PublicTV Explainer: ಟ್ರಂಪ್ ಟ್ಯಾರಿಫ್ ವಾರ್ – ಭಾರತದ ಯಾವ ವಲಯಗಳ ಮೇಲೆ ಪ್ರಭಾವ ಹೆಚ್ಚು?

Public TV
5 Min Read

ಜಗತ್ತಿನ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಟ್ಯಾರಿಫ್ ವಿಷಯವಾಗಿ ಭಾರಿ ಚರ್ಚೆಯಲ್ಲಿದ್ದಾರೆ. ಪ್ರತಿ ದಿನ ಬೇರೆ ಬೇರೆ ದೇಶಗಳ ಮೇಲೆ ಸುಂಕ ಸಮರವನ್ನ ಸಾರುತ್ತಲೇ ಬರುತ್ತಿದ್ದಾರೆ. ಹೀಗಿರುವಾಗ ಇದೀಗ ಮತ್ತೆ ಭಾರತದ ಮೇಲೆ ಆಮದು ಸುಂಕ ಹೆಚ್ಚಿಸಿದ್ದಾರೆ.

ಏನಿದು ಟ್ಯಾರಿಫ್ ವಾರ್/ಸುಂಕ ಸಮರ?

ಎರಡು ಅಥವಾ ಹೆಚ್ಚು ದೇಶಗಳು ಪರಸ್ಪರ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕವನ್ನ ವಿಧಿಸುತ್ತವೆ. ಈ ಮೂಲಕ ಆರ್ಥಿಕ ಒತ್ತಡವನ್ನ ಸೃಷ್ಟಿಸುವ ಪರಿಸ್ಥಿತಿ ಉಂಟು ಮಾಡಲಾಗುತ್ತದೆ. ಉದಾಹರಣೆಗೆ, ಒಂದು ದೇಶ ತನ್ನ ಮಾರುಕಟ್ಟೆಯ ನಿಯಂತ್ರಣಕ್ಕೋಸ್ಕರ ಇನ್ನೊಂದು ದೇಶದಿಂದ ಬರುವ ವಸ್ತುಗಳ ಮೇಲೆ ಹೆಚ್ಚುವರಿ ಸುಂಕವನ್ನ ವಿಧಿಸುತ್ತದೆ. ಇದಕ್ಕೆ ಪ್ರತಿಯಾಗಿ ರಫ್ತು ಮಾಡುವ ದೇಶವು ಆಮದು ಮಾಡಿಕೊಳ್ಳುವ ದೇಶದ ಮೇಲೆ ಸುಂಕ ವಿಧಿಸುತ್ತದೆ. ಹೀಗೆ ಈ ಸುಂಕ ಸಮರದಿಂದಾಗಿ ಸರಕು, ಸಾಗಾಣೆ ದರ ಹೆಚ್ಚಾಗುತ್ತದೆ, ಜೊತೆಗೆ ವ್ಯಾಪಾರದ ಮೇಲೆಯೂ ಪರಿಣಾಮ ಬೀರುತ್ತದೆ, ಕೆಲವೊಮ್ಮೆ ಆರ್ಥಿಕ ಹಾನಿ ಉಂಟುಮಾಡುವ ಸಾಧ್ಯತೆಯೂ ಇರುತ್ತದೆ.

ಅಮೆರಿಕಾ ಮತ್ತು ಭಾರತದ ನಡುವಿನ ಸುಂಕ ಸಮರ ಹೇಗಿದೆ?

ಮೊದಲ ಬಾರಿಗೆ 2017ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾದ ಬಳಿಕ ಈ ಸುಂಕ ಸಮರವನ್ನ ಪ್ರಾರಂಭಿಸಿದರು. 2018ರಲ್ಲಿ ಮೊದಲ ಬಾರಿಗೆ ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ಸುಂಕ ವಿಧಿಸಿದರು. ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದ ನಂತರ ಭಾರತವು ಪ್ರತಿಯಾಗಿ ಬಾದಾಮಿ, ಸೇಬು ಸೇರಿದಂತೆ ಇನ್ನಿತರ ವಸ್ತುಗಳ ಮೇಲೆಯೂ ಹೆಚ್ಚುವರಿ ಸುಂಕ ವಿಧಿಸಿತ್ತು. ಅದಾದ ಬಳಿಕ ಮತ್ತೆ 2019 ರಲ್ಲಿ ಅಮೆರಿಕಾ ಭಾರತಕ್ಕೆ ನೀಡಿದ ಜಿಎಸ್‌ಪಿ (GSP) ಸೌಲಭ್ಯವನ್ನು ರದ್ದುಗೊಳಿಸಿತು.

ಏನಿದು ಜಿಎಸ್‌ಪಿ?

Generalized System of Preferences ಅಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ನೀಡುವ ವಿಶೇಷ ವ್ಯಾಪಾರ ಸೌಲಭ್ಯವೇ ಇದು. ಈ GSP ಅಡಿಯಲ್ಲಿ ಕೆಲವು ಉತ್ಪನ್ನಗಳನ್ನು ಸುಂಕವಿಲ್ಲದೆ ಅಥವಾ ಕಡಿಮೆ ಸುಂಕದಲ್ಲಿ ಆಮದು ಮಾಡುವ ಅವಕಾಶವಿರುತ್ತದೆ.

ಅದರಂತೆ ಅಮೆರಿಕಾ ಭಾರತಕ್ಕೆ ನೀಡಿದ್ದ GSP ಸೌಲಭ್ಯವನ್ನು ರದ್ದುಗೊಳಿಸಿತು. ಈ ಮೂಲಕ ಭಾರತೀಯ ವಸ್ತುಗಳು, ಆಭರಣಗಳು, ಕೈಮಗ್ಗ ಉತ್ಪನ್ನಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ಪರಿಣಾಮ ಬೀರಿತು. ಇದಕ್ಕೆ ಪ್ರತಿಯಾಗಿ ಭಾರತ ಅಮೆರಿಕಾದ 28 ವಸ್ತುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿತು.

ಇನ್ನು 2020ರಲ್ಲಿ ಕೋವಿಡ್ ಸ್ಥಿತಿಯಿಂದಾಗಿ ಜಾಗತಿಕ ವ್ಯಾಪಾರದಲ್ಲಿ ಕುಸಿತ ಕಂಡಿತು. ಆದರೆ ಔಷಧಿ, ವೈದ್ಯಕೀಯ ಕ್ಷೇತ್ರಗಳಲ್ಲಿ ಬಳಸಲಾಗುವ ಸಾಧನಗಳ ವಿಚಾರದಲ್ಲಿ ಭಾರತ ಮತ್ತು ಅಮೆರಿಕಾದ ನಡುವಿನ ಹೊಂದಾಣಿಕೆ ಚೆನ್ನಾಗಿತ್ತು. ಈ ಸಮಯದಲ್ಲಿ ಸುಂಕ ಸಮರ ತಾತ್ಕಾಲಿಕವಾಗಿ ಕಡಿಮೆಯಾಗಿತ್ತು. ಅದಾದ ಬಳಿಕ ಡೊನಾಲ್ಡ್ ಟ್ರಂಪ್ ಅಧಿಕಾರವಧಿ ಮುಗಿದು ಜೋ ಬೈಡನ್ ಅಮೆರಿಕಾ ಅಧ್ಯಕ್ಷರಾದರು. ಈ ಸಮಯದಲ್ಲಿ ಭಾರತದಿಂದ ಬರುವ ಕೆಲವು ಉತ್ಪನ್ನಗಳ ಮೇಲೆ ಅಮೆರಿಕಾ ಸುಂಕ ಸಡಿಲಿಕೆ ಮಾಡಿತು. ಇದೇ ಸಮಯದಲ್ಲಿ ಡಿಜಿಟಲ್ ತೆರಿಗೆ ವಿಷಯವಾಗಿ ಕೆಲವು ಒಪ್ಪಂದಗಳು ಆಗಿದ್ದವು.

2024ರಲ್ಲಿ ಅಮೆರಿಕಾವು ಭಾರತಕ್ಕೆ ಪ್ರಮುಖ ರಫ್ತು ತಾಣವಾಗಿತ್ತು. ಆ ಸಮಯದಲ್ಲಿ 87.3 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನ ಕಳಿಸಿಕೊಟ್ಟಿತ್ತು. ಆದರೆ 2025ರಲ್ಲಿ ಟ್ರಂಪ್ ಮರು ಆಯ್ಕೆಯಾಗಿ ಅಧಿಕಾರಕ್ಕೆ ಬಂದ ನಂತರ ಜುಲೈ 30ರಂದು, ಭಾರತದ ಮೇಲೆ ಹೆಚ್ಚುವರಿ ಯಾಗಿ ಶೇಕಡಾ 25ರಷ್ಟು ಸುಂಕ ಘೋಷಿಸಿದರು.

ಈಗ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ 25% ಸುಂಕವನ್ನು ಟ್ರಂಪ್‌ ಘೋಷಿಸಿದ್ದಾರೆ. ಪರಿಣಾಮ ಅಮೆರಿಕಾಕ್ಕೆ ಹೋಗುವ ಹಲವು ವಸ್ತುಗಳಿಗೆ 50% ತೆರಿಗೆ ವಿಧಿಸಲಾಗಿದೆ.

ಈ ನಿರ್ಧಾರದಿಂದ ವಜ್ರ, ಆಭರಣ, ಮೀನುಗಾರಿಕೆ ಹಾಗೂ ರಾಸಾಯನಿಕ ವಸ್ತುಗಳ ಮೇಲೆ ಭಾರಿ ಹೊಡೆತ ಉಂಟಾಗಿದೆ. ಹೀಗಾಗಿ ಭಾರತ ಪರ್ಯಾಯ ಮಾರುಕಟ್ಟೆ ವ್ಯವಸ್ಥೆಗಾಗಿ ಹಾಗೂ ಹೊಸ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಲು ಮುಂದಾಗಿದೆ.

ಅಮೆರಿಕಾದ ಕಸ್ಟಮ್ಸ್ ಅಧಿಸೂಚನೆಯ ಪ್ರಕಾರ ಆಗಸ್ಟ್ 27ರ ಮಧ್ಯರಾತ್ರಿಯಿಂದ ಈ ಆಮದು ಸುಂಕಗಳ ನಿಯಮ ಜಾರಿಯಾಗಿದೆ.

ಯಾವ ವಲಯಗಳಿಗೆ ಹೆಚ್ಚು ಹೊಡೆತ?

ಆಭರಣ, ಚಿನ್ನ:

ಭಾರತದಿಂದ ಅಮೆರಿಕಾ ಬಹುದೊಡ್ಡ ಮಟ್ಟದಲ್ಲಿ ಆಭರಣ ಮತ್ತು ವಜ್ರಗಳನ್ನ ಆಮದು ಮಾಡಿಕೊಳ್ಳುತ್ತದೆ. ಈ ವಲಯದಲ್ಲಿ ವರ್ಷಕ್ಕೆ ಸುಮಾರು 10 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳು ಭಾರತದಿಂದ ಅಮೆರಿಕಾಕ್ಕೆ ರಫ್ತು ಮಾಡಲಾಗುತ್ತದೆ. ಇದೀಗ ಅಮೆರಿಕಾ ಹೆಚ್ಚುವರಿ ಸುಂಕದಿಂದಾಗಿ ಭಾರತದಿಂದ ಅಮೆರಿಕಕ್ಕೆ ಈ ವಸ್ತುಗಳ ಆಮದು ಕಡಿಮೆಯಾಗುವ ಸಾಧ್ಯತೆ ಇದೆ.

ಗೃಹ ಉತ್ಪನ್ನಗಳು:

ಈ ಸುಂಕ ಸಮರದಿಂದಾಗಿ ಕೈಮಗ್ಗ, ಕಸೂತಿ ಕೆಲಸಗಳಿಂದ ತಯಾರಾದ ಕೆಲವು ವಸ್ತುಗಳ ಆಮದು ಕಡಿಮೆಯಾಗುತ್ತದೆ. ಈ ಮೊದಲು ಭಾರತದಿಂದ ಅಮೆರಿಕಕ್ಕೆ ಈ ವಸ್ತುಗಳು ಜಿ ಎಸ್ ಪಿ ಅಡಿಯಲ್ಲಿ ಸುಂಕ ವಿಲ್ಲದೆ ರಫ್ತು ಮಾಡಲಾಗುತ್ತಿತ್ತು. ಹೀಗಾಗಿ ಈ ವಲಯದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಅಭಿವೃದ್ಧಿ ಮೇಲೆ ಪರಿಣಾಮ ಬೀರಿ, ಭಾರಿ ಪ್ರಮಾಣದ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಮೀನುಗಾರಿಕಾ ವಲಯ:

ಭಾರತದ ಮೀನುಗಾರಿಕೆ ಮತ್ತು ಸೀ ಫುಡ್ ಉತ್ಪನ್ನಗಳ ಮೇಲೆ ಅಮೆರಿಕ ಭಾರಿ ಬೇಡಿಕೆ ಹೊಂದಿತ್ತು. ಹೀಗಾಗಿ ಸದ್ಯ ವಿಧಿಸಿರುವ ಶೇಕಡಾ 50ರಷ್ಟು ಸುಂಕದಿಂದಾಗಿ ಈ ವಲಯದ ರಫ್ತು ಶೇಕಡ 40ರಷ್ಟು ಕುಸಿಯುವ ಸಾಧ್ಯತೆ ಇದೆ.

ವೈದ್ಯಕೀಯ ಹಾಗೂ ತಂತ್ರಜ್ಞಾನ ಉತ್ಪನ್ನಗಳು:

ಔಷಧಿ ಸೇರಿದಂತೆ ಇನ್ನಿತರ ವೈದ್ಯಕೀಯ ವಲಯದ ಉತ್ಪನ್ನಗಳ ಮೇಲೆ ಈ ಸುಂಕದಿಂದಾಗಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಇದಲ್ಲದೆ ಮಸಾಲೆ ಪದಾರ್ಥಗಳು, ಬಾಸ್ಮತಿ ಹಾಗೂ ಚಹಾ ಸೇರಿದಂತೆ ಕೃಷಿ ಉತ್ಪನ್ನಗಳ ಪರಿಣಾಮ ಬೀರಲಿದೆ. ಅಮೇರಿಕಾದಲ್ಲಿನ ಆಮದುದಾರರು ಮೆಕ್ಸಿಕನ್ ಹಾಗೂ ಯುರೋಪ್ ದೇಶದ ವಸ್ತುಗಳ ಮೇಲೆ ಹೆಚ್ಚು ಒಲವು ತೋರುತ್ತಿರುವುದರಿಂದ ಭಾರತದ ಕೈಗಾರಿಕಾ ಯಂತ್ರೋಪಕರಣಗಳು ಹಾಗೂ ವಾಹನ ರಫ್ತುಗಳ ಮೇಲೆ ಹೊಡೆತ ಬೀಳಲಿದೆ. ಜೊತೆಗೆ ಸೂರತ್ ಮತ್ತು ಮುಂಬೈನಲ್ಲಿ ಉದ್ಯೋಗಗಳ ಮೇಲೆಯೂ ಇದು ಪರಿಣಾಮ ಬೀರಲಿದೆ. ಇನ್ನು ಬಟ್ಟೆ ಹಾಗೂ ಜವಳಿ ವಸ್ತುಗಳ ಮೇಲೆ ಪರಿಣಾಮ ಬೀರಲಿದ್ದು, ಎನ್ ಸಿ ಆರ್ ಹಾಗೂ ಬೆಂಗಳೂರು ಪ್ರದೇಶಗಳ ಮೇಲೆಯೂ ಪ್ರಭಾವ ಬೀರುತ್ತದೆ.

ಈ ಸುಂಕದಿಂದಾಗಿ ಭಾರತದಿಂದ ಅಮೆರಿಕಾಕ್ಕೆ ರಫ್ತು ಮಾಡಲಾಗುವ ವಸ್ತುಗಳ ಪೈಕಿ 60.2 ಬಿಲಿಯನ್ ಡಾಲರ್ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸುಂಕ ಜಾರಿಯಾದ ಬಳಿಕ ಇದರ ಮೌಲ್ಯ 18.6 ಬಿಲಿಯನ್ ಡಾಲರ್ ಗೆ ಇಳಿಯುವ ಸಾಧ್ಯತೆಯಿದ್ದು, ಒಟ್ಟು ಭಾರತದಿಂದ ಅಮೆರಿಕಾಕ್ಕೆ ಶೇಕಡ 43ರಷ್ಟು ರಫ್ತು ಆಗುವ ಸಾಧ್ಯತೆ ಇದೆ. ಅದಲ್ಲದೆ ಇದರಿಂದಾಗಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಮೇಲೆ ಭಾರಿ ಹೊಡೆತ ಬೀಳಲಿದ್ದು, ಹೆಚ್ಚಿನ ಜನರು ನಿರುದ್ಯೋಗಿಗಳಾಗುವ ಸಾಧ್ಯತೆ ಇದೆ.

ಶೇಕಡಾವಾರು ಪ್ರಭಾವಿತ ವಲಯಗಳು:

  • ಆಭರಣ ಮತ್ತು ವಜ್ರ – 53.2%
  • ಬಟ್ಟೆ ಸೇರಿದಂತೆ ಇನ್ನಿತರ ಉತ್ಪನ್ನಗಳು – 63.05%
  • ಸೀ ಫುಡ್ ಹಾಗೂ ಮೀನುಗಾರಿಕೆ – 58.5%
  • ರಾಸಾಯನಿಕಗಳು – 54%
  • ಯಂತ್ರೋಪಕರಣಗಳು- 51.3%

ಈ ಸುಂಕದಿಂದಾಗಿ ದೇಶದ ವಿವಿಧ ವಲಯಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಔಷಧ ಹಾಗೂ ಎಲೆಕ್ಟ್ರಾನಿಕ್ಸ್ ಗಳಾದ ಮೊಬೈಲ್, ಲ್ಯಾಪ್ಟಾಪ್ ಗಳು ಇವುಗಳಿಂದ ಹೊರತಾಗಿವೆ. ಕಾರಣ ಅಮೆರಿಕಾದ ಜನರು ಈ ಎಲೆಕ್ಟ್ರಾನಿಕ್ಸ್ ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಒಂದು ವೇಳೆ ಇವುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿದರೆ ಅಮೆರಿಕಾದ ಆರ್ಥಿಕತೆಯ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಈ ವಸ್ತುಗಳನ್ನು ಸುಂಕಪಟ್ಟಿಯಿಂದ ಹೊರಗಿರಿಸಲಾಗಿದೆ.

Share This Article