ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

Public TV
2 Min Read

ಬೆಂಗಳೂರು: “ಲೋಕಾಯುಕ್ತ (Lokayukta) ಕಚೇರಿ ಬಳಿ ಸಮಸ್ಯೆಯಾಗಿದೆ ಎಂಬ ಮಾಹಿತಿ ತಿಳಿದು ನಾವು ಆ ಜಾಗಕ್ಕೆ ಹೋಗುತ್ತಿದ್ದೆವು. ಕೆಆರ್ ಸರ್ಕಲ್ (K R Circle) ಬಳಿಯ ಅಂಡರ್‌ಪಾಸ್‌ನಲ್ಲಿ (Underpass) ನೀರಿನಲ್ಲಿ ಮುಳುಗುತ್ತಿದ್ದ ಕಾರನ್ನು ನೋಡಿ ಜನ ಕೂಗುತ್ತಿರುವುದು ಕಾಣಿಸಿತು. ನಾನು ಕಾರು ನಿಲ್ಲಿಸಿ ನೋಡಿದಾಗ, ಅರ್ಧ ಅಡಿ ಕಾರ್‌ನ ಟಾಪ್ ಮಾತ್ರ ಕಾಣಿಸುತ್ತಿತ್ತು. ಕೂಡಲೇ ನಾನು ಯೋಚಿಸದೇ ನೀರಿಗೆ ಧುಮುಕಿದೆ” ಇದು ಅಪತ್ಬಾಂದವ ಕೆ.ಆರ್.ಸರ್ಕಲ್‍ನಲ್ಲಿ ಐವರ ಜೀವ ಕಾಪಾಡಿದ ಪಬ್ಲಿಕ್ ಟಿವಿ (Public Tv) ಡ್ರೈವರ್ ವಿಜಯ್ ಕುಮಾರ್ ಮಾತುಗಳು.

ವಿಜಯ್ ಕುಮಾರ್ ಹೇಳಿದ್ದೇನು?
ನಾನು ನೀರಿಗೆ ಧುಮುಕಿ ಕಾರ್ ಸಮೀಪಿಸುತ್ತಿದ್ದಂತೆ ಒಳಗಿದ್ದವರು ಕಾರ್ ಗ್ಲಾಸ್ ತೆಗೆದರು. ತಕ್ಷಣ ಕಾರ್ ಮುಳುಗಿ ಹೋಯ್ತು. ಕಾರಿನ ಮೇಲೆ ಎರಡು ಅಡಿಯಷ್ಟು ನೀರು ಏರಿಕೆ ಆಯ್ತು. ನನಗೆ ಏನು ಮಾಡಲು ತೋಚದೆ ಕಾರ್ ಡೋರ್ ತೆಗೆಯಲು ಯತ್ನಿಸಿದೆ ಆದರೆ ಲಾಕ್ ಆದ ಕಾರಣ ಸಾಧ್ಯವಾಗಲಿಲ್ಲ. ಕಾರಿನ ಗ್ಲಾಸ್ ಮಾತ್ರ ತೆಗೆಯಲು ಸಾಧ್ಯವಾಯ್ತು. ಅದರ ಮೂಲಕವೇ ಐವರನ್ನು ಹೊರಗೆಳೆದು ಕಾರ್‌ನ ಟಾಪ್ ಮೇಲೆ ಕೂರಿಸಿದೆ. ಅಷ್ಟರಲ್ಲಾಗಲೇ ಮಹಿಳೆಯೊಬ್ಬರು ಸಹಾಯಕ್ಕಾಗಿ ತಾವು ತೊಟ್ಟಿದ್ದ ಸೀರೆಯನ್ನು ಕೊಟ್ಟರು. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಐವರನ್ನು ರಕ್ಷಿಸಿದ ಪಬ್ಲಿಕ್ ಟಿವಿ ಚಾಲಕನಿಗೆ ಬಿಬಿಎಂಪಿ ಆಯುಕ್ತರಿಂದ ಸನ್ಮಾನ

ಈ ವೇಳೆಗಾಗಲೇ ನಮ್ಮ ವರದಿಗಾರರಾದ ನಾಗೇಶ್ ಅವರು ರಕ್ಷಣಾ ಕಾರ್ಯ ಮಾಡುವ ವಾಹನವನ್ನು ತಡೆದು ಲೈಫ್ ಜಾಕೆಟ್ ತಂದರು. ಇದರಿಂದ ರಕ್ಷಣಾ ಕಾರ್ಯಕ್ಕೆ ಅನುಕೂಲ ಅಯ್ತು. ನೀರಿನ ಬಣ್ಣ ತುಂಬ ಕಪ್ಪಾಗಿದ್ದ ಕಾರಣ ರಕ್ಷಣಾ ಕಾರ್ಯಕ್ಕೆ ಸ್ವಲ್ಪ ಆಯ್ತು. ನಂತರ ಅಗ್ನಿಶಾಮಕದಳದ ಸಿಬ್ಬಂದಿ ಏಣಿಯ ಮೂಲಕ ಅವರನ್ನೆಲ್ಲ ಸುರಕ್ಷಿತವಾಗಿ ಮೇಲೆ ಕಳುಹಿಸಿದರು. ಕೇವಲ 10 ನಿಮಿಷದಲ್ಲಿ ರಕ್ಷಣಾ ಕಾರ್ಯ ನಡೆದಿದೆ. ಯವತಿಯ ತಲೆ ಹಿಂದಿನ ಸೀಟಿನಲ್ಲಿ ಲಾಕ್ ಆಗಿದ್ದ ಕಾರಣ ರಕ್ಷಣೆ ಕೂಡಲೇ ಮಾಡಲು ಸಾಧ್ಯವಾಗಲಿಲ್ಲ.

ನಿಮಗೆ ಈ ಸಾಹಸಕ್ಕೆ ಧೈರ್ಯ ಎಲ್ಲಿಂದ ಬಂತು ಎಂದರೆ, ಅಕಸ್ಮಾತ್ ನನ್ನ ಕುಟುಂಬವೇ ಅಪಾಯದಲ್ಲಿ ಸಿಕ್ಕಿದ್ದರೆ? ಹಾಗೇ ಹೋಗಲು ಸಾಧ್ಯವಾಗುತ್ತಿತ್ತೇ? ಎನ್ನುತ್ತಾರೆ ವಿಜಯ್.

ಕಾರಿನ ಚಾಲಕ ಸ್ವಲ್ಪ ನೀರಿದೆ ಎಂದು ಕಾರು ಇಳಿಸಿದ್ದಾನೆ. ಆದರೆ ಕಾರು ಇಳಿಯುತ್ತಿದ್ದಂತೆ ಪೂರ್ತಿ ಮುಳುಗಿದೆ. ನೀರು ನಿಂತಾಗ ಸರಿಯಾಗಿ ನೋಡಿಕೊಂಡು ಹೋಗಬೇಕು. ಅನಾವಶ್ಯಕವಾಗಿ ದುಸ್ಸಾಹಸಕ್ಕೆ ಮುಂದಾಗಬಾರದು ಎನ್ನುತ್ತಾರೆ ವಿಜಯ್ ಕುಮಾರ್.

ವಿಜಯ್ ಕುಮಾರ್ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಚಾರಿ ಪೊಲೀಸ್ ಇಲಾಖೆ (Traffic Police) ಹತ್ತು ಸಾವಿರ ರೂ. ಬಹುಮಾನ ಘೋಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP

Share This Article