಪಕ್ಕದಲ್ಲಿಯೇ ಇದ್ದ ಚಿಕ್ಕ ಗುಡಿಸಲಿಗೆ ಕರೆದುಕೊಂಡು ವಿವಿಧ ರೀತಿಯ ಆಯುಧಗಳನ್ನು ತೋರಿಸ ತೊಡಗಿದನು. ಆತನೊಂದಿಗೆ ತಂಡದ ಸದಸ್ಯ ನಡೆಸಿರುವ ಸಂಭಾಷಣೆ ಈ ಕೆಳಗಿನಂತಿದೆ.

ಪ್ರತಿನಿಧಿ – ಏನ್ ಹೇಳ್ತಿರಾ? 400 ರಿಂದ 500 ರೂ. ಬೆಲೆನಾ?
ವ್ಯಾಪಾರಿ – ಅಣ್ಣಾ ಇದು ತೆಂಗಿನಕಾಯಿ ಒಡೆಯೋ ಮಚ್ಚಲ್ಲ…
ಪ್ರತಿನಿಧಿ – ಬೇರೆಯವರು ಆರ್ಡರ್ ಕೊಟ್ಟಿದ್ರಂತೆ.. ತಗೊಂಡು ಹೋಗಿಲ್ಲ.. ಈಗ ನಮಗೆ ಸಿಕ್ತಾ ಇದೆ..
ವ್ಯಾಪಾರಿ- 500 ರೂ. ಕೊಟ್ಟಿದ್ರು.. ಮತ್ತೆ ಬಂದಿಲ್ಲ ..10 ಸಾವಿರ ಕೊಟ್ರು ಈ ಲಾಂಗ್ ಸಿಗಲ್ಲ. ಆರ್ಡರ್ ಕೊಟ್ಟಿದ್ದು, ಬೇಡ ಅಂದ್ರು ಅದಕ್ಕೆ ನನ್ನ ಹತ್ರ ಉಳಿಯಿತು..
ಪ್ರತಿನಿಧಿ – ಎಷ್ಟು ಕೆ.ಜಿ ಐತೆ ಇದು..
ವ್ಯಾಪಾರಿ – 1 ಕೆ.ಜಿ ಇದೆ..
ಪ್ರತಿನಿಧಿ – ಕಬ್ಬಿಣನಾ ?
ವ್ಯಾಪಾರಿ – ಇಲ್ಲ ಕಬ್ಬಿಣ ಎರಡು ಕೆ.ಜಿ ತಗೊಂಡ್ರು ವೆಸ್ಟ್.. ಕಬ್ಬಿಣದ ಬದಲು ಸ್ಟೀಲ್ ನಲ್ಲಿ ಮಾಡಿದ್ದೀನಿ….

ಮಾತು ಆರಂಭಿಸುತ್ತಿದ್ದಂತೆ ಅಡ್ವಾನ್ಸ್ ಕೊಡಿ, ನಿಮಗೆ ಬೇಕಾದ ರೀತಿಯಲ್ಲಿ ಮಾಡಿಕೊಡುತ್ತೇನೆ ಎಂದು ಹಣ ಕೊಡಿ ಎಂದು ಹಿಂದೆ ಬರುತ್ತಾರೆ. ಆದರೆ ತಂಡ ಸಬೂಬು ಹೇಳಿ ಡೆಡ್ಲಿ ವೆಪನ್ ಅಡ್ಡಾದಿಂದ ಹೊರ ಬಂದಿತ್ತು. ಈ ವ್ಯಕ್ತಿ ಮಾರಾಟ ಮಾಡುವ ಸ್ಥಳದಲ್ಲಿ ಚಿಕ್ಕ ಮಕ್ಕಳೆಲ್ಲ ಓಡಾಡಿಕೊಂಡಿರುತ್ತಾರೆ. ಮಕ್ಕಳೆದರು ಈ ರೀತಿಯ ವ್ಯವಹಾರಗಳು ನಡೆಯುತ್ತಿರುತ್ತವೆ. ಅಲ್ಲಿಂದ ಹಿಂದಿರುಗಿದ ಸ್ಟಿಂಗ್ ಆಪರೇಷನ್ ತಂಡಕ್ಕೆ ಇದೇ ವ್ಯಕ್ತಿ ನಗರದ ರಾಮಯ್ಯ ರಸ್ತೆಯ ನೇತಾಜಿ ಸರ್ಕಲ್ ನಲ್ಲಿ ಮಾರಕಾಸ್ತ್ರಗಳು ತುಂಬಿರುವ ಬ್ಯಾಗ್ ನೊಂದಿಗೆ ಸಿಕ್ಕಿದ. ಈ ವೇಳೆ ತಂಡದ ಪ್ರತಿನಿಧಿ ಆತನೊಂದಿಗೆ ಮಾತಿಗೆ ಇಳಿದಾಗ ನಡೆದ ಸಂಭಾಷಣೆ ಹೇಗಿತ್ತು.

ಪ್ರತಿನಿಧಿ – ಏಯ್ ಇದು ಮಚ್ಚು…?
ವ್ಯಾಪಾರಿ – ಹೇಳು ಕಮ್ಮಿ ಮಾಡಿ ಕೊಡ್ತಿನಿ
ಪ್ರತಿನಿಧಿ – 550 ರೂ.. ?
ವ್ಯಾಪಾರಿ – ಇದು ಡ್ಯಾಗರ್ ತರಹ
ಪ್ರತಿನಿಧಿ – ಬೇರೆ ತರಹ ಇಲ್ವಾ..?
ವ್ಯಾಪಾರಿ – ಇಲ್ಲ ಖಾಲಿ ಆಗೋಯ್ತು.. ನೋಡು ನೀನು
ಪ್ರತಿನಿಧಿ – ಏನಿಕ್ಕೆ ಯೂಸ್..?
ವ್ಯಾಪಾರಿ – ಏನ್ ಗುರು ನಿಮಗೆ ಗೊತ್ತಿಲ್ವಾ..? ನಾವ್ ಬೇರೆ ಹೇಳಬೇಕಾ..?
ಪ್ರತಿನಿಧಿ – ತುಕ್ಕು ಹಿಡಿದಿದೆ..
ವ್ಯಾಪಾರಿ – ಇಲ್ಲ ತುಕ್ಕು ಹಿಡಿದಿಲ್ಲ..
ಪ್ರತಿನಿಧಿ – ಉದ್ದ ಬರಲ್ವಾ..?
ವ್ಯಾಪಾರಿ – ಅದಲ್ಲೆ ಬರಲ್ಲಾ..!

ಯಾರ ಭಯವಿಲ್ಲದೆ ನಡುರಸ್ತೆಯಲ್ಲಿಯೇ ವ್ಯಾಪಾರಕ್ಕೆ ಇಳಿಯುತ್ತಾನೆ. ರೌಡಿಗಳ ಈ ಮಾರಕಾಸ್ತ್ರಗಳ ವ್ಯವಹಾರವೇನು ರಹಸ್ಯವಾಗಿಲ್ಲ. ಜನನಿಬಿಡ ಪ್ರದೇಶದಲ್ಲಿಯೇ ಈ ವ್ಯಕ್ತಿ ರಾಜಾರೋಷವಾಗಿ ಮಾರಕಾಸ್ತ್ರಗಳನ್ನು ಮಾರಾಟ ಮಾಡುತ್ತಾನೆ. ಆದಷ್ಟು ಬೇಗ ಬೆಂಗಳೂರು ಪೊಲೀಸರು ಮಾರಕಾಸ್ತ್ರಗಳ ವ್ಯವಹಾರಕ್ಕೆ ಬ್ರೇಕ್ ಹಾಕಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *