ಮಹಾರಾಷ್ಟ್ರದ ರಾಜ್ಯ ಹಬ್ಬವಾದ ʻಗಣೇಶೋತ್ಸವʼ – ಏನಿದರ ಹಿನ್ನೆಲೆ?

Public TV
5 Min Read

ಭಾರತೀಯ ಪರಂಪರೆಯ ಪ್ರಕಾರ ಆಷಾಢ ಕಳೆದರೆ ಸಾಕು ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ಒಂದಾದ ಮೇಲೊಂದರಂತೆ ಹಬ್ಬಗಳು ಪ್ರತಿ ಮನೆಮನೆಯಲ್ಲೂ ವಿಜೃಂಭಿಸಲು ಪ್ರಾರಂಭಿಸುತ್ತವೆ. ಇದೇ ರೀತಿ ನಮ್ಮೆಲ್ಲರಲ್ಲೂ ಸಂತೋಷ, ಸಡಗರವನ್ನು ತನ್ನ ಜೊತೆಗೆ ಕರೆತರುವ ಗಣೇಶೋತ್ಸವ ಇನ್ನೇನು ಬರಲಿದೆ. ಇಡೀ ಭಾರತದಲ್ಲಿಯೇ ಗಣೇಶೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸುವ ಏಕೈಕ ರಾಜ್ಯವೆಂದರೆ ಅದು ಮಹಾರಾಷ್ಟ್ರ. ಅಂತೆಯೇ ಗಣೇಶೋತ್ಸವ ಪ್ರಾರಂಭವಾಗಿದ್ದು ಮಹಾರಾಷ್ಟ್ರದಲ್ಲಿ.

ಹೌದು, ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ಈ ಗಣೇಶೋತ್ಸವ ಇದೀಗ ಮಹಾರಾಷ್ಟ್ರದ ರಾಜ್ಯ ಹಬ್ಬವಾಗಿ ಘೋಷಣೆಯಾಗಿದೆ. ಶತಮಾನಗಳಷ್ಟು ಹಳೆಯದಾದ ಈ ಗಣೇಶೋತ್ಸವ ಇದೀಗ ಒಂದು ರಾಜ್ಯದ ಹಬ್ಬವಾಗಿ ಮಾರ್ಪಾಡಾಗಿದೆ. ಜು.10ರಂದು ಮಹಾರಾಷ್ಟ್ರ ಸರ್ಕಾರ ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವುದರ ಜೊತೆಗೆ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಈ ನಿರ್ಧಾರವನ್ನ ಕೈಗೊಂಡಿದೆ. ವಿಧಾನಸಭೆಯಲ್ಲಿ ರಾಜ್ಯದ ಸಂಸ್ಕೃತಿ ಸಚಿವ ಆಶಿಷ್ ಶೆಲಾರ್ ಅವರು ಈ ಕುರಿತು ಘೋಷಣೆ ಮಾಡಿ, ಗಣೇಶೋತ್ಸವ ಕೇವಲ ಆಚರಣೆಯಲ್ಲ, ಇದು ಮಹಾರಾಷ್ಟ್ರದ ಸಂಸ್ಕೃತಿ ಮತ್ತು ಗುರುತಿನ ಸಂಕೇತ ಎಂದು ತಿಳಿಸಿದರು. ನಮ್ಮ ಸಂಸ್ಕೃತಿಯ ರಕ್ಷಣೆ ಹಾಗೂ ಆಚರಣೆಗೆ ಸರ್ಕಾರ ಸದಾಕಾಲ ಬದ್ಧವಾಗಿರುತ್ತದೆ ಮತ್ತು ಗಣೇಶೋತ್ಸವದ ಸಂದರ್ಭದಲ್ಲಿ ಅಗತ್ಯ ಮೂಲ ಸೌಕರ್ಯ ಮತ್ತು ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದ ದೊಡ್ಡ ನಗರಗಳಾದ ಪುಣೆ, ಮುಂಬೈ ಸೇರಿದಂತೆ ಇತರ ನಗರಗಳಲ್ಲಿ ಅದ್ದೂರಿ ಆಚರಣೆಗಳಿಗೆ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತದೆ ಎಂದು ತಿಳಿಸಿದ್ದಾರೆ.

ಗಣೇಶೋತ್ಸವದ ಇತಿಹಾಸ:
1893ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಒಂದು ಅದ್ದೂರಿ ಉತ್ಸವವಾಗಿ ಪರಿವರ್ತನೆ ಮಾಡಿದರು. ಅದಕ್ಕೂ ಮುನ್ನ ಈ ಗಣೇಶೋತ್ಸವ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಮಾತ್ರ ಸೀಮಿತವಾಗಿತ್ತು. ಹೆಚ್ಚಾಗಿ ಮೇಲ್ಜಾತಿಯವರು, ಬ್ರಾಹ್ಮಣರು ಆಚರಿಸುತ್ತಿದ್ದರು. 1857ರ ಭಾರತೀಯ ಪ್ರಥಮ ಸ್ವತಂತ್ರ ಸಂಗ್ರಾಮದ ನಂತರ ಭಾರತೀಯ ಸೈನಿಕರು ಬ್ರಿಟಿಷರನ್ನು ಭಾರತದಿಂದ ಹೊರಗೋಡಿಸುವಲ್ಲಿ ವಿಫಲರಾದರು. ಹೀಗಾಗಿ ರಾಷ್ಟ್ರೀಯವಾದಿಗಳು ಈ ವಸಾಹತುಶಾಹಿಯನ್ನ ಸಂಪೂರ್ಣವಾಗಿ ಹೊರಗೆ ಕಳಿಸುವ ಬದಲು ಬ್ರಿಟಿಷರಿಂದ ರಿಯಾಯಿತಿಯನ್ನು ಪಡೆಯುವ ಬಗ್ಗೆ ಯೋಚಿಸಿದರು. ಈ ರಾಷ್ಟ್ರೀಯವಾದಿಗಳ ಪೈಕಿ ಒಬ್ಬರಾದ ಪತ್ರಕರ್ತ, ಶಿಕ್ಷಕ ಮತ್ತು ರಾಜಕೀಯ ಸಾಮಾಜಿಕ ಕಾರ್ಯಕರ್ತರಾಗಿದ್ದ ಬಾಲಗಂಗಾಧರ ತಿಲಕ್ ಅವರು 1881 ರಲ್ಲಿ ಅಗರ್ಕರ್ ಅವರೊಂದಿಗೆ ಸೇರಿ ಮರಾಠಿಯಲ್ಲಿ ಕೇಸರಿ ಹಾಗೂ ಇಂಗ್ಲಿಷ್ನಲ್ಲಿ ಮಹರಟ್ಟಾ ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿದರು. ಈ ಪತ್ರಿಕೆಯ ಮೂಲಕ ಬ್ರಿಟಿಷರ ಆಳ್ವಿಕೆಯ ವಿರುದ್ಧ ರಾಷ್ಟ್ರೀಯತಾ ವಾದವನ್ನು ಬಿತ್ತಲು ಪ್ರಾರಂಭಿಸಿದರು. ಈ ಮೂಲಕ ತಿಲಕರು ವಸಾಹತುಶಾಹಿ ವಿರೋಧಿ ಚಳುವಳಿಯಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದು ನಿಂತರು. ಹೀಗೆ ಮುಂದುವರೆದು 1893 ರಲ್ಲಿ ವಿಘ್ನ ನಿವಾರಣೆ ಮಾಡುವ ಗಣಪತಿಯನ್ನು ಪೂಜಿಸುವ ಹೊಸ ಸಂಪ್ರದಾಯವನ್ನು ತಿಲಕರು ಪ್ರಾರಂಭಿಸಿದರು. ಈ ಗಣೇಶೋತ್ಸವದ ಮೂಲಕ ದೇಶಭಕ್ತಿ ಗೀತೆಗಳು ಹಾಡುವುದು, ರಾಷ್ಟ್ರೀಯತಾವಾದದ ವಿಚಾರಗಳನ್ನ ಪ್ರಚಾರ ಮಾಡಿದರು. ಹೀಗೆ ಮುಂದೆ ಗಣೇಶ ಹಬ್ಬವನ್ನು ಸಾರ್ವಜನಿಕ ವಲಯಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಳಿಕ ಮಹಾರಾಷ್ಟ್ರದಾದ್ಯಂತ ಗಣೇಶೋತ್ಸವದ ಸಂಘಟನೆಗಳು ಸ್ಥಾಪನೆಯಾದವು. ಯುವಕರು ಗುಂಪುಗಳನ್ನು ಕಟ್ಟಿಕೊಳ್ಳಲು ಆರಂಭಿಸಿದರು. ಬಳಿಕ ರಾಷ್ಟ್ರೀಯತಾವಾದ ಪ್ರತಿರೋಧವನ್ನು ಹೆಚ್ಚಿಸಲು ತಿಲಕರು 1896ರಲ್ಲಿ ಶಿವಾಜಿ ಉತ್ಸವವನ್ನು ಪ್ರಾರಂಭಿಸಿದರು.

ಮುಂದುವರೆದು ಗಣೇಶ್ೋತ್ಸವ ಸಾರ್ವಜನಿಕ ಸಂಕೇತವಾಗಿ ಮಾರ್ಪಾಡಾಯಿತು. ಗಣೇಶನ ದೊಡ್ಡ ದೊಡ್ಡ ವಿಗ್ರಹಗಳನ್ನ ತಂದು ಸಾರ್ವಜನಿಕ ಮೆರವಣಿಗೆ, ಭಜನೆ, ಭಾಷಣ, ಸಾಮಾಜಿಕ ಚಟುವಟಿಕೆಗಳೊಂದಿಗೆ ಈ ಗಣೇಶೋತ್ಸವವನ್ನು ಆಯೋಜಿಸಲು ಪ್ರಾರಂಭಿಸಿದರು. ಇದೊಂದು ಸಾಮಾಜಿಕ ಏಕತೆಯ ವೇದಿಕೆಯಾಗಿ ಪರಿವರ್ತನೆಗೊಂಡಿತು. ಹೀಗೆ ಈ ಗಣೇಶೋತ್ಸವ ಮುಂಬೈ, ನಾಗಪುರ, ಕೊಲ್ಲಾಪುರ ದಂತಹ ಬೇರೆ ಬೇರೆ ನಗರಗಳಲ್ಲಿ ಹರಡಿಕೊಂಡಿತು. ಇದೇ ರೀತಿ ಪ್ರಾರಂಭವಾದ ಗಣೇಶ ಹಬ್ಬ ಇಡೀ ದೇಶಾದ್ಯಂತ ಆಚರಣೆಗೆ ಬಂದಿತು.

ಗಣೇಶೋತ್ಸವದ ಆಚರಣೆ ಹೇಗೆ?
ಗಣೇಶ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಆಚರಿಸುವ ಹಬ್ಬವನ್ನು ಗಣೇಶ ಹಬ್ಬ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ಗಣೇಶ ಹಬ್ಬವನ್ನು ಒಂದು ದಿನದಿಂದ ಐದು, ಏಳು, ಹನ್ನೊಂದು, 21 ಹೀಗೆ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ಕೆಲವೆಡೆ ಎರಡು ದಿನ, ಮೂರು ದಿನ, ಹತ್ತು ದಿನ ಎಂದು ಆಚರಿಸುವ ಸಂಪ್ರದಾಯವು ಇದೆ. ಈ ಹಬ್ಬವನ್ನ ವಿನಾಯಕ ಚತುರ್ಥಿ ಎಂತಲೂ ಕರೆಯುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ಗಣೇಶ ವಿಗ್ರಹವನ್ನ ತಂದು ಪೂಜೆ ಮಾಡಿ ವಿಘ್ನಗಳನ್ನು ನಿವಾರಣೆ ಮಾಡುವಂತೆ ಪ್ರಾರ್ಥಿಸುತ್ತಾರೆ. ಇನ್ನು ಸಾರ್ವಜನಿಕ ವಲಯದಲ್ಲಿ ದೊಡ್ಡ ವಿಗ್ರಹಗಳನ್ನು ತಂದು ಮೆರವಣಿಗೆ ಮಾಡಿ ಇನ್ನಿತರ ಚಟುವಟಿಕೆಗಳು, ನೈವೇದ್ಯ, ಪ್ರಸಾದವನ್ನು ವಿತರಿಸುವ ಮೂಲಕ ಆಚರಿಸುತ್ತಾರೆ.

ಏನಿದು ಗಣಪತಿ ಬಪ್ಪಾ ಮೋರ್ಯ?
ಗಣೇಶನಿಗಾಗಿ ಹೇಳುವ ಮಂತ್ರವೆಂದರೆ ಇದು. ಗಣೇಶನ ಇನ್ನೊಂದು ಹೆಸರೇ ಗಣಪತಿ. ಗಣಪತಿ ಎಂದರೆ ಗಣಗಳ ಪ್ರಭು ಎಂದರ್ಥ. ಬಪ್ಪಾ ಎಂದರೆ ತಂದೆ. ಮೋರ್ಯ ಎಂದರೆ 14 ರಿಂದ 15ನೇ ಶತಮಾನದ ಸಂತ ಮತ್ತು ಪುಣೆ ಬಳಿಯ ಚಿಂಚ್ ವಾಡ್ ನ ಗಣೇಶನ ಭಕ್ತ ಮೋರ್ಯ ಗೋಸವಿಯನ್ನು ಉಲ್ಲೇಖಿಸುತ್ತದೆ.

ಇದೇ ರೀತಿ ಕೆಲವು ರಾಜ್ಯಗಳು ತಮ್ಮ ರಾಜ್ಯ ಉತ್ಸವಗಳನ್ನು ಹೊಂದಿವೆ:
ಅರುಣಾಚಲ ಪ್ರದೇಶ: ಹಾರ್ನ್‌ಬಿಲ್ ಸಂರಕ್ಷಣೆ ಹಾಗೂ ಅದರ ಬುದ್ಧಿವಂತಿಕೆಯನ್ನು ತೋರಿಸುವ ದೃಷ್ಟಿಯಿಂದ ಪಕ್ಕೆ ಪಾಗಾ (ಹಾರ್ನ್‌ಬಿಲ್) ಉತ್ಸವವನ್ನು 2019ರ ಜನವರಿಯಲ್ಲಿ ರಾಜ್ಯ ಉತ್ಸವವೆಂದು ಘೋಷಿಸಿತು.

ಮಣಿಪುರ: ತಮ್ಮ ರಾಜ್ಯದ ಹೂವನ್ನು ಗೌರವಿಸುವ ದೃಷ್ಟಿಯಿಂದ ನಾಲ್ಕು ದಿನಗಳ ಹಬ್ಬವಾದ ಶಿರುಯಿ ಲಿಲಿ ಉತ್ಸವವನ್ನು 2017ರಲ್ಲಿ ರಾಜ್ಯ ಉತ್ಸವವೆಂದು ಘೋಷಿಸಿದೆ.

ತ್ರಿಪುರ: 2015ರ ಜನವರಿಯಲ್ಲಿ ತ್ರಿಪುರ ರಾಜ್ಯವು ಮೈತೆಯಿ ಉಮಂಗ್ ಲೈ ಹರೋಬಾ ಉತ್ಸವವನ್ನು ಅಧಿಕೃತ ರಾಜ್ಯ ಉತ್ಸವವೆಂದು ಘೋಷಿಸಿತು. ಈ ಮೂಲಕ ಸಾಂಪ್ರದಾಯಿಕ ಆಚರಣೆಗಳು, ನೃತ್ಯಗಳು ಮತ್ತು ಸಂಗೀತದೊಂದಿಗೆ ಜೀವಂತ ಆತ್ಮಗಳನ್ನು ಆಚರಿಸುತ್ತಾರೆ.

ಜಾರ್ಖಂಡ್: 2025ರ ಆರಂಭದಲ್ಲಿ ಸಿರಸಿತಾದಲ್ಲಿರುವ ಓರಾನ್ ತೀರ್ಥಯಾತ್ರೆಯನ್ನು ರಾಜ್ಯ ಉತ್ಸವ ಎಂದು ಘೋಷಿಸಿದೆ.

ಕರ್ನಾಟಕ: ಮೈಸೂರು ದಸರಾವನ್ನು ಅಧಿಕೃತವಾಗಿ ರಾಜ್ಯೋತ್ಸವವೆಂದು ಘೋಷಿಸಲಾಗಿದೆ. ನವರಾತ್ರಿಯ ಸಮಯದಲ್ಲಿ 10 ದಿನಗಳ ಭವ್ಯ ಸಾಂಸ್ಕೃತಿಕ ಉತ್ಸವ, ವಿಜಯದಶಮಿಯಂದು ಅಂತ್ಯಗೊಳ್ಳುತ್ತದೆ, ಇದರಲ್ಲಿ ಆನೆಗಳೊಂದಿಗೆ ಅಂಬಾರಿಯು ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಸಾಗುತ್ತದೆ.

ಆಂಧ್ರಪ್ರದೇಶ: ಅಹೋಬಿಲಂ ಪರುವೇತ ಉತ್ಸವವನ್ನು 2024ರ ಮಾರ್ಚ್ ನಲ್ಲಿ ರಾಜ್ಯ ಉತ್ಸವವೆಂದು ಘೋಷಿಸಲಾಯಿತು. ಶತಮಾನಗಳಷ್ಟು ಹಳೆಯದಾದ ಈ ಅಣಕು ಬೇಟೆ ಉತ್ಸವವು ನರಸಿಂಹ ಸ್ವಾಮಿಯನ್ನು ಕೇಂದ್ರೀಕರಿಸಿದ್ದು, ಅರಸವಳ್ಳಿ ದೇವಸ್ಥಾನದಲ್ಲಿ ರಥ ಸಪ್ತಮಿ ಕೂಡ ರಾಜ್ಯ ಉತ್ಸವವಾಗಿದೆ.

ತೆಲಂಗಾಣ: 2024ರ ನವೆಂಬರ್ ನಲ್ಲಿ ಸದರ್ ಸಮ್ಮೇಳನ (ಎಮ್ಮೆ ಮೆರವಣಿಗೆ) ವನ್ನು ರಾಜ್ಯ ಉತ್ಸವವೆಂದು ಘೋಷಿಸಲಾಯಿತು.

ಉತ್ತರಾಖಂಡ್: 2022ರ ಜುಲೈನಲ್ಲಿ ಮಾ ವಾರಾಹಿ ಬಗ್ವಾಲ್ ಮೇಳವನ್ನು ರಾಜ್ಯ ಸರ್ಕಾರದ ಉತ್ಸವವೆಂದು ಘೋಷಿಸಲಾಯಿತು. ರಕ್ಷಾ ಬಂಧನದ ಸಮಯದಲ್ಲಿ ಚಂಪಾವತ್‌ನಲ್ಲಿ ನಡೆಯುವ ಇದು ಮಾ ವಾರಾಹಿ ದೇವಸ್ಥಾನದಲ್ಲಿ ವಿಶಿಷ್ಟ ಆಚರಣೆಗಳನ್ನು ಒಳಗೊಂಡಿರುತ್ತದೆ.

Share This Article