ಪಬ್ಲಿಕ್‌ ಟಿವಿಗೆ ದ್ವಾದಶಿ ಸಂಭ್ರಮ – ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರಿಗೆ ಅಭಿನಂದನೆ

Public TV
2 Min Read

ಬೆಂಗಳೂರು: ದಿನದ 24 ಗಂಟೆಯೂ ಜಗತ್ತಿನ ಆಗುಹೋಗುಗಳನ್ನು ನಿಮ್ಮ ಮನೆಯಂಗಳಕ್ಕೆ ತಲುಪಿಸುವ ಧಾವಂತದಲ್ಲೇ ಇರುವ ಪಬ್ಲಿಕ್ ಟಿವಿ (PUBLiC TV) ಪರಿವಾರದಲ್ಲಿ ಇಂದು ಹಬ್ಬದ ಸಂಭ್ರಮ. ಸುದ್ದಿಲೋಕದ ಲೆಕ್ಕವಿಲ್ಲದಷ್ಟು ಜಂಜಾಟಗಳ ಮಧ್ಯೆ ಮತ್ತೊಂದು ವರುಷ ಕಳೆದದ್ದು ಗೊತ್ತಾಗಲೇ ಇಲ್ಲ. ಪಬ್ಲಿಕ್ ಟಿವಿಗೆ 12 ವರ್ಷ ತುಂಬಿದ್ದರೆ ಪಬ್ಲಿಕ್ ಮೂವೀಸ್‌ಗೂ ಇಂದು 6ರ ಸಡಗರ. ಈ ಸಡಗರವನ್ನು ಇಂದು ಪಬ್ಲಿಕ್‌ ಟಿವಿ ಕಚೇರಿಯಲ್ಲಿ ರಾಮ ಮಂದಿರ (Ram Mandir) ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರನ್ನು (Kannadigas) ಗೌರವಿಸುವ ಮೂಲಕ ಅಭಿನಂದಿಸಲಾಯಿತು.

 


ರಾಮ ಲಲ್ಲಾನ ಪರ ಹಿಂದೆ ಅಲಹಾಬಾದ್ ಹೈಕೋರ್ಟ್​​ನಲ್ಲಿ ವಾದ ಮಂಡನೆ ಮಾಡಿದ್ದ ಕನ್ನಡಿಗ, ಸುಪ್ರೀಂ ಕೋರ್ಟ್​ ಹಿರಿಯ ವಕೀಲ, ಕೇಂದ್ರ ಸರ್ಕಾರದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎನ್ ಭಟ್, ಬಾಲರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ ಮೈಸೂರಿನ ಅರುಣ್‌ ಯೋಗಿರಾಜ್‌, ರಾಮನ ಮೂರ್ತಿಗೆ ಮೂಲವಾದ ಕೃಷ್ಣ ಶಿಲೆಯನ್ನು ನೀಡಿದ ಜಾಗದ ಮಾಲೀಕ ರಾಮದಾಸ್‌, ರಾಮಮೂರ್ತಿ ನಿರ್ಮಾಣ ಮಾಡಿದ ಗಣೇಶ್‌ ಭಟ್‌, ಅಡಿಪಾಯ ಹಾಕುವುದರಿಂದ ಹಿಡಿದು ಕೆತ್ತನೆವರೆಗೂ ಎಲ್ಲಾ ಕಲ್ಲುಗಳ ಪರೀಕ್ಷೆಯನ್ನು ಮಾಡಿದ ಕೆಜಿಎಫ್‌ ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ (ಎನ್‌ಐಆರ್‌ಎಂ) ಪ್ರಾಂಶುಪಾಲ ಡಾ.ರಾಜನ್‌ ಬಾಬು, ಮುಹೂರ್ತ ನೀಡಿದ ವಿಜಯೇಂದ್ರ ಶರ್ಮಾ, ದೇಗುಲದ ಲೈಟಿಂಗ್ ಹೊಣೆ ಹೊತ್ತ ರಾಜೇಶ್‌ ಶೆಟ್ಟಿ, ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ರಚಿಸಿದ ಗಜಾನನ ಶರ್ಮಾ, ಲೋಗೋ ವಿನ್ಯಾಸಗಾರ ರಮೇಶ್‌ ಜಿ ಅವರನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ, ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌, ಲಹರಿ ಕಂಪನಿಯ ಮುಖ್ಯಸ್ಥ ಮನೋಹರ್‌ ನಾಯ್ಡು ಅವರು ಅಭಿನಂದಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್‌ಆರ್‌ ರಂಗನಾಥ್‌ (HR Ranganath) ಅವರು, 12 ವರ್ಷದ ಹಿಂದೆ ಪಬ್ಲಿಕ್‌ ಟಿವಿ ಆರಂಭಗೊಂಡಾಗ ಉಳಿದುಕೊಳ್ಳುತ್ತಾ ಎಂದು ಪ್ರಶ್ನಿಸಿದಾಗ ಹಲವು ಮಂದಿ ಉಳಿದುಕೊಳ್ಳುತ್ತೆ ಎಂದು ಹೇಳುವ ಸ್ಟೇಜ್‌ನಲ್ಲಿ ಇರಲಿಲ್ಲ. ಆ ದಿನಮಾನಗಳನ್ನು ನೆನಪಿಸಿಕೊಂಡರೆ ಒಂದು ಮಾಯೆ ಥರ ಕಾಣುತ್ತದೆ. ಆ ದಿನಮಾನಗಳಲ್ಲಿ ಒಂದು ಭಯ ಇತ್ತು. ಆದರೆ ಈಗ ಆ ಭಯ ಇಲ್ಲ. ಯಾಕೆಂದರೆ ಕರ್ನಾಟಕ ನಾಡಿನ ಸಮಸ್ತ ಜನತೆ ನಮ್ಮ ಜೊತೆ ಇದ್ದಾರೆ ಎಂದರು.

ನಾವು ಯಾವುದೇ ಬೆದರಿಕೆಗೆ ಬಗ್ಗಿಲ್ಲ, ಬಗ್ಗುವುದೂ ಇಲ್ಲ. ನ್ಯಾಯಪರವಾಗಿಯೇ ನಾವು ಇರುತ್ತೇವೆ. ಗೆಳೆತನಕ್ಕಾಗಿ ತಲೆಬಾಗಿದ್ದೇವೆ. ಆದರೆ ಭಯಕ್ಕೆ, ಬೆದರಿಕೆಗೆ ತಲೆ ಬಾಗಿಲ್ಲ. ಮುಂದೆಯೂ ನಾವು ಯಾರಿಗೂ ಬಗ್ಗುವುದಿಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಪ್ರಹ್ಲಾದ್‌ ಜೋಷಿ, ಪ್ರಚಾರವೇ ಇಲ್ಲದೇ ಸಮಾಜಸೇವೆ ಮಾಡಿದ ಹಲವು ವ್ಯಕ್ತಿಗಳನ್ನು ತಮ್ಮ ಪಬ್ಲಿಕ್‌ ಹೀರೋ ಮೂಲಕ ರಂಗನಾಥ್‌ ಪರಿಚಯಿಸಿದ್ದಾರೆ. ಹಾಜಬ್ಬ ಅವರಿಗೆ ನಮ್ಮ ಸರ್ಕಾರ ಪದ್ಮಶ್ರೀ ನೀಡಿರಬಹುದು. ಆದರೆ ರಂಗನಾಥ್‌ ಅವರಿಂದ ಹಾಜಬ್ಬ ಮೊದಲು ರಾಜ್ಯಕ್ಕೆ ಪರಿಚಯವಾದರು. ಪಬ್ಲಿಕ್‌ ಹೀರೋ, ಬೆಳಕು ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಒಂದು ವೇಳೆ ನಾನು ಪಬ್ಲಿಕ್‌ ಹೀರೋ ನೋಡದೇ ಇದ್ದರೆ ಯೂಟ್ಯೂಬ್‌ ಮೂಲಕ ನಾನು ಕಾರ್ಯಕ್ರಮ ವೀಕ್ಷಣೆ ಮಾಡುತ್ತೇನೆ ಎಂದು ಹೇಳಿದರು.

Share This Article