ಮಾರಕ ಕಾಯಿಲೆ ಬದುಕು ಕಸಿದರೂ ಕಾರವಾರದ ರಮೇಶ್ ಗೆ ಜೀವನೋತ್ಸಾಹ ತುಂಬ್ತು ಸಾಹಿತ್ಯ ಕೃಷಿ!

Public TV
1 Min Read

ಕಾರವಾರ: ಜೀವನ ಉತ್ಸಾಹವೇ ಹಾಗೆ. ನಮ್ಮನ್ನ ನಾವು ಪ್ರೀತಿಸಿದ್ರೆ ಯಾವುದೂ ಭಾರವಾಗಲ್ಲ. ಇದಕ್ಕೆ ಇವತ್ತಿನ ನಮ್ಮ ಪಬ್ಲಿಕ್ ಹೀರೋನೇ ಸಾಕ್ಷಿ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿನಾಯಕ ಕಾಲೋನಿ ನಿವಾಸಿ ರಮೇಶ್ 17 ವರ್ಷಗಳಿಂದ ನಾಲ್ಕು ಗೋಡೆಯ ಮಧ್ಯೆ ಬದುಕು ಸಾಗಿಸುತ್ತಿದ್ದಾರೆ. 8 ವರ್ಷದ ಹುಡುಗನಾಗಿದ್ದಾಗ ಮೂಳೆ ಸಂಬಂಧಿ ಕಾಯಿಲೆಗೆ ತುತ್ತಾಗಿ ದೇಹದ ಸ್ಥಿಮಿತವನ್ನ ಕಳೆದುಕೊಂಡು ಕುಬ್ಜನಂತಾಗಿದ್ದಾರೆ.

ದೈಹಿಕ ಸಮಸ್ಯೆಯಿಂದ 4ನೇ ತರಗತಿಗೆ ವಿದ್ಯಾಭ್ಯಾಸವನ್ನ ಮೊಟಕುಗೊಳಿಸಿದ್ರೂ ಸಹೋದರಿಯ ಪುಸ್ತಕ ಓದಿ ಅಕ್ಷರಮಾಲೆ ಕಲಿತಿದ್ದಾರೆ. ಓದುವ ಹವ್ಯಾಸ ಬೆಳೆಯುತ್ತಿದ್ದಂತೆ ಬರೆಯಲು ಆರಂಭಿಸಿ, ಕವನ ಬರೆಯಲು ಶುರುಮಾಡಿ ನೋವು ಮರೆಯಲಾರಂಭಿಸಿದ್ರು. ನಂತರ `ಕಾವ್ಯ ಚಿಗುರು’ ಅನ್ನೋ ಕವನ ಸಂಕಲನವನ್ನ ಬಿಡುಗಡೆ ಮಾಡಿದ್ರು. ಕಳೆದ 20 ವರ್ಷಗಳಿಂದ ಭಾವಗೀತೆ, ಮುಕ್ತಚಂದಸ್ಸು, ಗಝಲ್, ಹಾಯ್ಕುಗಳು, ಮಕ್ಕಳ ಕವನ ಸೇರಿದಂತೆ ಇವರ ಏಳು ಕವನ ಸಂಕಲನ ಬಿಡುಗಡೆಯಾಗಿದೆ. ಇವರ 30ಕ್ಕೂ ಹೆಚ್ಚು ಭಾವಗೀತೆಗಳು ಸಂಗೀತ ಸಂಯೋಜನೆಗೊಂಡು ಸಿ.ಡಿ ರೂಪ ಪಡೆದಿವೆ.

ರಾಜ್ಯ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಇವರ ಕವನ ಸಂಕಲನಗಳು ಪ್ರಕಟವಾಗಿವೆ. ಜಿಲ್ಲಾ ಸಾಹಿತ್ಯ ಪರಿಷತ್, ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ. ರಮೇಶ್ ಸಾಹಿತ್ಯ ಕೃಷಿಯಿಂದ ಜಯಂತ್ ಕಾಯ್ಕಿಣಿಯಂಥ ಅನೇಕ ಸಾಹಿತಿಗಳು ಅಭಿಮಾನಿಗಳಾಗಿದ್ದಾರೆ. ಕವನಕ್ಕೆ ಮಾರುಹೋದ ಅಭಿಮಾನಿಗಳು ಮಂಚ, ಲ್ಯಾಪ್‍ಟಾಪ್ ನೀಡಿ ಸಹಕರಿಸಿದ್ದಾರೆ. ಓದಿನ ಉತ್ಕಟ ಆಸೆಯಿಂದಾಗಿ ಕೆಎಸ್‍ಓಯು ಸಹಾಯದಿಂದ ಇದೀಗ ಮನೆಯಿಂದಲೇ ಬಿಎ ಓದುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *