ಸಂಸ್ಕೃತ ಉಳಿಸಲು ಅವಿರತ ಪ್ರಯತ್ನ ಮಾಡ್ತಿದ್ದಾರೆ ವಿಜಯಪುರದ ರಾಮಸಿಂಗ್

Public TV
2 Min Read

– ಬಟ್ಟೆ ಅಂಗಡಿಯಲ್ಲಿ ಉಚಿತ ಬೋಧನೆ

ವಿಜಯಪುರ: ಸಂಸ್ಕೃತ ಭಾಷೆ ನಮ್ಮ ಭಾರತದ ಮೂಲ ಭಾಷೆ ಅಂತಾರೆ. ಆದರೆ ಅದೆಷ್ಟೋ ಜನ ಸಂಸ್ಕೃತ ಅಂದರೆ ಬಲು ದೂರ ಓಡುತ್ತಾರೆ. ಎಲ್ಲರಿಗೂ ಸಂಸ್ಕೃತ ಭಾಷೆ ಮಾತನಾಡಲು ಬರಲ್ಲ. ಅದು ತುಂಬ ಕಷ್ಟ ಅಂತಾರೆ. ಆದರೆ ಪ್ರಪಂಚದಲ್ಲೇ ಅತೀ ಸರಳ ಭಾಷೆ ಅಂದರೆ ಅದು ಸಂಸ್ಕೃತ ಭಾಷೆಯಾಗಿದೆ. ಅದನ್ನ ಯಾರು ಬೇಕಾದರೂ ಅತೀ ಸರಳವಾಗಿ ಮಾತನಾಡಬಹುದು ಎಂಬುದನ್ನ ಪ್ರಾಯೋಗಿಕವಾಗಿ ನಿರೂಪಿಸಿದ್ದಾರೆ. ಅಲ್ಲದೆ ತಮ್ಮ ಅಂಗಡಿಯನ್ನೇ ಪಾಠ ಶಾಲೆಯನ್ನಾಗಿ ಮಾಡಿಕೊಂಡು ಜಾತಿ ಬೇಧವಿಲ್ಲದೆ ಉಚಿತವಾಗಿ ಕಲಿಸುವ ಮೂಲಕ ಸಂಸ್ಕೃತ ಭಾಷೆಯನ್ನು ಬೆಳೆಸಿಕೊಂಡು ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.

ಹೌದು. ಇದು ವಿಜಯಪುರದ ಹುತಾತ್ಮ ಚೌಕ್ ನಲ್ಲಿ ರಾಮಸಿಂಗ್ ರಜಪೂತ್ ಅವರ 3 ಆರ್ ಬಟ್ಟೆ ಅಂಗಡಿ ಇದೆ. ರಜಪೂತ್ ಅವರು ಅಂಗಡಿಯ ಮಾಲೀಕರು, ಜೊತೆಗೆ ಸಂಸ್ಕೃತ ಭಾಷೆ ಕಲಿಸುವ ಶಿಕ್ಷಕರು ಕೂಡ. ಕಳೆದ 15 ವರ್ಷಗಳಿಂದ ಇದೇ ರೀತಿ ಉಚಿತವಾಗಿ ಆಸಕ್ತರಿಗೆ ತಮ್ಮ ಅಂಗಡಿಯಲ್ಲೇ ಬಿಡುವು ಮಾಡಿಕೊಂಡು ಸಂಸ್ಕೃತ ಭಾಷೆಯನ್ನ ಕಲಿಸುತ್ತಿದ್ದಾರೆ. ಸಂಸ್ಕೃತ ಭಾಷೆಯಿಂದ ಮನಃಶುದ್ಧಿ ಜೊತೆಗೆ ಉತ್ತಮ ಆಲೋಚನೆ ಸೇರಿದಂತೆ ಒಳ್ಳೆಯ ಮನೋಭಾವನೆ ಬರುತ್ತದೆ ಎಂದು ರಾಮಸಿಂಗ್ ಹೇಳುತ್ತಾರೆ.

ಇನ್ನೊಂದು ವಿಶೇಷ ಅಂದರೆ ಈ ಅಂಗಡಿಯಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಪರಸ್ಪರ ಪ್ರತಿನಿತ್ಯ ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಮುಸ್ಲಿಂ ಯುವಕರು ಅತೀ ಸರಳವಾಗಿ ಸಂಸ್ಕೃತವನ್ನ ಮಾತನಾಡುತ್ತಾರೆ. ಕೆಲಸದೊಂದಿಗೆ ಮಧ್ಯಾಹ್ನದ ವೇಳೆ ಸಂಸ್ಕೃತ ಪಾಠಗಳಿಗೆ ಹಾಜರಾಗುತ್ತಾರೆ. ಇದರ ಜೊತೆಗೆ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದಲು ಆಸಕ್ತ ವಿದ್ಯಾರ್ಥಿಗಳು ಬಂದು ಸಂಸ್ಕೃತ ಭಾಷೆ ಕಲಿಯುತ್ತಿದ್ದಾರೆ. ಸಂಸ್ಕೃತ ಭಾಷೆ ತುಂಬಾನೇ ಸರಳವಾಗಿದೆ. ಇದನ್ನ ಯಾರು ಬೇಕಾದರೂ ಕಲಿಯಬಹುದು. ಇದರಿಂದ ಒಳ್ಳೆಯದಾಗುತ್ತದೆ. ಅಂಗಡಿಗೆ ಬಂದ ಗ್ರಾಹಕರು, ನಾವು ಸಂಸ್ಕೃತ ಮಾತನಾಡುವುದನ್ನ ನೋಡಿ ಗೌರವ ಕೊಡುತ್ತಾರೆ. ಇದರಿಂದ ಖುಷಿ ಆಗುತ್ತದೆ ಎಂದು ಅಂಗಡಿಯ ಕೆಲಸಗಾರ ಸಮೀರ ಹೇಳಿದ್ದಾರೆ.

ಯಾರಾದರೂ 10 ಜನ ಸೇರಿದರೆ ಸಾಕು ರಾಮ್ ಸಿಂಗ್ ಅವರು ಅಲ್ಲಿಗೆ ಹೋಗಿ ಉಚಿತವಾಗಿ ಸಂಸ್ಕೃತ ಪಾಠಗಳನ್ನ ಮಾಡಿ ಬರುತ್ತಾರೆ. ಒಟ್ಟಿನಲ್ಲಿ ನಮ್ಮ ದೇಶದ ಪುರಾತನ ಹಾಗೂ ಮೂಲ ಭಾಷೆ ಸಂಸ್ಕೃತ ನಶಿಸಲು ಹೊರಟಿದೆ. ಅಂಥದ್ದರಲ್ಲಿ ಉಚಿತವಾಗಿ ಸಂಸ್ಕೃತ ಭಾಷೆ ಕಲಿಸುವುದರ ಜೊತೆಗೆ ಅನ್ಯ ಭಾಷಿಕರಿಗೂ ಸಂಸ್ಕೃತ ಕಲಿಸುತ್ತಿರುವ ರಾಮ್ ಸಿಂಗ್ ಇತರರಿಗೆ ಮಾದರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *