ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಭೀಕರ ಕಾಲ್ತುಳಿತ ಸಂಭವಿಸಿ 11 ಜನ ಉಸಿರು ಚೆಲ್ಲಿದ್ದರು. ಸಂಭ್ರಮದಲ್ಲಿ ಸೂತಕದ ಕರಿಛಾಯೆ ಆವರಿಸಿತ್ತು. ಕಾಲ್ತುಳಿತ ದುರಂತದಿಂದ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಈ ದುರಂತ ಮಾಸುವೇ ಮುನ್ನವೇ ನೆರೆಯ ತಮಿಳುನಾಡಿನಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದೆ. ತಮಿಳುನಾಡು ಕರೂರಿನಲ್ಲಿ (TamilNadu Karur) ನಟ ಹಾಗೂ ರಾಜಕಾರಣಿ ವಿಜಯ್ ದಳಪತಿ (Thalapathy Vijay) ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿ ವೇಳೆ ಕಾಲ್ತುಳಿತ ದುರಂತ ಆಗಿದ್ದು, 39 ಮಂದಿ ಉಸಿರು ಚೆಲ್ಲಿದ್ದಾರೆ, ಇನ್ನೂ ಹಲವಾರು ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ ಕಾಲ್ತುಳಿತಗಳು ಇದೇ ಮೊದಲೇನಲ್ಲ. 1954ರ ಕುಂಭಮೇಳದಲ್ಲಿ ಜರುಗಿದ್ದ ಅತಿದೊಡ್ಡ ಕಾಲ್ತುಳಿತ ಪ್ರಕರಣ (Stampede Cases) ಅತಿಹೆಚ್ಚು ಸದ್ದು ಮಾಡಿತ್ತು. ಆ ಬಳಿಕ ಉತ್ತರ ಭಾರತದಲ್ಲಿ ಕಾಲ್ತುಳಿತ ಪ್ರಕರಣಗಳು ನಡೆದೇ ಇವೆ. ಇನ್ನೂ ದಕ್ಷಿಣ ಭಾರತದಲ್ಲಿ 14 ವರ್ಷಗಳ ಬಳಿಕ ಭೀಕರ ದುರಂತ ಇದಾಗಿದೆ. 2011ರಲ್ಲಿ ಶಬರಿಮಲೆಯಲ್ಲಿ ಸಂಭವಿಸಿದ್ದ ಕಾಲ್ತುಳಿತ 104 ಭಕ್ತರನ್ನ ಬಲಿ ಪಡೆದಿತ್ತು. ಇದೀಗ ತಮಿಳುನಾಡಿನ ದುರಂತದಲ್ಲಿ 39 ಸಾವನ್ನಪ್ಪಿದ್ದು, ಇಡೀ ದೇಶವೇ ಕಂಬನಿ ಮಿಡಿದಿದೆ. ಹಾಗಿದ್ರೆ ಈ ಮೊದಲು ನಡೆದಿರುವ ಕಾಲ್ತುಳಿತ ದುರಂತಗಳು ಯಾವುವು? ಯಾವ ದುರಂತದಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಕುರಿತು ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು ಚಿನ್ನಸ್ವಾಮಿ ಕಾಲ್ತುಳಿತ ದುರಂತ (2025):
2025ರ 18ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹಬ್ಬವಾಗಿತ್ತು. ಪ್ರಸಕ್ತ ವರ್ಷದ ಜೂನ್ 3ರಂದು ಐಪಿಎಲ್‌ನಲ್ಲಿ ಟ್ರೋಫಿ ಗೆದ್ದು 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡಿತು. ಆದ್ರೆ ಆ ಸಂಭ್ರಮ ಒಂದು ದಿನವೂ ಪೂರೈಸಲಿಲ್ಲ. ಮರುದಿನವೇ ವಿಜಯೋತ್ಸವ ಮೆರವಣಿಗೆ ಸಂರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭೀಕರ ಕಾಲ್ತುಳಿತ ಸಂಭವಿಸಿ 11 ಜನ ಆರ್‌ಸಿಬಿ ಅಭಿಮಾನಿಗಳು ಪ್ರಾಣ ಕಳೆದುಕೊಂಡರು. ಇದೀ ದೇಶವೇ ಇದಕ್ಕೆ ಕಂಬನಿ ಮಿಡಿದಿತ್ತು.
ಹತ್ರಾಸ್ ಸತ್ಸಂಗ ಕಾರ್ಯಕ್ರಮ (2024):
ಉತ್ತರ ಪ್ರದೇಶ ರಾಜ್ಯದ ಹತ್ರಾಸ್‌ನಲ್ಲಿ ಮಹಿಳೆಯರೂ, ಮಕ್ಕಳೂ ಸೇರಿದಂತೆ ಸಾವಿರಾರು ಜನರು ಸೇರಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಂಟಾದ ಕಾಲ್ತುಳಿತದ ವೇಳೆ ನೂರಾರು ಮಂದಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ಧಾರ್ಮಿಕ ದುರಂತ ಎಂದೇ ಬಿಂಬಿತವಾಗಿದೆ. 80 ಸಾವಿರ ಮಂದಿಗೆ ಅನುಮತಿ ಪಡೆದು 2.5 ಲಕ್ಷ ಜನರನ್ನು ಸಂಘಟಕರು ಸೇರಿಸಿದ ಪರಿಣಾಮ ಉತ್ತರ ಪ್ರದೇಶದ ಹತ್ರಾಸ್ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 121 ಮಂದಿ ಮೃತಪಟ್ಟಿದ್ದರು.
ಸತ್ಸಂಗ ಕಾರ್ಯಕ್ರಮ ಮುಗಿದ ಬಳಿಕ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ ಕಾರು ಹತ್ತಿದ್ದಾರೆ. ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಚಕ್ರದ ಧೂಳನ್ನು ಸಂಗ್ರಹಿಸಲು ಅನುಯಾಯಿಗಳು ಮುಗಿಬಿದ್ದಿದ್ದರು. ಭಾರೀ ಸಂಖ್ಯೆಯಲ್ಲಿದ್ದ ಅನುಯಾಯಿಗಳು ಧೂಳು ಸಂಗ್ರಹಿಸಲು ಓಡಿದ ಪರಿಣಾಮ ಪುರುಷರು, ಮಹಿಳೆಯರು ಮತ್ತು ಮಕ್ಕಳು ಒಬ್ಬರ ಮೇಲೊಬ್ಬರು ಬಿದ್ದಿದ್ದರು. ಬಿದ್ದವರ ಮೇಲೆಯೇ ಜನರು ಓಡಿದ್ದರಿಂದ ಸಾವು, ನೋವಿನ ಸಂಖ್ಯೆ ಹೆಚ್ಚಾಗಿತ್ತು.
ರಾಮನವಮಿ ವೇಳೆ ಇಂದೋರ್‌ನಲ್ಲಿ ದುರಂತ (2023):
ಮಧ್ಯ ಪ್ರದೇಶದ ಇಂಧೋರ್ ನಗರದಲ್ಲಿ ರಾಮನವಮಿ ವೇಳೆ ಪವಿತ್ರ ಬಾವಿಯೊಂದರ ಮೇಲ್ಛಾವಣಿ ಕುಸಿದ ಪರಿಣಾಮ 36 ಮಂದಿ ಸಾವನ್ನಪ್ಪಿದ್ದರು. ಇಂದೋರ್‌ನ ಬೇಲೇಶ್ವರ ದೇವಸ್ಥಾನದಲ್ಲಿ ರಾಮನವಮಿ ವೇಳೆ ಹೋಮ-ಹವನ ಏರ್ಪಡಿಸಲಾಗಿತ್ತು. ಈ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಭಾರೀ ಜನಸಂಖ್ಯೆಯಲ್ಲಿ ಭಕ್ತರು ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಯಿತು. ಇದರಿಂದ ದೇವಸ್ಥಾನದ ಆವರಣದಲ್ಲಿದ್ದ ಬಾವಿಯ ಬಳಿ ಭೂಕುಸಿತ ಉಂಟಾಗಿ 36 ಮಂದಿ ಮೃತಪಟ್ಟರು.
ವೈಷ್ಣೋದೇವಿಯಲ್ಲಿ ಕಾಲ್ತುಳಿತಕ್ಕೊಳಗಾಗಿ 12 ಮಂದಿ ಸಾವು (2022):
ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿಯಲ್ಲಿ ಭಕ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಹಿನ್ನೆಲೆಯಲ್ಲಿ ಕಾಲ್ತುಳಿತ ಉಂಟಾಗಿ 12 ಮಂದಿ ಸಾವನ್ನಪ್ಪಿದ್ದರು. ವರ್ಷದ ಮೊದಲ ದಿನವೇ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ದೇವಸ್ಥಾನದ ಗೇಟ್ ನಂ.3ರ ಸಮೀಪ ಜನಸಂದಣಿಯಿಂದ ಕಾಲ್ತುಳಿತ ಉಂಟಾಗಿ 12 ಮಂದಿ ಸಾವನ್ನಪ್ಪಿದ್ದು, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಪುಷ್ಕರ ಉತ್ಸವದಲ್ಲಿ 27 ಭಕ್ತರು ದುರ್ಮರಣ (2015):
ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಪುಷ್ಕರ ಉತ್ಸವದ ವೇಳೆ ಗೋಧಾವರಿ ನದಿಯಲ್ಲಿ ಭಕ್ತಾದಿಗಳು ಸ್ನಾನ ಮಾಡುವಾಗ ಕಾಲ್ತುಳಿತ ಉಂಟಾಗಿ 27 ಮಂದಿ ಸಾವನ್ನಪ್ಪಿದ್ದರು. ದಕ್ಷಿಣದ ಕುಂಭಮೇಳ ಎಂದೇ ಹೆಸರುವಾಸಿಯಾಗಿರುವ ಆಂಧ್ರದ ಪುಷ್ಕರ ಮೇಳ 2015ರಲ್ಲಿ ನಡೆದಿತ್ತು. ಈ ಮೇಳದಲ್ಲಿ ಲಕ್ಷಾಂತರ ಭಕ್ತರು ಪುಷ್ಕರ ಘಾಟ್‌ನ ನದಿಯಲ್ಲಿ ಸ್ನಾನ ಮಾಡಲು ಬರುತ್ತಾರೆ. 2022ರ ಜು.14ರಂದು ಕೂಡ ಲಕ್ಷಾಂತರ ಭಕ್ತರು ಪುಣ್ಯ ಸ್ನಾನಕ್ಕೆಂದು ಬಂದಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ, ಉಸಿರಾಡಲು ಕಷ್ಟವಾಗಿ 27 ಮಂದಿ ಭಕ್ತರು ಕೊನೆಯುಸಿರೆಳೆದಿದ್ದರು..
ದಸರಾ ಸಂಭ್ರಮಾಚರಣೆ ವೇಳೆ ಕಾಲ್ತುಳಿತ (2014):
ಬಿಹಾರದ ಪಾಟ್ನಾದಲ್ಲಿ ದಸರಾ ಆಚರಣೆ ಮುಗಿದ ಬಳಿಕ ಗಾಂಧಿ ಮೈದಾನದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 32 ಮಂದಿ ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದರು.
ನವರಾತ್ರಿಯಲ್ಲೂ ನಡೆದಿತ್ತು ಕಾಲ್ತುಳಿತ (2013):
ಮಧ್ಯ ಪ್ರದೇಶದ ರತ್ನಘರ್ ದೇಗುಲದಲ್ಲಿ ನವರಾತ್ರಿ ಸಂಭ್ರಮಾಚರಣೆ ವೇಳೆ ನದಿ ಮೇಲಿನ ಸೇತುವೆ ಕುಸಿಯುತ್ತದೆ ಎಂಬ ವದಂತಿ ಹರಡಿದ ವೇಳೆ ಉಂಟಾದ ಕಾಲ್ತುಳಿತದಲ್ಲಿ 115 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಅದಾಲತ್ ಘಾಟ್‌ನಲ್ಲಿ ಕಾಲ್ತುಳಿತಕ್ಕೆ 20 ಸಾವು (2012):
ಪಾಟ್ನಾದ ಗಂಗಾ ನದಿ ತಟದಲ್ಲಿ ಇರುವ ಅದಾಲತ್ ಘಾಟ್‌ನಲ್ಲಿ ಛತ್ ಪೂಜೆ ನೆರವೇರುವಾಗ ಸೇತುವೆ ಕುಸಿತವಾಗಿ 20 ಮಂದಿ ಸಾವನ್ನಪ್ಪಿದ್ದರು.
ಹರಿದ್ವಾರದಲ್ಲಿ ಕಾಲ್ತುಳಿತ (2012):
ಹರಿದ್ವಾರದ ಗಂಗಾ ನದಿ ತೀರದಲ್ಲಿ ಹರ್ – ಕಿ – ಪೌರಿ ಘಾಟ್‌ನಲ್ಲಿ ಕಾಲ್ತುಳಿತ ಉಂಟಾಗಿ 20 ಮಂದಿ ಸಾವನ್ನಪ್ಪಿದ್ದರು.
ಜೀಪ್ ಪತನವಾಗಿ ಶಬರಿಮಲೆ ಭಕ್ತರ ದುರ್ಮರಣ (2011):
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಜೀಪ್ ಪತನವಾದ ಕಾರಣ ಉಂಟಾದ ಕಾಲ್ತುಳಿತದ ವೇಳೆ 104 ಶಬರಿಮಲೆ ಯಾತ್ರಿಕರು ಸಾವನ್ನಪ್ಪಿದ್ದರು. ಘಟನೆಯಿಂದ ನೂರಾರು ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆ ಕಾಲ್ತುಳಿತ ಉಂಟಾಗಿ ಕನಿಷ್ಟ 104 ಮಂದಿ ಭಕ್ತರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ದೇವಮಾನವನ ಕಾರ್ಯಕ್ರಮದಲ್ಲಿ ಕಾಲ್ತುಳಿತ (2010):
ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಕೃಪಾಲು ಮಹಾರಾಜನ ರಾಮ್ ಜಾಂಕಿ ದೇವಸ್ಥಾನದಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾರೊಬ್ಬರು ಉಚಿತ ಬಟ್ಟೆ ಮತ್ತು ಆಹಾರವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾಗ ಉಂಟಾದ ಕಾಲ್ತುಳಿತದಲ್ಲಿ ಸುಮಾರು 63 ಜನರು ಸಾವನ್ನಪ್ಪಿದ್ದರು.
ಬಾಂಬ್ ಸ್ಫೋಟದ ವದಂತಿಯಿಂದ ಕಾಲ್ತುಳಿತ (2008):
ರಾಜಸ್ಥಾನದ ಜೋಧಪುರ ನಗರದಲ್ಲಿ ಚಾಮುಂಡಾ ದೇವಿ ದೇವಸ್ಥಾನದಲ್ಲಿ ಭಕ್ತರು ನೆರದಿದ್ದ ವೇಳೆ ಬಾಂಬ್ ಸ್ಫೋಟಗೊಳ್ಳಲಿದೆ ಎನ್ನುವ ವದಂತಿಯ ಮಾತಿನಿಂದ ನೂರಾರು ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಿಂದ 250 ಮಂದಿ ಪ್ರಾಣ ಕಳೆದುಕೊಂಡಿದ್ದರು. 60ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು.
ಬಂಡೆ ಕುಸಿತ ವದಂತಿ, ನೂರಾರು ಭಕ್ತರು ಸಾವು (2008):
ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ನೈನಾ ದೇವಿ ದೇವಸ್ಥಾನದಲ್ಲಿ ಅಂದು ಸಾವಿರಾರು ಭಕ್ತರು ನೆರೆದಿದ್ದರು. ಭಕ್ತರ ನಡುವೆ ಯಾರೋ ಬಂಡೆ ಕುಸಿತಗೊಳ್ಳಲಿದೆ ಎನ್ನುವ ಮಾತನ್ನು ಹೇಳಿದ್ದರು. ಬಂಡೆ ಕುಸಿತದ ಭೀತಿಯಿಂದ ಭಕ್ತರ ನಡುವೆ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿತ್ತು. ಈ ಘಟನೆಯಲ್ಲಿ 162 ಜನರು ಸಾವನ್ನಪ್ಪಿ, 47 ಮಂದಿ ಗಾಯಗೊಂಡಿದ್ದರು.
ಮಹಾರಾಷ್ಟ್ರ ಮಂಧರದೇವಿ ದೇವಸ್ಥಾನದಲ್ಲಿ ಕಾಲ್ತುಳಿತ (2005):
ಮಂಧರದೇವಿ ದೇವಸ್ಥಾನದಲ್ಲಿ ವಾರ್ಷಿಕ ತೀರ್ಥಯಾತ್ರೆಯಲ್ಲಿ ಸಂಭವಿಸಿದ ಈ ಕಾಲ್ತುಳಿತ ದೇಶದಲ್ಲಿ ನಡೆದ ಕಾಲ್ತುಳಿತ ಘಟನೆಗಳಲ್ಲಿ ಅತ್ಯಂತ ಘನಘೋರ ಘಟನೆಗಳಲ್ಲಿ ಒಂದು. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಭಕ್ತಾದಿಗಳು ತೆಂಗಿನಕಾಯಿ ಒಡೆಯುತ್ತಿದ್ದರಿಂದ ಜಾರುತ್ತಿದ್ದ ಮೆಟ್ಟಿಲುಗಳ ಮೇಲೆ ಕೆಲವರು ಬಿದ್ದು ಅವಘಡ ಸಂಭವಿಸಿತು.
ನಾಸಿಕ್ ಕುಂಭಮೇಳದಲ್ಲಿ ಕಾಲ್ತುಳಿತ (2003):
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕುಂಭಮೇಳದಲ್ಲಿ ಪವಿತ್ರ ಸ್ನಾನದ ವೇಳೆ ಕಾಲ್ತುಳಿತದಲ್ಲಿ 39 ಜನರು ಸಾವನ್ನಪ್ಪಿದರು ಮತ್ತು ಸುಮಾರು 140 ಜನರು ಗಾಯಗೊಂಡಿದ್ದರು.
ಪ್ರಯಾಗ ಕುಂಭಮೇಳ ಕಾಲ್ತುಳಿತ (1954)
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ 1954ರಲ್ಲಿ ಜರುಗಿದ ಕುಂಭ ಮೇಳದಲ್ಲಿ, ಮೌನಿ ಅಮಾವಾಸ್ಯೆಯ (ಅಮಾವಾಸ್ಯೆ) ಮುಖ್ಯ ಸ್ನಾನದ ದಿನದಂದು ಈ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿದ್ದರೆ, ಕೆಲವು ವರದಿಗಳಲ್ಲಿ ಮೃತರ ಸಂಖ್ಯೆ 500 ಎಂದು ಹೇಳಲಾಗಿತ್ತು. ಭಾರೀ ಜನಸಂದಣಿಯಿಂದಾಗಿ ನೂಕು-ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.