ಹುಬ್ಬಳ್ಳಿಯಲ್ಲಿ ಯುವತಿ ಹತ್ಯೆ ಖಂಡಿಸಿ ಭುಗಿಲೆದ್ದ ಆಕ್ರೋಶ; ವಿದ್ಯಾರ್ಥಿಗಳು, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

Public TV
2 Min Read

– ಜಿಹಾದಿ ಕೊಲೆಗಾರನ ಗಲ್ಲಿಗೇರಿಸುವಂತೆ ಒತ್ತಾಯ
– ರಸ್ತೆ ತಡೆದು, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ

ಹುಬ್ಬಳ್ಳಿ: ಕಾಲೇಜು ಕ್ಯಾಂಪಸ್‌ನಲ್ಲಿ ಕಾರ್ಪೊರೇಟರ್ ಮಗಳ ಭೀಕರ ಹತ್ಯೆ ವಿರುದ್ಧ ಹುಬ್ಬಳ್ಳಿಯಲ್ಲಿ (Hubballi) ಆಕ್ರೋಶ ಭುಗಿಲೆದ್ದಿದೆ. ಯುವತಿ ಕೊಲೆ ಖಂಡಿಸಿ ನೂರಾರು ಸಂಖ್ಯೆಯಲ್ಲಿ ಹಿಂದೂಪರ ಹಾಗೂ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಎಬಿವಿಪಿಯಿಂದ (ABVP) ಮಹಾನಗರ ವ್ಯಾಪ್ತಿಯ ಕಾಲೇಜು ಬಂದ್‌ಗೆ ಕರೆ ನೀಡಲಾಗಿದೆ. ಹಿಂದೂ ಜಾಗರಣ ವೇದಿಕೆ, ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್‌ನಿಂದ ಬಿವಿಬಿ ಕಾಲೇಜು ಎದುರು ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾಕಾರರು ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ನೇಹಾ ಹತ್ಯೆಯಿಂದ ಕಟ್ಟೆಯೊಡೆದ ಆಕ್ರೋಶ; 3 ಕಿಮೀ ಪಾರ್ಥಿವ ಶರೀರ ಮೆರವಣಿಗೆಗೆ ಸಿದ್ಧತೆ – ಕಾಲೇಜು ಬಂದ್‌ಗೆ ಕರೆ!

ಜಿಹಾದಿ ಫಯಾಜ್‌ನನ್ನು ಗಲ್ಲಿಗೇರಿಸಿ ಎಂದು ಪೋಸ್ಟರ್ ಹಿಡಿದು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಪ್ರತಿಭಟನೆಯಿಂದಾಗಿ ಬಿವಿಬಿ ಕಾಲೇಜು ರಸ್ತೆ ಬಂದ್ ಆಗಿದೆ. ವಿದ್ಯಾರ್ಥಿಗಳು ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತರು ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಜಸ್ಟಿಸ್ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾಕಾರರು ಹತ್ಯೆಯಾದ ಯುವತಿ ನೇಹಾಳ ದೊಡ್ಡ ಕಟೌಟ್ ಮಾಡಿ ತಂದಿದ್ದಾರೆ. ಕಟೌಟ್ ಮೇಲೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆಯಲಾಗಿದೆ. ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಫಯಾಜ್ ಫೋಟೊ ಮೇಲೆ ಜಿಹಾದಿ ಎಂದು ಬರೆಯಲಾಗಿದೆ. ಫಯಾಜ್ ಫೋಟೊಗೆ ಚಪ್ಪಲಿಯಿಂದ ಹೊಡೆದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನೇಹಾ ಹತ್ಯೆಗೆ ಭುಗಿಲೆದ್ದ ಆಕ್ರೋಶ- ಪಾತಕಿ ಎನ್‍ಕೌಂಟರ್‌ಗೆ ಹಿಂದೂಪರ ಸಂಘಟನೆಗಳ ಆಗ್ರಹ

ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಬಿವಿಬಿ ಕಾಲೇಜ್‌ನಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. 3 ಸಿಪಿಐ, 5 ಪಿಎಸ್‌ಐ ಹಾಗೂ 50 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಆಗಮಿಸಿ ವಿದ್ಯಾರ್ಥಿ ಸಂಘಟನೆ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದಾರೆ.

Share This Article