ಸುಪಾರಿ ಕೊಟ್ಟು ಮೈದುನನಿಂದ ಅತ್ತಿಗೆಯ ಭೀಕರ ಕೊಲೆ

Public TV
2 Min Read

ಚಿಕ್ಕಬಳ್ಳಾಪುರ: ಆಸ್ತಿಗಾಗಿ ಸುಪಾರಿ ಕೊಟ್ಟ ಅತ್ತಿಗೆಯನ್ನೇ ಕೊಲೆ ಮಾಡಿಸಿದ ಕಿರಾತಕ ಮೈದುನ ಹಾಗೂ ಕೊಲೆ ಮಾಡಿದ ಕೊಲೆಗಾರನನ್ನ ಬಂಧಿಸುವಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಗ್ಗಲಹಳ್ಳಿ ಗ್ರಾಮದ ರತ್ಮಮ್ಮ ಕೊಲೆಯಾಗಿದ್ದ ಮಹಿಳೆ. ಡಿಸೆಂಬರ್ 22 ರಂದು ರತ್ಮಮ್ಮಳ ಬಾಯಿಗೆ ಬಟ್ಟೆ ತುರುಕಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆದರೆ ಈ ಘಟನೆ ಡಿಸೆಂಬರ್ 24 ರಂದು ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದರು. ಇದೀಗ ಮೃತಳ ಮೈದುನ ಅದೇ ಗ್ರಾಮದ ನಾಗೇಶ್ ಹಾಗೂ ಸುಪಾರಿ ಪಡೆದು ರತ್ಮಮ್ಮಳನ್ನ ಕೊಲೆ ಮಾಡಿದ್ದ ಅದೇ ಗ್ರಾಮದ ಲಕ್ಷ್ಮೀಶನನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಬಾಯಿಗೆ ಬಟ್ಟೆ ತುರುಕಿ ಒಂಟಿ ಮಹಿಳೆಯ ಭೀಕರ ಕೊಲೆ

ಏನಿದು ಪ್ರಕರಣ?
ಪತಿ ಮೃತಪಟ್ಟ ನಂತರ ಒಂಟಿಯಾಗಿದ್ದ ರತ್ಮಮ್ಮ ಹಾಗೂ ಆರೋಪಿ ನಾಗೇಶ್ ನಡುವೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಇದೇ ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ ಅತ್ತಿಗೆ ಮೇಲೆ ದ್ವೇಷ ಸಾಧಿಸುತ್ತಿದ್ದ ಮೈದುನ ನಾಗೇಶ್, ಗ್ರಾಮದ ಡೈರಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಶನಿಗೆ 2 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು 5,000 ಹಣ ಮುಂಗಡವಾಗಿ ನೀಡಿದ್ದನು.

ಇದೇ ಗ್ರಾಮದವನಾಗಿದ್ದ ಲಕ್ಷ್ಮೀಶ ಆಗಾಗ ಮೃತಳ ಮನೆಗೆ ಹೋಗಿ ಬರುತ್ತಿದ್ದನು. ಒಂದು ದಿನ ರತ್ಮಮ್ಮಳನ್ನ ಮಾತನಾಡಿಸುವ ನೆಪದಲ್ಲಿ ಮನೆಗೆ ಹೋಗಿ ಆಕೆಯ ಮೇಲೆ ಮೊದಲು ಮಚ್ಚನಿಂದ ಲಕ್ಷ್ಮೀಶ ಅಟ್ಯಾಕ್ ಮಾಡಿದ್ದಾನೆ. ತದನಂತರ ಬಾಯಿಗೆ ಬಟ್ಟೆ ತುರುಕಿ ಮೃತಪಟ್ಟ ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇನ್ನೂ ಕೊಲೆ ಮಾಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಯಾರಿಗೂ ಅನುಮಾನ ಬಾರದ ಹಾಗೆ ಊರಲ್ಲೇ ಓಡಾಡಿಕೊಂಡು ಇದ್ದನು.

ಪೊಲೀಸರು ತನಿಖೆ ಮಾಡುತ್ತಿದ್ದ ವೇಳೆ ಅನುಮಾನಗೊಂಡು ಆರೋಪಿ ಮೈದಾನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಸತ್ಯ ಬಯಲಾಗಿದೆ. ಸದ್ಯಕ್ಕೆ ಪೊಲೀಸರು ಮೈದುನ ನಾಗೇಶ್ ಹಾಗೂ ಲಕ್ಷ್ಮೀಶನನ್ನ ಬಂಧಿಸಿದ್ದಾರೆ. ಕೊಲೆಗಡುಕ ಲಕ್ಷ್ಮೀಶ್ ಮೃತಳ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದು, ಅದನ್ನ ಚಿಕ್ಕಬಳ್ಳಾಪುರ ನಗರದ ಮುತ್ತೂಟ್ ಫೈನಾನ್ಸ್ ನಲ್ಲಿ ಆಡವಿಟ್ಟಿದ್ದ. ಈಗ ಅದನ್ನ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *