ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಲೈಬ್ರರಿ ಹಾಗೂ ಆಟದ ಮೈದಾನದಲ್ಲಿ ತೆರೆದಿದ್ದ ಶಾಸಕ ಹ್ಯಾರಿಸ್ ಕಚೇರಿಗೆ ಪಬ್ಲಿಕ್ ಟಿವಿ ವರದಿ ಬಳಿಕ ಬೀಗ ಬಿದ್ದಿದೆ.
ನಿಮ್ಮ ಪಬ್ಲಿಕ್ ಟಿವಿ ಶಾಸಕ ಹ್ಯಾರಿಸ್ ಬಿಬಿಎಂಪಿಗೆ ಸೇರಿದ ಬಯಲು ರಂಗಮಂದಿರವನ್ನು ಶಾಸಕರ ಕಚೇರಿ ಮಾಡಿಕೊಂಡಿರುವ ಬಗ್ಗೆ ವಿಸ್ಕೃತ ವರದಿ ಪ್ರಸಾರಮಾಡಿತ್ತು. ಈ ಬಗ್ಗೆ ಇಂದು ಬಿಬಿಎಂಪಿ ವಿಶೇಷ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಶಾಸಕರಿಗೆ ಸೂಕ್ತವಾದ ಕಚೇರಿ ಕೊಡೋಕೆ ನಮ್ಮ ಜವಬ್ದಾರಿಯಿದೆ. ಅದನ್ನ ಪಾಲಿಕೆ ಹಾಗೂ ಸರ್ಕಾರ ಮಾಡುತ್ತೆ. ಶಾಸಕರಿಗೆ ಈ ಹಿಂದೆ ಯಾವುದು ಕೊಟ್ಟಿದ್ದೀವಿ ಎಂದು ನನಗೆ ಗೊತ್ತಿಲ್ಲ. ಶಾಸಕರ ಕಚೇರಿ ಅಲ್ಲೇ ಇರಬೇಕಾ ಅನ್ನೋದರ ಬಗ್ಗೆ ಶಾಸಕರು, ಜನಾಭಿಪ್ರಾಯ ಪಡೆದು ನಿರ್ಧಾರ ಮಾಡ್ತೀವಿ ಎಂದಿದ್ದಾರೆ.
ಏನಿದು ಘಟನೆ..?
ದೊಮ್ಮಲೂರು ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶಿವಕುಮಾರ ಸ್ವಾಮೀಜಿ ಬಯಲು ರಂಗಮಂದಿರ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿತ್ತು. ರಂಗಮಂದಿರದ ಮೊದಲ ಮಹಡಿಯನ್ನು ಗ್ರಂಥಾಲಯವಾಗಿ ಮಾರ್ಪಡಿಸಿ ಸ್ಥಳೀಯ ನಿವಾಸಿಗಳಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿತ್ತು. ಒಟ್ಟಾರೆ ರಂಗಮಂದಿರ ನವೀಕರಣ ಮತ್ತಿತರ ಕಾಮಗಾರಿಗಳಿಗಾಗಿ ಬಿಬಿಎಂಪಿ .3.1 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿತ್ತು. ಜೊತೆಗೆ ರಂಗಮಂದಿರದ ಮುಂಭಾಗದಲ್ಲಿನ ಖಾಲಿ ಮೈದಾನ ಹತ್ತಾರು ವರ್ಷದಿಂದ ಮಕ್ಕಳು ಆಟ ಆಡಲು ಬಳಕೆಯಾಗುತ್ತಿತ್ತು.
ಮೊದಲಿನಿಂದಲೂ ಈ ಬಯಲು ರಂಗಮಂದಿರ ಬಗ್ಗೆ ಅಪಸ್ವರ ಕೇಳಿ ಬರುತ್ತಿತ್ತು. ಶಂಕರ್ ನಾಗ್ ಬಯಲು ರಂಗ ಮಂದಿರವನ್ನು, ಶ್ರೀ ಶಿವಕುಮಾರ ಸ್ವಾಮೀಜಿ ಬಯಲು ರಂಗ ಮಂದಿರವನ್ನು ಮರುನಾಮಕರಣ ಮಾಡಲಾಗಿದೆ. ಸುಮಾರು 30 ವರ್ಷಗಳ ಹಿಂದೆ ದಿವಂಗತ ಪಟೇಲ್ ಶ್ರೀನಿವಾಸರೆಡ್ಡಿ ನಿರ್ಮಿಸಿದ್ದರು. ಇಷ್ಟು ದಿನ ಮಕ್ಕಳು ಖಾಲಿ ಜಾಗವನ್ನು ಆಟದ ಮೈದಾನವಾಗಿ ಬಳಸುತ್ತಿದ್ದರು. ಆದರೀಗ ಯಾವಾಗಲೂ ಗೇಟ್‍ಗಳಿಗೆ ಬೀಗ ಹಾಕಿರುವುದರಿಂದ ಆಟವಾಡಲು ಸ್ಥಳವಿಲ್ಲದಂತಾಗಿತ್ತು.
ತೆರಿಗೆದಾರರ ಹಣದಲ್ಲಿ ನಿರ್ಮಿಸಿದ ಮೊದಲ ಮಹಡಿಯನ್ನು ಶಾಸಕರ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ. ನಾಮಫಲಕವನ್ನು ಸಹ ಅಳವಡಿಸಲಾಗಿದೆ. ಶಾಸಕರ ಕಚೇರಿ ಕೆಡವಿ ಹೊಸ ಕಟ್ಟಡ ನಿರ್ಮಾಣ ಆಗಿರುವುದರಿಂದ ದೊಮ್ಮಲೂರಿನಲ್ಲಿರುವ ಶಾಸಕರ ಕಚೇರಿ ತಾತ್ಕಾಲಿಕವಾಗಿ ಈ ಭಾಗದಲ್ಲಿ ತೆರೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಕಾಯಂ ಕಚೇರಿ ಮಾಡಲು ರಂಗ ಮಂದಿರವೇ ಬೇಕಿತ್ತಾ ಎಂಬ ಪ್ರಶ್ನೆ ಜೊತೆಗೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಹ್ಯಾರಿಸ್, ಬಿಬಿಎಂಪಿಯು ಶಾಸಕರ ಕಚೇರಿಯನ್ನು ಮಾಡಿ ನಮಗೆ ಹಸ್ತಾಂತರಿಸಿದ್ದಾರೆ. ಏನೇ ಆಕ್ಷೇಪಣೆಗಳಿದ್ದರೂ ಬಿಬಿಎಂಪಿಗೆ ಕೇಳಬೇಕು. ಇಷ್ಟಕ್ಕೂ ಜನರ ಅಹವಾಲು ಸ್ವೀಕರಿಸಿ ಸರ್ಕಾರಿ ಕೆಲಸ ಮಾಡಲು ಶಾಸಕರ ಕಚೇರಿ ತೆರೆಯಲಾಗಿದೆ. ಬಿಬಿಎಂಪಿಗೆ ಸೇರಿದ ಸ್ಥಳದಲ್ಲಿ ಶಾಸಕರ ಕಚೇರಿ ತೆರೆಯುವುದು ತಪ್ಪೇನೂ ಅಲ್ಲ. ಅದು ಸ್ಥಳೀಯರ ಅನುಕೂಲಕ್ಕಾಗಿ ಅನಿವಾರ್ಯ. ಆದರೆ ಕೆಲವು ಕಿಡಿಗೇಡಿಗಳು ಅನಗತ್ಯವಾಗಿ ವಿವಾದ ಮಾಡುತ್ತಿದ್ದಾರೆ ಎಂದಿದ್ದರು.