ಸ್ವಂತ ಖರ್ಚಿನಲ್ಲಿ ಶಾಲೆಗೆ, ಗ್ರಾಮಕ್ಕೆ ಬೆಳಕು ತಂದ್ರು ಶಿಕ್ಷಕ ಮೋಹನ್ ಕುಮಾರ್

Public TV
2 Min Read

ರಾಯಚೂರು: ಏನೂ ಇಲ್ಲದ ಜಾಗದಲ್ಲಿ ಸುಂದರ ಶಾಲೆಯನ್ನ ಕಟ್ಟಿ “ಮಕ್ಕಳ ಕಾಡು” ಅಂತ ಹೆಸರಿಟ್ಟು ಮಾದರಿ ಶಾಲೆಯನ್ನಾಗಿ ಮಾಡುವ ಮೂಲಕ ಶಿಕ್ಷಕ ಮೋಹನ್ ಕುಮಾರ್ ಪಬ್ಲಿಕ್ ಹೀರೋ ಆಗಿದ್ದಾರೆ.

ಜಿಲ್ಲೆಯ ಮಾನ್ವಿ ತಾಲೂಕಿನ ಕೊರವಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಮೋಹನ್ ಕುಮಾರ್ ಸ್ವಂತ ಖರ್ಚಿನಲ್ಲಿ ಶಾಲೆಗೆ ವಿದ್ಯುತ್ ಅಳವಡಿಸಿ ಗ್ರಾಮಕ್ಕೆ ಬೆಳಕಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾದ ಇವರು ಮೂಲತಃ ಮಂಡ್ಯದವರು. ಮೋಹನ್ ಕುಮಾರ್ ಅವಿರತ ಶ್ರಮದಿಂದ ಇಂದು ಈ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಜಿಲ್ಲೆಗೆ ಮಾದರಿಯಾಗಿದೆ. ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತೆ ಸರ್ಕಾರಿ ಶಾಲೆಯನ್ನು ತಿದ್ದಿ ತೀಡಿದ್ದಾರೆ. ಮೋಹನ್ ಕುಮಾರ್ ಅವರ ಕೆಲಸವನ್ನು ಮೆಚ್ಚಿದ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗಾಗಿ ತಮ್ಮ ಕೈಲಾದಷ್ಟು ದಾನ ಮಾಡಲು ಮುಂದಾಗಿದ್ದಾರೆ.

ಶಾಲೆಗೆ ಸ್ವಂತ ಖರ್ಚಿನಲ್ಲಿ ವಿದ್ಯುತ್ ವ್ಯವಸ್ಥೆ ಮಾಡಿರೋ ಮೋಹನ್ ಕುಮಾರ್ ಈಗ ಗ್ರಾಮಕ್ಕೂ ಬೆಳಕಾಗಿದ್ದಾರೆ. ಸತತ ಆರು ಕಡೆ ಬೋರ್‍ವೆಲ್ ಕೊರೆಸಿ ವಿಫಲರಾದರೂ ಛಲ ಬಿಡದೆ, ಶಾಲೆಯಿಂದ ಒಂದು ಕಿ.ಮೀ ದೂರದಲ್ಲಿ ಬೋರ್‍ವೆಲ್ ಕೊರೆಸಿ ಕುಡಿಯುವ ನೀರಿನ ಬವಣೆ ನೀಗಿಸಲು ಶ್ರಮಿಸಿದ್ದಾರೆ. ಶಾಲೆಯ ಆವರಣದಲ್ಲಿ ಮಕ್ಕಳಿಂದಲೇ ಬೆಳೆಸುತ್ತಿರುವ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸಲಾಗ್ತಿದೆ. ಮೊದಲೆಲ್ಲಾ ಖಾಸಗಿ ಶಾಲೆಗಳತ್ತ ಮುಖ ಮಾಡಿದವರು ಈಗ ಸರ್ಕಾರಿ ಶಾಲೆಗೆ ಜೈ ಎನ್ನುತ್ತಿದ್ದಾರೆ. ಈಗ 234 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದು, ಇದಕ್ಕೆ ಶಿಕ್ಷಕ ಮೋಹನ್ ಅವರೇ ಕಾರಣ ಎಂದು ಗ್ರಾಮಸ್ಥರು ಶಿಕ್ಷಕರು ಕೆಲಸವನ್ನು ಶ್ಲಾಘಿಸುತ್ತಿದ್ದಾರೆ.

ಶಾಲೆಯಲ್ಲಿ ಕೇವಲ 5 ಕೊಠಡಿ ಇರುವುದರಿಂದ ದಾನಿಗಳ ನೆರವಿನಿಂದ ಮೋಹನ್ ಕುಮಾರ್ ಸದ್ಯ ಗುಡಿಸಲು ಮಾದರಿಯ ಕೆಲ ಶಾಲಾ ಕೊಠಡಿ ನಿರ್ಮಿಸಿದ್ದಾರೆ. ಜನಪ್ರತಿನಿಧಿಗಳ ಬೆನ್ನುಬಿದ್ದು 300 ಮೀಟರ್ ಕಾಂಪೌಂಡ್, ಗೇಟ್ ವ್ಯವಸ್ಥೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ಇನ್ಫೋಸಿಸ್‍ನವರು ಈ ಶಾಲೆಗೆ 5 ಕಂಪ್ಯೂಟರ್ ನೀಡಿದ್ದಾರೆ, ಸೆಲ್ಕೋಸೋಲಾರ್ ಕಂಪನಿ ಸ್ಮಾರ್ಟ್ ಕ್ಲಾಸ್ ಅಳವಡಿಸಿದ್ದಾರೆ. ಈ ಶಾಲೆಗೆ ಬರುತ್ತಿರುವ ಪ್ರತಿ ಮಕ್ಕಳಿಗೂ ಐಡಿ ಕಾರ್ಡ್ ನೀಡಿ ಶಿಸ್ತುಪಾಲನೆ ಮಾಡಲಾಗುತ್ತಿದೆ.

ಶಾಲೆಯ ಏಳಿಗೆಗಾಗಿ ಹಾಗೂ ಮಕ್ಕಳನ್ನ ಶಾಲೆಗೆ ಕರೆತರಬೇಕು ಅನ್ನೋ ಕಾರಣಕ್ಕೆ ಶಾಲಾ ಅಭಿವೃದ್ದಿಗೆ ಮುಂದಾದ ಶಿಕ್ಷಕ ಮೋಹನ್ ಈಗ ಎಲ್ಲರಿಗೂ ಮಾದರಿಯಾಗಿದ್ದಾರೆ.

https://www.youtube.com/watch?v=Gvhdclsw3GU

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *