ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‍ಐ, ಪೇದೆ ಅಮಾನತು

Public TV
2 Min Read

ಕೊಪ್ಪಳ: ರೈತರನ್ನು ಸುಲಿಗೆ ಮಾಡಲು ಮುಂದಾಗಿದ್ದ ಜಿಲ್ಲೆಯ ಓರ್ವ ಪಿಎಸ್‍ಐ ಹಾಗೂ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತು ಮಾಡಿ ಎಸ್‍ಪಿ ಜಿ.ಸಂಗೀತಾ ಅವರು ಆದೇಶ ಹೊರಡಿಸಿದ್ದಾರೆ. ಅಮಾನತು ಆದ ಇಬ್ಬರು ಮಾಡಿದ ಅಕ್ರಮದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಸುದ್ದಿ ಆಧರಿಸಿ ಅಮಾನತು ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಕಾರಟಗಿ ಪೊಲೀಸ್ ಠಾಣೆಯ ಪಿಎಸ್‍ಐ ವಿಜಯಕೃಷ್ಣ ಹಾಗೂ ಅದೇ ಠಾಣೆಯ ಪೇದೆ ಭೀಮಣ್ಣ ಸೇವೆಯಿಂದ ಅಮಾನತು ಆದವರು. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕಂದಾ ಗ್ರಾಮದ ರೈತ ಭಾಷಾಸಾಬ್ ವಲಿಸಾಬ್ ಅವರಿಗೆ ವಿಜಯಕೃಷ್ಣ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

ಶ್ರವಣಕುಮಾರ್ ಎಂಬಾತನ ಮಾತು ಕೇಳಿದ್ದ ಪಿಎಸ್‍ಐ ರೈತ ಭಾಷಾಸಾಬ್ ವಲಿಸಾಬ್‍ಗೆ ಬೆದರಿಕೆ ಹಾಕಿ, ಹಣಕ್ಕಾಗಿ ಪೀಡಿಸಿ ಆತನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದರು. ಇದರಿಂದಾಗಿ ಭಾಷಾಸಾಬ್ ಎಸ್‍ಪಿ, ಮುಖ್ಯಮಂತ್ರಿ, ಗೃಹ ಸಚಿವರಿಗೆ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಇದನ್ನು ಆಧರಿಸಿ ಪಬ್ಲಿಕ್ ಟಿವಿ ಜನವರಿ 26ರಂದು ಪಿಎಸ್‍ಐ ವಿಜಯಕೃಷ್ಣ, ಪೇದೆ ಬೀಮಣ್ಣನದ ಹಣ ವಸಲಿ ಬಗ್ಗೆ ಸುದ್ದಿ ಮಾಡಿತ್ತು. ಕೊಪ್ಪಳ ಎಸ್‍ಪಿ ಸಂಗೀತಾ ಅವರು ಗಂಗಾವತಿ ಸಿಪಿಐ ಅವರಿಂದ ವರದಿ ತರಿಸಿಕೊಂಡು ಜನವರಿ 29ರಂದು ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?:
ಕಾರಟಗಿ ಪೊಲೀಸ್ ಠಾಣೆ ಪೇದೆ ಭೀಮಣ್ಣ ಕಳೆದ ಮೂರು ತಿಂಗಳ ಹಿಂದೆ ಮುಕ್ಕುಂದ ಗ್ರಾಮದಲ್ಲಿ ಮರಳು ಸಾಗಾಟದ ಮಾಮೂಲಿ ವಸೂಲಿಗೆ ಪೊಲೀಸರು ಹೋಗಿದ್ದರು. ಆದರೆ ಭಾಷಾಸಾಬ್ ನಮ್ಮ ಗ್ರಾಮವು ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರ ಬಳಿ ಗಲಾಟೆ ಮಾಡಿದ್ದರು. ಅಲ್ಲದೇ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆಹಿಡಿದಿದ್ದರು. ಹೀಗಾಗಿ ಪೊಲೀಸರು ಭಾಷಾಸಾಬ್‍ರನ್ನ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಭಾಷಾಸಾಬ್ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸರು ಹಗೆ ಸಾಧಿಸಿದ್ದರು.

ಮಾಮೂಲಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಟಾರ್ಗೆಟ್ ಮಾಡಿದ್ದರಿಂದ ಭಾಷಾಸಾಬ್ ಊರು ಬಿಟ್ಟು ಅಲೆಯುತ್ತಿದ್ದರು. ಅಷ್ಟೇ ಅಲ್ಲದೆ ಪಿಎಸ್‍ಐ ವಿಜಯಕೃಷ್ಣ ಗೂಂಡಾಗಳನ್ನ ಬಿಟ್ಟು ಭಾಷಾಸಾಬ್ ಅವರಿಗೆ ಧಮ್ಕಿ ಹಾಕಿದ್ದರು. ಉಸುಕು ದಂಧೆ ಮಾಡಿ ಪ್ರತಿ ತಿಂಗಳು 35 ಸಾವಿರ ರೂ. ಮಾಮೂಲಿ ನೀಡುವಂತೆ ಪಿಎಸ್‍ಐ ವಿಜಯಕೃಷ್ಣ ಅವರು ಕೇಳಿದ್ದ ಬಗ್ಗೆ ಭಾಷಾಸಾಬ್ ದೂರಿನಲ್ಲಿ ಉಲ್ಲೇಖಿಸಿದ್ದರು.

ಇದೆಲ್ಲವನ್ನೂ ಮನಗಂಡ ಎಸ್‍ಪಿ ಸಂಗೀತಾ ಅವರು ಕರ್ತವ್ಯಲೋಪ, ಲಂಚಕ್ಕೆ ಬೇಡಿಕೆ, ಅಧಿಕಾರ ದುರುಪಯೋಗ, ಠಾಣಾ ವ್ಯಾಪ್ತಿ ಮೀರಿದ ವ್ಯಕ್ತಿಯ ಮೇಲೆ ದೌರ್ಜನ್ಯ, ಹಲ್ಲೆ ಮಾಡುವ ಮೂಲಕ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಕೀಳರಿಮೆ ಮೂಡುವಂತೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತಿನ ನಡವಳಿ) ನಿಯಮಗಳು 1965ರ ನಿಯಮದ ಪ್ರಕಾರ ಅಮಾನತಿನಲ್ಲಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *