ಪ್ರೀತಿ… ಇದು ಜಗತ್ತಿನ ಮೂಲೆ ಮೂಲೆಗಳಲ್ಲೂ ಹಬ್ಬಿರುವ ಒಂದು ಸಂಬಂಧ. ಸಾಮಾನ್ಯವಾಗಿ ವ್ಯಕ್ತಿಗಳ ನಡುವೆ ಪ್ರೇಮ ಕಾವ್ಯ, ವಸ್ತು ಹಾಗೂ ವ್ಯಕ್ತಿಗಳ ನಡುವಿನ ಸಂಬಂಧ, ಪ್ರಾಣಿ ಹಾಗೂ ವ್ಯಕ್ತಿಗಳ ನಡುವೆ ಸಂಬಂಧ ಇವೆಲ್ಲವುಗಳನ್ನು ದಿನನಿತ್ಯ ನಾವು ಕಣ್ತುಂಬಿ ಕೊಳ್ಳುತ್ತೇವೆ. ಹೀಗಿರುವಾಗ ಕೆಲವು ವಿಭಿನ್ನ, ಆಶ್ಚರ್ಯಕರ ಘಟನೆಗಳು ನಮ್ಮ ಜೀವನದಲ್ಲಿ ನಡೆಯುತ್ತದೆ.
ಅಂತಹದ್ದೇ ಆದ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿತ್ತು. ಹೌದು, ಮಧ್ಯ ಪ್ರದೇಶದ ಮೊರೆನಾ ಎಂಬಲ್ಲಿ ವಿಚಿತ್ರ ಘಟನೆ ಎಂದು ಸಂಭವಿಸಿತ್ತು. ಇದನ್ನು ನೋಡಿದ ಹಲವರು ನಿಜಕ್ಕೂ ಇದು ವಿಚಿತ್ರವೇ ಹೌದು ಎಂದಿದ್ದಾರೆ. ಅದೊಂದು ದಿನ ರಸ್ತೆಯ ಮೇಲೆ ನಾಗರಹಾವು ಹಾದು ಹೋಗಬೇಕಾದರೆ ವಾಹನವೊಂದು ಅದರ ಮೇಲೆ ಹರಿದುಹೋದ ಪರಿಣಾಮ ಹಾವು ರಸ್ತೆಯಲ್ಲಿ ಸಾವನ್ನಪ್ಪಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ರಸ್ತೆ ಬದಿಯ ಪೊದೆಯಿಂದ ಹೊರಬಂದ ಹಾವು ಒಂದು ಸತ್ತು ಬಿದ್ದ ಹಾವಿನ ಬಳಿಗೆ ಬಂತು. ಆ ಹಾವು ಸತ್ತ ಬಿದ್ದ ಹಾವಿನ ಪಕ್ಕದಲ್ಲಿಯೇ 24 ಗಂಟೆ ಇದ್ದು ಬಳಿಕ ಸಾವನ್ನಪ್ಪಿರುವುದು ಗೊತ್ತಾಗಿದೆ. ಈ ದೃಶ್ಯ ನಿಜಕ್ಕೂ ವಿಚಿತ್ರವೇನಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡಿದ ನಂತರ ಹಲವು ರೀತಿಯ ಕಾಮೆಂಟ್ಗಳು ಉದ್ಭವವಾಗಿದ್ದವು. ಹೆಣ್ಣು ಹಾವು ಸತ್ತಿರುವ ಗಂಡು ಹಾವಿಗಾಗಿ ಶೋಕ ವ್ಯಕ್ತಪಡಿಸಿ ಬಳಿಕ ತಾನು ಸಾವನ್ನಪ್ಪಿದೆ. ಇನ್ನು ಕೆಲವರು ಇದೊಂದು ದುರಂತ ಪ್ರೇಮಕಥೆ ಎಂದಿದ್ದಾರೆ. ತನ್ನ ಪ್ರೀತಿಯನ್ನು ಕಳೆದುಕೊಂಡು ಸಹಿಸಲಾಗದೆ ಸ್ವಇಚ್ಛೆಯಿಂದ ತಾನು ಪ್ರಾಣ ಬಿಟ್ಟಿದೆ ಎಂದಿದ್ದಾರೆ. ಜೊತೆಗೆ ಈ ಎರಡು ಹಾವುಗಳಿಗೂ ಪುರಾಣದಲ್ಲಿ ಪ್ರೀತಿ ಇತ್ತು ಎಂತಲೂ ಹೇಳಿದ್ದಾರೆ. ನಿಜಕ್ಕೂ ಪುರಾಣದಲ್ಲಿ ನಾಗಲೋಕದಲ್ಲಿ ಹಾವಿಗೆ ಪ್ರೀತಿಯಿತ್ತಾ? ಪುರಾಣಗಳ ಪ್ರೀತಿ ಇಂದಿಗೂ ಶಾಶ್ವತವಾಗಿದೆಯಾ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಭಾರತೀಯ ಪರಂಪರೆ ಅಥವಾ ಸಂಪ್ರದಾಯದಲ್ಲಿ ಹಾವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಇದನ್ನು ಪೂಜಿಸುವುದು ಹೌದು. ಇನ್ನು ನಾಗರಹಾವು ಹಾಗೂ ಶಿವನಿಗೆ ನಿಕಟವಾದ ಸಂಬಂಧವಿದ್ದು, ಸದಾ ಶಿವನ ಕೊರಳಲ್ಲಿ ಇರುವ ನಾಗನಿಗೂ ವಿಭಿನ್ನ ಕಥೆಗಳು ಹಾಗೂ ಜಾನಪದ ನಂಬಿಕೆಯೂ ಇದೆ. ಕಥೆಗಳ ಪ್ರಕಾರ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಹಾವುಗಳು ಸೇಡು ತೀರಿಸಿಕೊಳ್ಳುವುದು ಕಂಡುಬಂದಿದೆ. ಇಷ್ಟೇ ಅಲ್ಲದೆ ಹಲವು ಸಿನಿಮಾ ಹಾಗೂ ಧಾರವಾಹಿಗಳ ಮೂಲಕ ನಾಗಲೋಕದ ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಪುರಾಣ ಒಂದು ಕಡೆಯಾದರೆ ವಿಜ್ಞಾನವು ಇನ್ನೊಂದು ರೀತಿಯಲ್ಲಿ ಹೇಳುತ್ತದೆ.
ಸಾಮಾನ್ಯವಾಗಿ ಹಾವುಗಳಿಗೆ ಭಾವನೆಗಳು ಇರುತ್ತವೆ. ಆದರೆ ಮನುಷ್ಯರಂತೆ ಪ್ರೀತಿ ಹಾಗೂ ಸಂತೋಷದ ಭಾವನೆಯನ್ನು ವ್ಯಕ್ತಪಡಿಸುವುದಿಲ್ಲ. ಆದರೆ ಭಯ, ಒತ್ತಡ ಇಂತವುಗಳನ್ನು ಮಾತ್ರ ವ್ಯಕ್ತಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಹಾವುಗಳು ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಬೆಸೆಯುವುದಿಲ್ಲ. ಹಾವು ಹಾಗೂ ಇನ್ನಿತರೆ ಸಸ್ತನಿಗಳಿಗೆ ಭಾವನಾತ್ಮಕ ಸಂಬಂಧ ಇರುವುದಿಲ್ಲ. ಆದರೆ ಪ್ರಸ್ತುತ ಈ ಘಟನೆಯಲ್ಲಿ ಹಾವಿನ ಪಕ್ಕದಲ್ಲಿ ಇನ್ನೊಂದು ಹಾವು ಇರುವುದು ಭಾವನೆಯನ್ನು ಉಂಟುಮಾಡುತ್ತದೆ.
ಈ ಕುರಿತು ಸಂಶೋಧಕರು ಹೇಳಿದ್ದೇನು?
– ಸಾಮಾನ್ಯವಾಗಿ ಹಾವುಗಳು ಒಂಟಿಯಾಗಿರುತ್ತವೆ. ಆದರೆ ತಮ್ಮ ಪ್ರಾಥಮಿಕ ಸಮ್ಮಿಲನಕ್ಕಾಗಿ ಒಟ್ಟಿಗೆ ಸೇರುತ್ತವೆ. ಜೊತೆಗೆ ತಕ್ಷಣವೇ ಬೇರ್ಪಡುತ್ತವೆ.
– ಹಾವುಗಳು ತಮ್ಮ ಸಂಗಾತಿಯನ್ನು ಗುರುತಿಸುತ್ತವೆ. ಅಥವಾ ನೆನಪಿಸಿಕೊಳ್ಳುತ್ತವೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.
– ಅನ್ನು ಹೊರತುಪಡಿಸಿ ಯಾವುದೇ ರೀತಿಯ ಭಾವನಾತ್ಮಕ ಸಂಬಂಧಗಳಿರುವುದಿಲ್ಲ
– ಪ್ರಾಣಿ ಜಗತ್ತಿನಲ್ಲಿ ಕೆಲವೇ ಕೆಲವು ಬೆರಳೆಣಿಕೆ ಎಷ್ಟು ಜಾತಿಗಳು ಮಾತ್ರ ತಮ್ಮ ಸಂಗಾತಿಯನ್ನು ಬಿಟ್ಟು ಕೊಡದೆ ಇರುವುದು, ತಮ್ಮ ಸಂಗಾತಿಗಾಗಿ ಭಾವನೆಯನ್ನು ವ್ಯಕ್ತಪಡಿಸುವುದನ್ನು ಮಾಡುತ್ತವೆ. ಆದರೆ ಹಾವುಗಳು ಈ ವರ್ಗಕ್ಕೆ ಸೇರುವುದಿಲ್ಲ
– ತಜ್ಞರ ಪ್ರಕಾರ, ಗಂಡು ಹಾವಿನ ವಾಸನೆಗೆ ಆಕರ್ಷಿತವಾಗಿ ಅದು ಅಲ್ಲಿಗೆ ಹೋಗಿರಬಹುದು.
– ವಾತಾವರಣದಲ್ಲಿನ ತಾಪಮಾನದಿಂದಾಗಿ ಅದರ ಚಲನಾ ಶಕ್ತಿ ಕಡಿಮೆಯಾಗಿ ಅದು ಒತ್ತಡಕ್ಕೆ ಒಳಗಾಗಿ ಅಲ್ಲಿಯೇ ಉಳಿದಿರಬಹುದು. ಅಥವಾ ಉದ್ದೇಶಪೂರ್ವಕವಾಗಿ ಹಾವಿನ ಪಕ್ಕದಲ್ಲಿ ಉಳಿದಿರಬಹುದು ಎನ್ನಲಾಗಿದೆ.
– ಇನ್ನು ಹಾವು ಸತ್ತ 24 ಗಂಟೆಗಳ ಬಳಿಕ ಇನ್ನೊಂದು ಹಾವು ಸತ್ತಿರುವುದು ಕಾಕತಾಳೀಯ. ಆದರೆ ಸತ್ತ ಹಾವಿನ ಗಾಯದಿಂದಾಗಿ ಅಥವಾ ಯಾವುದಾದರೂ ವಿಷಕಾರಿ ಪ್ರಾಣಿಯನ್ನು ಅಥವಾ ಕೀಟವನ್ನು ಸೇವಿಸಿ, ಬಳಿಕ ಅದೇ ವಿಷಯವನ್ನು ಈ ಹಾವು ಸೇವಿಸಿ ಸಾವನ್ನಪ್ಪಿರಬಹುದು ಎನ್ನಲಾಗಿದೆ.
ಹಾವಿನ ಜಾತಿಯಾದ ಕಿಂಗ್ ಕೋಬ್ರಾ ಹಾವುಗಳು ಮಿಲನದ ನಂತರ ಜೊತೆಯಾಗಿರುವುದಿಲ್ಲ. ಆದರೆ ತನ್ನ ಮೊಟ್ಟೆಯ ರಕ್ಷಣೆಗಾಗಿ ಹಾವುಗಳು ಅದರ ಜೊತೆಗೆ ಇರುತ್ತವೆ. ಇದು ಗಂಡು ಹಾಗೂ ಹೆಣ್ಣು ಹಾವುಗಳು ಜೊತೆಗೆ ಇರುವ ಉದ್ದೇಶದಿಂದಲ್ಲ. ಇದು ತಮ್ಮ ಸಂತತಿಯ ರಕ್ಷಣೆಗಾಗಿ ಎರಡು ಹಾವುಗಳು ಜೊತೆಗಿರುತ್ತವೆ. ಆದರೆ ಅದಾದ ನಂತರ ಹಾವುಗಳು ಜೀವನ ಪರ್ಯಂತ ಸಂಗಾತಿಯಾಗಿರುವುದಿಲ್ಲ ಹಾಗೂ ನೋವನ್ನು ಅನುಭವಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಇನ್ನೂ ಕೆಲವು ಮಾಹಿತಿಗಳ ಪ್ರಕಾರ, ಗಂಡು ಹಾವು ಹೆಣ್ಣು ಹಾವಿನೊಂದಿಗೆ ಮಿಲನದ ಸಲುವಾಗಿ ಕಾಯುತ್ತಿರುತ್ತವೆ. ಇನ್ನು ಹೆಣ್ಣು ಹಾವುಗಳು ಕೂಡ ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಹಲವು ಗಂಡು ಹಾವಿನೊಂದಿಗೆ ಸಂಗಾತಿಯಾಗಿರುತ್ತವೆ.
ಪುರಾಣ ಹೇಳುವುದೇನು?
ಪುರಾಣಗಳ ಪ್ರಕಾರ ಹಾವುಗಳು ತಮ್ಮ ಸಂಗಾತಿ ಜೊತೆಗಿರುತ್ತವೆ. ಜೊತೆಗಿಲ್ಲದೆ ಇರುವಾಗ ಅವುಗಳಿಗಾಗಿ ದುಃಖಿಸುತ್ತದೆ ಎಂದು ತೋರಿಸಿಕೊಂಡು ಬಂದಿದೆ. ಬಹಳ ಹಿಂದಿನಿಂದಲೂ ನಾಗರಿಕತೆಗಳಲ್ಲಿ ಹಾವಿನ ಬಗ್ಗೆ ಭಯ, ಪೂಜೆ ಹಾಗೂ ಪ್ರೀತಿ ಇವೆಲ್ಲವು ಜನರನ್ನು ಆಕರ್ಷಿಸಿದೆ. ಇನ್ನು ಹಾವಿನ ಕಲ್ಪನೆಯ ಜೀವನವನ್ನು ಧರ್ಮ, ಜಾನಪದ ಹಾಗೂ ಸಿನಿಮಾದಲ್ಲಿ ವಿಭಿನ್ನ ರೀತಿಯಾಗಿ ಕಥೆ ಕಟ್ಟಲಾಗಿದೆ.
ಪ್ರತಿಯೊಂದು ಕಥೆಯಲ್ಲಿಯೂ ನಾಗ ನಾಗಿಣಿಯ ಹುಡುಕಾಟದಲ್ಲಿ ಪ್ರೀತಿ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಶಿವಪುರಾಣ, ಮಹಾಭಾರತ ಹಾಗೂ ಭಗವತ ಪುರಾಣಗಳಲ್ಲಿ ಹಾವಿನ ಪ್ರೀತಿ ಕಂಡು ಬರುತ್ತದೆ.
ಅದೇ ರೀತಿ ಈ ಮೊರೆನಾದ ನಾಗರಹಾವುಗಳ ಕಥೆಯು ಪ್ರೀತಿ ಅಥವಾ ತ್ಯಾಗದ ಭಾವನೆ ಇರಬಹುದು ಎಂದು ಕಲ್ಪನೆ ಮಾಡಿಕೊಳ್ಳಬಹುದು ವಿನಃ ಇನ್ಯಾವುದೇ ಸಂಬಂಧವಿಲ್ಲ. ಈ ರೀತಿಯ ಘಟನೆಗಳು ಜಗತ್ತಿನ ಯಾವುದೋ ಒಂದು ಮೂಲೆಯಲ್ಲಿ ಅಪರೂಪವಾಗಿ ಸಂಭವಿಸುವ ಒಂದು ಸಂಗತಿ. ಇನ್ನು ಇವುಗಳ ಪ್ರೀತಿ ಪ್ರೇಮ ಎಂದು ಹೇಳುವುದು ಕಾಕತಾಳೀಯವಷ್ಟೇ. ಆದರೆ ಇದಕ್ಕೂ ವಿಜ್ಞಾನಕ್ಕೂ ಪುರಾಣಕ್ಕೂ ಯಾವುದೇ ಸಂಬಂಧವಿಲ್ಲ.