Tumkur | `ಬೆಳಕು’ ಪ್ರಸಾರವಾದ 26 ದಿನದಲ್ಲೇ ಇಂಪ್ಯಾಕ್ಟ್ – ಸರ್ಕಾರಿ ಶಾಲೆಯ 2 ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ!

Public TV
2 Min Read

– ಸಚಿವ ಕೆ.ಎನ್ ರಾಜಣ್ಣರಿಂದ ಗುದ್ದಲಿ ಪೂಜೆ, `ಪಬ್ಲಿಕ್ ಟಿವಿ’ಗೆ ಶ್ಲಾಘನೆ
– ಡಿಸೆಂಬರ್ 7 ರಂದು ಪ್ರಸಾರವಾಗಿದ್ದ ಬೆಳಕು ಕಾರ್ಯಕ್ರಮ

ತುಮಕೂರು: ನೊಂದವರಿಗೆ ನೆರವಾಗುವ, ಸಮಸ್ಯೆಗೆ ಪರಿಹಾರ ಆಗುವ ನಿಮ್ಮ `ಪಬ್ಲಿಕ್ ಟಿವಿ’ಯ ಬೆಳಕು ಕಾರ್ಯಕ್ರಮದಿಂದ (Belaku Program) ಬಹುದೊಡ್ಡ ಇಂಪ್ಯಾಕ್ಟ್ ಆಗಿದೆ. ವರದಿ ಪ್ರಸಾರವಾದ ಕೇವಲ 26 ದಿನದಲ್ಲೇ ಸರ್ಕಾರಿ ಶಾಲೆಯ ಕೊಠಡಿಗೆ ಶಂಕುಸ್ಥಾಪನೆ ನೆರವೇರಿದೆ. ಈ ಮೂಲಕ ಆ ಊರ ವಿದ್ಯಾರ್ಥಿಗಳ ನೆರವಿಗೆ `ಪಬ್ಲಿಕ್ ಟಿವಿ’ (Public TV) ಧಾವಿಸಿದೆ.

ಹೌದು. ತುಮಕೂರು (Tumkur) ಜಿಲ್ಲೆ ಮಧುಗಿರಿ ತಾಲೂಕು ಕಡಗತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಯಾಕಾರ‍್ಲಹಳ್ಳಿ ಶಾಲೆಯ ದುಸ್ಥಿತಿ ಯಾರಿಗೂ ಬೇಡವಾಗಿತ್ತು. ಎಲ್‌ಕೆಜಿಯಿಂದ 7ನೇ ತರಗತಿವರೆಗೆ ಇಲ್ಲಿ ಪಾಠ ನಡೆಯುತ್ತದೆ. ಸದ್ಯ 81 ವಿದ್ಯಾರ್ಥಿಗಳು (School Students) ಇದ್ದಾರೆ. ಇಡೀ ತಾಲೂಕಿಗೆ ಈ ಶಾಲೆ ಹೆಸರು ವಾಸಿ. ಅಷ್ಟರಮಟ್ಟಿಗೆ ಒಳ್ಳೆ ವಿದ್ಯಾಭ್ಯಾಸ ಇಲ್ಲಿಸಿಗುತ್ತದೆ. ಆದರೆ ಕೊಠಡಿಗಳ ಕೊರತೆಯೆ ಇಲ್ಲಿಯ ಪ್ರಮುಖ ಸಮಸ್ಯೆಯಾಗಿತ್ತು.

ಕಳೆದ ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆಗೆ ಎರಡು ಕೊಠಡಿಯ ಛಾವಣಿ ಸಂಪೂರ್ಣ ಕುಸಿದಿತ್ತು. ಪರಿಣಾಮ ಅಕ್ಕಪಕ್ಕದ ಇನ್ನೆರಡೂ ಕೊಠಡಿಗೂ ಹಾನಿಯಾಗಿತ್ತು. ಇಂಥಹ ಪರಿಸ್ಥಿತಿಯಲ್ಲಿ ಜೀವ ಕೈಯಲ್ಲಿಡಿದು ವಿದ್ಯಾರ್ಥಿಗಳು ಪಾಠ ಕೇಳುತಿದ್ದರು. ವಿದ್ಯಾರ್ಥಿಗಳ ಸಂಕಷ್ಟ ಅರಿತ `ಪಬ್ಲಿಕ್ ಟಿವಿ’ ಅವರ ನೆರವಿಗೆ ಧಾವಿಸಿತ್ತು.

`ಬೆಳಕು’ ಕಾರ್ಯಕ್ರಮದಲ್ಲಿ ಈ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡಿತ್ತು. ನೂತನ ಕೊಠಡಿ ನಿರ್ಮಾಣ ಮಾಡಿಕೊಡುವಂತೆ ಮಧುಗಿರಿ ಶಾಸಕ ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣರಿಗೆ ಪಬ್ಲಿಕ್ ಟಿವಿ ದುಂಬಾಲು ಬಿದ್ದಿತ್ತು. ಸಚಿವ ರಾಜಣ್ಣರ ನಿರ್ದೇಶನದಂತೆ ಮಧುಗಿರಿ ಡಿಡಿಪಿಐ ಗಿರಿಜಾ ನಾಲ್ಕೈದು ತಿಂಗಳಲ್ಲಿ ಕೊಠಡಿ ನಿರ್ಮಾಣ ಮಾಡಿಸೋ ಭರವಸೆ ನೀಡಿದ್ರು. ಡಿಸೆಂಬರ್ 7 ರಂದು ವರದಿ ಪ್ರಸಾರ ಆಗಿತ್ತು. ಕೇವಲ 26 ದಿನದಲ್ಲಿ ಇಂದು ಸಚಿವ ರಾಜಣ್ಣ ನೂತನ ಎರಡು ಕೊಠಡಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿ ಕೊಟ್ಟ ಭರವಸೆ ಈಡೇರಿಸಿದ್ದಾರೆ.

ಕೊಠಡಿ ನಿರ್ಮಾಣಕ್ಕೆ ಯಾವುದೇ ಯೋಜಿತ ಗ್ರ‍್ಯಾಂಟ್ ಇರಲಿಲ್ಲ. ಇದು ಡಿಡಿಪಿಐ ಗಿರಿಜಾ ಹಾಗೂ ಕೆ.ಎನ್ ರಾಜಣ್ಣರಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಮಧ್ಯೆ ಸಲಹೆ ನೀಡಿದ ಜಿಪಂ ಸಿಇಒ ಜಿ.ಪ್ರಭು ಬೇರೊಂದು ಗ್ರ‍್ಯಾಂಟ್ ಸುಳಿವು ಕೊಟ್ಟಿದ್ರು. ಅದರ ತರುವಾಯ ಎರಡು ಕೊಠಡಿಗೆ ಒಟ್ಟು 28 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಹಾಗಾಗಿ ಇಂದು ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಜನರು ಅತ್ಯಂತ ಸಂಭ್ರಮದಿಂದ ಮಾಡಿದ್ದಾರೆ. ಅಲ್ಲದೇ ಸಚಿವ ಕೆ.ಎನ್ ರಾಜಣ್ಣ `ಪಬ್ಲಿಕ್ ಟಿವಿ’ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Share This Article