Explained | ಹುಲಿ ಗಣತಿ ಮಾಡೋದು ಹೇಗೆ?

6 Min Read

ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯು ತನ್ನದೇ ಆದ ವಿಭಿನ್ನ ರೂಪ, ಆಕಾರದೊಂದಿಗೆ ಬೆಳೆದಿರುತ್ತದೆ. ಅದು ಮಾನವನಾದರೂ ಅಥವಾ ಯಾವುದೇ ಪ್ರಾಣಿ-ಪಕ್ಷಿಯಾದರೂ ಅಷ್ಟೇ. ಇವೆಲ್ಲವೂ ಪರಿಸರದ ಸಮತೋಲನವನ್ನು ಕಾಪಾಡುವ ಉದ್ದೇಶದೊಂದಿಗೆ ಪ್ರಕೃತಿಯ ಮಡಿಲಲ್ಲಿವೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಭಾರತದಲ್ಲಿ ಜನಗಣತಿ ನಡೆಸಲಾಗುತ್ತದೆ. ಅದರಂತೆ ಪ್ರಾಣಿ ಪಕ್ಷಿಗಳ ಸಂಖ್ಯೆ ಮತ್ತು ಅಳಿವಿನಂಚಿನಲ್ಲಿರುವ ಪ್ರಾಣಿಗಳ ರಕ್ಷಣೆಗೆ ಕೆಲ ವರ್ಷಗಳ ಹಿಂದೆ ಪ್ರಾಣಿಗಳ ಗಣತಿ ನಡೆಸಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ. 

ಹೌದು, ವಿಶ್ವದ ಎಲ್ಲಾ ಕಡೆ ಪ್ರಕೃತಿಯ ಸಮತೋಲನವನ್ನು ಕಾಪಾಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ವನ್ಯಜೀವಿಗಳನ್ನ ಸಂಪತ್ತು ಎಂದು ಪರಿಗಣಿಸಿ, ಅವುಗಳನ್ನ ರಕ್ಷಣೆ ಮಾಡುವ ಉದ್ದೇಶದಿಂದ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ. ಇದರ ಭಾಗವಾಗಿ 1973 ರಲ್ಲಿ ಭಾರತ ಸರ್ಕಾರ (Govt of India) ಹುಲಿಗಣತಿಯನ್ನು (Tiger Census) ಪ್ರಾರಂಭಿಸಿತು. ಅದರಂತೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಗಣತಿಯನ್ನು ನಡೆಸಲಾಗುತ್ತದೆ. 

ರಾಜ್ಯದಲ್ಲಿ ಹುಲಿ ಗಣತಿ:
ರಾಜ್ಯದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ (Gundlupete) ತಾಲೂಕಿನ ಬಂಡೀಪುರ (Bandipura) ಸೇರಿದಂತೆ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಧಾಮಗಳಲ್ಲಿ ಜನವರಿ  5ರಿಂದ ಹುಲಿ ಗಣತಿ ಆರಂಭವಾಗಿದೆ. ಮಾಂಸಾಹಾರಿ ಹಾಗೂ ಸಸ್ಯಹಾರಿ ಪ್ರಾಣಿಗಳ ಕುರುಹು ಸಮೀಕ್ಷೆ, ಕ್ಯಾಮೆರಾ ಟ್ರ‍್ಯಾಪ್ ಸಮೀಕ್ಷೆ ಹೀಗೆ ಮೂರು ಹಂತಗಳಲ್ಲಿ ಮಾರ್ಚ್ 26ರವರಗೆ ಹುಲಿ ಗಣತಿ  ನಡೆಯಲಿದೆ. 

ಬಂಡೀಪುರದಲ್ಲಿ ಒಟ್ಟಾರೆ 400 ಕ್ಕೂ ಹೆಚ್ಚು ಸಿಬ್ಬಂದಿ, 500 ಟ್ರ‍್ಯಾಪ್ ಕ್ಯಾಮೆರಾ, 70 ಕ್ಕೂ ಹೆಚ್ಚು ರೇಂಜ್ ಫೈಂಡರ್, 90 ಮೊಬೈಲ್ ಉಪಕರಣ ಹಾಗೂ 50 ಕ್ಕೂ ಹೆಚ್ಚು ಕಾಂಪಾಸ್ ಬಳಿ ಸಮೀಕ್ಷೆ ನಡೆಸಲು ಬಂಡೀಪುರದ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಆ ನಂತರ ವರದಿಯನ್ನು NTCA ಗೆ ಸಲ್ಲಿಸಲಾಗುತ್ತದೆ. ತದನಂತರ ಹುಲಿಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ರಾಜ್ಯದ ಪ್ರತಿಯೊಂದು ಅರಣ್ಯ ವ್ಯಾಪ್ತಿಯ 38 ಅರಣ್ಯ ವಿಭಾಗಗಳ ಗಸ್ತು ಪ್ರದೇಶಗಳಲ್ಲಿ ಗಣತಿ ಮಾಡಲಾಗುವುದು. ಈ ಉದ್ದೇಶಕ್ಕಾಗಿ, ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಐದು ಹುಲಿ ಮೀಸಲು ಪ್ರದೇಶಗಳ ಮುಂಚೂಣಿ ಸಿಬ್ಬಂದಿಗೆ ಪ್ರತ್ಯೇಕವಾಗಿ ಮತ್ತು ಎಲ್ಲಾ 13 ಅರಣ್ಯ ವೃತ್ತಗಳ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ತಲಾ ಮೂವರು ಸದಸ್ಯರನ್ನು ಒಳಗೊಂಡ ತಂಡಗಳು ಜನವರಿ 5 ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಪ್ರತಿದಿನ ಸುಮಾರು 5 ಕಿ.ಮೀ. ಗಸ್ತು ತಿರುಗಲಿದ್ದು, ಹುಲಿಗಳು, ಚಿರತೆಗಳು ಮತ್ತು ಇತರ ಮಾಂಸಾಹಾರಿ ಪ್ರಾಣಿಗಳ ಹಾಗೂ ಆನೆಗಳ ಪಗ್‌ಮಾರ್ಕ್‌ಗಳು, ಸ್ಕ್ಯಾಟ್ ಮತ್ತು ನೇರ ವೀಕ್ಷಣೆಯಂತಹ ಡೇಟಾವನ್ನು ಸಂಗ್ರಹಿಸಲಿವೆ.

ಶುರುವಾಗಿದ್ದು ಹೇಗೆ?
ಪ್ರಪಂಚದಲ್ಲಿ ಮೊದಲ ಬಾರಿಗೆ ಹುಲಿಗಣತಿ ಆರಂಭವಾಗಿದ್ದು, ಭಾರತದಲ್ಲಿ. ಜಾರ್ಖಂಡ್‌ನ ಪಲ್ಮಾವ್ ಹುಲಿ ಸಂರಕ್ಷಿತ ಅರಣ್ಯದಲ್ಲಿ ಮೊದಲ ಬಾರಿಗೆ ಹುಲಿಗಣತಿ ನಡೆಸಲಾಗಿತ್ತು. ಅದಾದ ಬಳಿಕ 1972ರಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ನಂತರ ಅದೇ ವರ್ಷ ರಾಜಸ್ಥಾನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೈಲಾಸ್ ಅಂಕಲ್ ಅವರು ಹುಲಿ ಗಣತಿಯನ್ನು ಆರಂಭಿಸಿದರು. 

ಹುಲಿ ಗಣತಿ ಹೇಗೆ ಮಾಡ್ತಾರೆ?
ಸಮೀಕ್ಷೆಗಾಗಿ ಭಾರತವನ್ನು ಐದು ವಲಯಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಗಂಗಾ ಬಯಲು, ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳು, ಪಶ್ಚಿಮ ಘಟ್ಟಗಳು, ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ಪ್ರವಾಹ ಬಯಲು ಪ್ರದೇಶಗಳು ಮತ್ತು ಸುಂದರಬನಗಳು. ಹುಲಿಗಳ ಹೆಜ್ಜೆ ಗುರುತು ಮಾನವನ ಬೆರಳಚ್ಚುಗಳಂತೆ ಪ್ರತಿ ಹುಲಿಯು ವಿಶಿಷ್ಟವಾದ ಹೆಜ್ಜೆಗುರುತನ್ನು ಹೊಂದಿರುತ್ತದೆ. ಇದರಿಂದಾಗಿ ಅರಣ್ಯ ಅಧಿಕಾರಿಗಳು ಹುಲಿಗಳ ಸಂಖ್ಯೆಗಳನ್ನು ಲೆಕ್ಕ ಹಾಕಲು ಗಾಜು ಮತ್ತು ಕಾಗದವನ್ನು ಬಳಸಿ ಹೆಜ್ಜೆಯನ್ನು ಸಂಗ್ರಹಿಸಿ ಮಾಹಿತಿ ಕಲೆಹಾಕುತ್ತಾರೆ. ಮುಂದಿನ ದಿನಗಳಲ್ಲಿ ಲೆಕ್ಕ ಹಾಕುವಾಗ ಹಳೆಯ ಹೆಜ್ಜೆಗುರುತುಗಳ ಮೂಲಕ ಮೊದಲಿನ ಹುಲಿಗಳನ್ನು ಗುರುತಿಸಬಹುದಾಗಿದೆ.

ಆದರೆ ಹುಲಿಯ ಹೆಜ್ಜೆ ಗುರುತುಗಳು ನಿಂತಿರುವಾಗ, ಓಡುವಾಗ ಮತ್ತು ವಿಶ್ರಾಂತಿ ಪಡೆಯುವಾಗ ಭಿನ್ನವಾಗಿರುತ್ತವೆ. ಇದು ಗಣತಿಗೆ ಸ್ವಲ್ಪ ಮಟ್ಟದ ತೊಡಕಾಗಿದೆ. ಇದೇ ಕಾರಣಕ್ಕೆ ಈಗ ರೇಡಿಯೋ ಕಾಲರ್‌ಗಳನ್ನು ಹುಲಿಗಳಿಗೆ ಅಳವಡಿಸಿ, ಕ್ಯಾಮೆರಾ ಟ್ರ್ಯಾಪ್ ಬಳಸಿ ಹುಲಿಗಳ ಸಂಖ್ಯೆಯನ್ನು ಅಂದಾಜಿಸಲಾಗುತ್ತದೆ. ವಿಶ್ವದ 75% ಹುಲಿಗಳು ಭಾರತದಲ್ಲಿವೆ. ಅಲ್ಲದೇ ಗಣತಿಗೆ ಅತೀ ಹೆಚ್ಚು ಕ್ಯಾಮೆರಾ ಟ್ರ್ಯಾಪಿಂಗ್ ಬಳಸುವ ದೇಶ ನಮ್ಮದಾಗಿದೆ. ಈ ಬಾರಿ ಜಿಪಿಎಸ್ ತಂತ್ರಾಂಶ ಬಳಸಲಾಗುತ್ತಿದೆ. ಇದರೊಂದಿಗೆ ಅರಣ್ಯ ಅಧಿಕಾರಿಗಳ ತಂಡ ಹೆಜ್ಜೆ ಗುರುತು, ಲದ್ದಿ, ಮರಗಳಿಗೆ ಉಜ್ಜಿದ ಗುರುತುಗಳು, ಗರ್ಜನೆ ಬಗ್ಗೆ ಸಂಕ್ಷಿಪ್ತ ಮಾಹಿತಿ ದಾಖಲು ಮಾಡುತ್ತಾರೆ. ಈ ವೇಳೆ ಕಣ್ಣಿಗೆ ಬಿದ್ದ ಪ್ರಾಣಿಗಳ ಸಂಖ್ಯೆ, ನೋಡಿದ ಸಮಯ, ಪ್ರಭೇದ ಮತ್ತು ಗುಂಪಿನ ಪ್ರಮಾಣ ಗುರುತಿಸುತ್ತಾರೆ. ವಾಪಸಾಗುವಾಗ ಸಸ್ಯ ಸಂಪತ್ತು, ಮಾನವ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಎಲ್ಲಾ ರೀತಿಯ ಪರಿಶೀಲನೆಯ ನಂತರ ಹುಲಿಗಳ ಸಂಖ್ಯೆಯನ್ನು ದಾಖಲಿಸಲಾಗುತ್ತದೆ.

2018-19ರ ಹುಲಿ ಗಣತಿಯ ಸಮಯದಲ್ಲಿ ಭಾರತದಲ್ಲಿ ಸುಮಾರು 26,838 ಸ್ಥಳಗಳಲ್ಲಿ 27,000 ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಬಳಸಲಾಗಿತ್ತು. ಇದರಿಂದಾಗಿ 34 ಮಿಲಿಯನ್‌ಗಿಂತಲೂ ಹೆಚ್ಚು ಚಿತ್ರಗಳನ್ನು ತೆಗೆಯಲಾಗಿತ್ತು. ಅದರಲ್ಲಿ 2967 ಹುಲಿಗಳು ಇರುವುದು ಪತ್ತೆಯಾಗಿದ್ದವು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಪ್ರಾಣಿಗಳು ಓಡಾಡುವ ಜಾಗಗಳು, ನದಿಪಾತ್ರಗಳಲ್ಲಿ ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಸ್ಥಾಪಿಸುತ್ತದೆ. ಇದನ್ನೂ ಹುಲಿಯ ಎರಡೂ ಬದಿಗಳನ್ನು ಸೆರೆಹಿಡಿಯಲು ಅನುಕೂಲವಾಗುವಂತೆ ಕ್ಯಾಮೆರಾ ಟ್ರ‍್ಯಾಪ್‌ಗಳನ್ನು ಜೋಡಿಯಾಗಿ ಹೊಂದಿಸಲಾಗುತ್ತದೆ. ಹಿಂದೆ 2005ರವರೆಗೂ ಹೆಜ್ಜೆಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂಲಕ ಅಚ್ಚು ಹಾಕಿಸಲಾಗುತ್ತಿತ್ತು

ಹುಲಿ ಸಂರಕ್ಷಣೆ:
ಮೊದಲಿನಂತೆ ಇಂದಿನ ದಿನಗಳಲ್ಲಿ ಹುಲಿ ಅರಣ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಅದು ಒಂದು ಕಾಡಿನಿಂದ ಇನ್ನೊಂದು ಕಾಡಿಗೆ ಅಥವಾ ಬೇರೆ ಪ್ರದೇಶಕ್ಕೆ ಸಂಚರಿಸುತ್ತಿದೆ. ಭಾರತದಲ್ಲಿ 2006ರಲ್ಲಿ ಹುಲಿಗಳ ಸಂಖ್ಯೆ 1,411 ವಿನಾಶದ ಅಂಚಿನಲ್ಲಿತ್ತು. ಆದರೆ ಇದೀಗ ಸುಮಾರು 3, 682ಕ್ಕೆ ಏರಿಕೆಯಾಗಿದೆ. ವಿಶ್ವದಲ್ಲಿರುವ ಹುಲಿಗಳ ಸಂಖ್ಯೆಯ ಪ್ರಕಾರ ಭಾರತದಲ್ಲಿ ಸುಮಾರು 75ರಷ್ಟು ಹುಲಿಗಳಿವೆ. ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟ ಶ್ರಮದ ಫಲವೇ ಪ್ರಾಜೆಕ್ಟ್ ಟೈಗರ್. 

ಇನ್ನು ಭಾರತೀಯ ವನ್ಯಜೀವಿ ಸಂಸ್ಥೆಯ ಅಂದಾಜು ಮಾಹಿತಿ ಪ್ರಕಾರ, 3,682 ಹುಲಿಗಳ ಪೈಕಿ ಸುಮಾರು ಶೇ.30ರಷ್ಟು ಅಂದರೆ 1, 110ಕ್ಕೂ ಹೆಚ್ಚು ಹುಲಿಗಳು ಹುಲಿ ಮೀಸಲು ಸಂರಕ್ಷಿತ ಪ್ರದೇಶದ ಹೊರಗಿದೆ. ಹೀಗಾಗಿ ಮಾನವ ಹಾಗೂ ಹುಲಿ ಸಂರಕ್ಷಣೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈಗಾಗಲೇ ಮೀಸಲು ಪ್ರದೇಶಗಳಿಂದ ಹೊರಗಿರುವ ಹುಲಿಗಳನ್ನು ಗುರುತಿಸುವಲ್ಲಿ ಕಾರ್ಯವನ್ನು ಆರಂಭಿಸಲಾಗಿದೆ. 

ಸಾಮಾನ್ಯವಾಗಿ ಮೀಸಲು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೆಲ ಹುಲಿಗಳು ಅಲ್ಲಿಂದ ಬೇರೆ ಪ್ರದೇಶಗಳಿಗೆ ತೆರಳಲು ಆರಂಭಿಸುತ್ತದೆ. ವಯಸ್ಕ ಹುಲಿಗಳು ಬೇಟೆಗಾಗಿ ಹತ್ತರಿಂದ ನೂರು ಚದರ ಕಿ.ಮೀವರೆಗೂ ಸಂಚರಿಸುತ್ತವೆ. ಕೆಲ ಅಧ್ಯಯನಗಳ ಪ್ರಕಾರ ಹೆಣ್ಣು ಹುಲಿಗಳು 30 ರಿಂದ 64ಚದರ ಕಿ.ಮೀ ಹಾಗೂ ಹಾಗೂ ಗಂಡು ಹುಲಿಗಳು 170ಚದರ ಕಿ.ಮೀವರೆಗೂ ಸಂಚರಿಸುತ್ತವೆ. ಇದೇ ಉದ್ದೇಶದಿಂದ ಹುಲಿ ಅಭಯಾರಣ್ಯಗಳಿಂದ ಹೊರಗೆ ಇರುವ ಹುಲಿಗಳ ಮೇಲೆ ತೀವ್ರ ನಿಗಾ ಇಡಲು ಭಾರತೀಯ ವನ್ಯಜೀವಿ ಸಂಸ್ಥೆ ಎಲ್ಲಾ ರಾಜ್ಯಗಳಿಗೂ ಸೂಚಿಸಿದೆ.

ಇನ್ನು ಕೆಲ ಪ್ರದೇಶದ ಹುಲಿಗಳು ಕೆಲ ವಸ್ತುಗಳ ಆಕರ್ಷಣೆಯಿಂದಾಗಿ ಬೇರೆ ಪ್ರದೇಶಕ್ಕೆ ಸಂಚರಿಸುತ್ತವೆ. ಉತ್ತರ ಪ್ರದೇಶದ ಪಿಲಿಭಿಟ್ ಎಂಬಲ್ಲಿ ಹುಲಿಗಳ ಓಡಾಟ ಕಂಡಿತು. ಇದರಿಂದಾಗಿ ಅಲ್ಲಿನ ಶಾಲೆಗಳನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಯಿತು. ಬಳಿಕ ತನಿಖೆ ನಡೆಸಿದಾಗ ಅಲ್ಲಿನ ಹುಲಿಗಳು ಹೊಲಗಳಲ್ಲಿ ಬೆಳೆಯುವ ಕಬ್ಬನ್ನು ತಾತ್ಕಾಲಿಕ ನೆಲೆಗಳನ್ನಾಗಿ ಮಾಡಿಕೊಂಡಿತ್ತು. ಜೊತೆಗೆ ಕಬ್ಬನ್ನು ಸೇವಿಸುವ ಕಾಡು ಹಂದಿಗಳ ಆಕರ್ಷಣೆಯಿಂದಾಗಿ ಹುಲಿ ಓಡಾಟ ಆರಂಭವಾಗಿತ್ತು ಎಂದು ತಿಳಿದು ಬಂದಿದೆ.

ಹುಲಿಗಳು ಸಂಚರಿಸುತ್ತಾ ಹುಲಿ ಸಂರಕ್ಷಿತ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುತ್ತದೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಹುಲಿಗಳೇ ಇರಲಿಲ್ಲ. ಆದರೆ ಇದೀಗ ಹುಲಿಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ದೀರ್ಘ ಕಾಲದಿಂದ ಹುಲಿಗಳ ಕೊರತೆ ಎಂದು ಪರಿಗಣಿಸಲಾಗಿದೆ. ಈ ಪ್ರದೇಶದಲ್ಲಿ ಆಶ್ಚರ್ಯಕರ ಬದಲಾವಣೆಯಾಗಿದೆ. 

ದೇಶದಲ್ಲಿ ರಾಜ್ಯಕ್ಕೆ 2ನೇ ಸ್ಥಾನ
ರಾಷ್ಟ್ರವ್ಯಾಪಿ ಹುಲಿ ಗಣತಿ ಪ್ರತಿ 4 ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇದು ಅಂತಹ 6ನೇ ಗಣತಿ. ಹಿಂದಿನ ಗಣತಿಗಳನ್ನು 2006, 2010, 2014, 2018 ಮತ್ತು 2022ರಲ್ಲಿ ನಡೆಸಲಾಗಿತ್ತು. ಕರ್ನಾಟಕದಲ್ಲಿ ಈ ಹಿಂದೆ ಸುಮಾರು 563 ಹುಲಿಗಳಿವೆ ಎಂದು ಅಂದಾಜಿಸಲಾಗಿತ್ತು. ಹುಲಿ ಸಂಖ್ಯೆಯ ವಿಷಯದಲ್ಲಿ ರಾಜ್ಯ ದೇಶದಲ್ಲಿ 2ನೇ ಸ್ಥಾನ ಪಡೆದುಕೊಂಡಿತ್ತು. ಸದ್ಯ ಭಾರತದಲ್ಲಿ ಐವತ್ತಕ್ಕೂ ಹೆಚ್ಚು ಹುಲಿ ಸಂರಕ್ಷಣ ಕೇಂದ್ರಗಳಿವೆ.

2022ರ ಹುಲಿಗಣತಿ ಮಾಹಿತಿ ಪ್ರಕಾರ ಅತಿ ಹೆಚ್ಚು ಹುಲಿಯಿರುವ ರಾಜ್ಯಗಳು:
ಮಧ್ಯಪ್ರದೇಶ: 785
ಕರ್ನಾಟಕ: 563
ಉತ್ತರಾಖಂಡ: 560
ಮಹಾರಾಷ್ಟ್ರ: 444
ಉತ್ತರ ಪ್ರದೇಶ: 205
ತಮಿಳುನಾಡು: 306
ಕೇರಳ: 183
ಅಸ್ಸಾಂ: 182
ರಾಜಸ್ಥಾನ: 88
ಪಶ್ಚಿಮ ಬಂಗಾಳ: 131

Share This Article