‘ಪಬ್ಲಿಕ್’ ಇಂಪ್ಯಾಕ್ಟ್ – ಯಾದಗಿರಿಯಲ್ಲಿ ಅನಿಷ್ಟ ಪದ್ಧತಿಗೆ ತಿಲಾಂಜಲಿ ಇಟ್ಟ ಜಿಲ್ಲಾಡಳಿತ

Public TV
2 Min Read

ಯಾದಗಿರಿ: ಜಿಲ್ಲೆಯ ಸುರಪುರ (Surapura) ತಾಲೂಕಿನಲ್ಲಿ ಅನಿಷ್ಟ ಪದ್ಧತಿಯೊಂದು ಜೀವಂತವಾಗಿದ್ದು, ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ (Dalits) ಬಹಿಷ್ಕಾರ ಹಾಕಲಾಗುತ್ತದೆ ಎಂಬ ವಿಚಾರ ಕಳೆದ ಎರಡು ದಿನದಿಂದ ಮುನ್ನೆಲೆಗೆ ಬಂದಿತ್ತು. ಈ ಕುರಿತು ನಿಮ್ಮ ಪಬ್ಲಿಕ್ ಟಿವಿ (Public Tv) ವರದಿಯನ್ನು ಪ್ರಸಾರ ಮಾಡಿದ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೂ ಈ ಅನಿಷ್ಟ ಪದ್ಧತಿಗೆ ತಿಲಾಂಜಲಿ ಬಿಟ್ಟಿದೆ.

ಅನಿಷ್ಟ ಪದ್ಧತಿಯ ಕುರಿತು ಪಬ್ಲಿಕ್ ಟಿವಿಯಲ್ಲಿ ಬಿತ್ತರವಾದ ವರದಿಯಿಂದ ಯಾದಗಿರಿ ಜಿಲ್ಲಾಡಳಿತ (District Administration) ಎಚ್ಚೆತ್ತುಕೊಂಡು ದೇವಿಕೇರಾ ಗ್ರಾಮದಲ್ಲಿ ಪ್ರಾಣಿ ಬಲಿ ನಿಷೇಧಿಸಿ ಶಾಂತಿಯುತವಾಗಿ ದೇವಿ ಜಾತ್ರೆಯನ್ನು ಆಚರಣೆ ಮಾಡಿದೆ. ಕೋಣ ಬಲಿಕೊಡುವ ಜಾಗದಲ್ಲಿ ಕುಂಬಳಕಾಯಿ ಒಡೆದು ಮರೆಮ್ಮ, ಪಾಲ್ಕಮ್ಮ ಹಾಗೂ ದೇವಮ್ಮ ದೇವಿ ಜಾತ್ರೆಯನ್ನು (Fair) ಆಚರಿಸಲಾಯಿತು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಜಾತ್ರೆ ಆಚರಣೆ ಮಾಡಿದ್ದು, ಜಾತ್ರೆ ಹಿನ್ನೆಲೆ ದೇವಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಕೆ ಮಾಡಲಾಯಿತು. ಇದನ್ನೂ ಓದಿ: ದೇವರಿಗೆ ಬಲಿಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ ಬಹಿಷ್ಕಾರ – ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ

ನೂರಾರು ಮುತ್ತೈದೆಯರು ಮಡಿಯಿಂದ ತಮ್ಮತಮ್ಮ ಮನೆಗಳಿಂದ ದೀಪಗಳನ್ನ ತಲೆ ಮೇಲೆ ಇಟ್ಟುಕೊಂಡು ದೇವಸ್ಥಾನಕ್ಕೆ ಆಗಮಿಸಿ ದೀಪ ಬೆಳಗಿಸಿದರು. ಅಲ್ಲದೇ ಡೊಳ್ಳು ಕುಣಿತ ಹಾಗೂ ವಿವಿಧ ಕಲಾ ತಂಡಗಳು ಜಾತ್ರೆಗೆ ಮೆರಗು ತಂದವು. ರಾತ್ರಿಯಿಂದ ಬೆಳಗ್ಗಿನ ಜಾವದವರೆಗೂ ಜರುಗಿದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಅನಿಷ್ಠ ಪದ್ಧತಿಗೆ ಯಾದಗಿರಿ ಜಿಲ್ಲಾಡಳಿತ ಮಂಗಳ ಹಾಡಿದೆ. ದೇವಿಕೇರಾ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮಸ್ಥರನ್ನು ಸುರಪುರ ತಹಶೀಲ್ದಾರ್ ವಿಜಯಕುಮಾರ್ ಮನವೊಲಿಸಿದ್ದಾರೆ. ಪ್ರಾಣಿ ಬಲಿ ನಿಷೇಧಕ್ಕಾಗಿ ಕಟ್ಟುನಿಟ್ಟಿನ ಮುಂಜಾಗೃತಾ ಕ್ರಮ ಕೈಗೊಂಡ ಹಿನ್ನೆಲೆ ದೇವಿಕೇರಾ ಗ್ರಾಮದಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು. ಇದನ್ನೂ ಓದಿ: 2ನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧಾರ

ಶಾಂತಿಯುತ ಜಾತ್ರೆ ಆಚರಣೆಗಾಗಿ ಸುರಪುರ ತಹಶೀಲ್ದಾರ್ ರಾತ್ರಿ ಇಡೀ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ಈ ಪರಿಣಾಮ ಮರೆಮ್ಮ, ಪಾಲ್ಕಮ್ಮ ಹಾಗೂ ದೇವಮ್ಮ ದೇವರ ಜಾತ್ರೆ ಎರಡು ದಿನಗಳ ಕಾಲ ಶಾಂತಿಯುತವಾಗಿ ಜರುಗಿದೆ. ಇದಕ್ಕೂ ಮೊದಲು ಜಾತ್ರೆಯಲ್ಲಿ ಬಲಿ ಕೊಟ್ಟ ಕೋಣದ ಮಾಂಸ ದಲಿತರು ತಿನ್ನಬೇಕಿತ್ತು. ಹಾಗೇ ಕೋಣದ ಮಾಂಸ ತಿನ್ನದೇ ಇದ್ದರೆ ಬಹಿಷ್ಕಾರ ಹಾಕುವ ಬೆದರಿಕೆಯನ್ನೂ ಒಡ್ಡಲಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: 70 ಕೋಟಿ ವಂಚನೆ ಮಾಡಿದ ಟೆಕ್ಕಿ ದಂಪತಿ!

Share This Article