ಬೆಂಗಳೂರು: ಆಸ್ತಿ ವ್ಯಾಜ್ಯ ವಿಚಾರವಾಗಿ ರೌಡಿಶೀಟರ್ ಮೇಲೆ ಲಾಂಗು-ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದಂತಹ ಘಟನೆ ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಭಾಷ್ ಗಾಯಗೊಂಡಿರುವ ರೌಡಿಶೀಟರ್ ಆಗಿದ್ದು, ಈತ ಈ ಹಿಂದೆ ಆಸ್ತಿ ವ್ಯಾಜ್ಯದ ಸಂಬಂಧ ತನ್ನ ಚಿಕ್ಕಪ್ಪನ ಮಗ ಅಪ್ಪು ಎಂಬಾತನಿಗೆ ಮಾರಣಾಂತಿಕವಾಗಿ ಹಲ್ಲೆಮಾಡಿದ್ದನು. ಈ ವೇಳೆ ಅಪ್ಪು ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾಗಿದ್ದನು.
ಹಲ್ಲೆಯ ಬಳಿಕ ಜೈಲು ಸೇರಿದ್ದ ಸುಭಾಷ್, ಇತ್ತೀಚೆಗೆ ಜಾಮೀನಿನ ಮೂಲಕ ಬಿಡುಗಡೆಗೊಂಡು ಹೂವಿನ ವ್ಯಾಪಾರ ಆರಂಭಿಸಿದ್ದನು. ಆದರೆ ಅಪ್ಪು ತನ್ನ ಮೇಲೆ ಹಲ್ಲೆ ಮಾಡಿದ್ದ ಸುಭಾಷ್ ನನ್ನು ಕೊಲೆಮಾಡಲು ಸ್ಕೆಚ್ ಹಾಕಿದ್ದನು. ಅದರಂತೆ ಅಪ್ಪು ಹಾಗೂ ಆತನ ಗ್ಯಾಂಗ್ ಗರುಡಾ ಮಾಲ್ ಬಳಿಯಿರುವ ಫುಟ್ ಬಾಲ್ ಸ್ಟೇಡಿಯಂ ಬಳಿ ನಡೆದು ಹೋಗ್ತಿದ್ದ ಸುಭಾಷ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಘಟನೆಯಿಂದ ಗಾಯಗೊಂಡಿರುವ ಸುಭಾಷ್ ನನ್ನು ನಗರದ ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಸಂಬಂಧ ಪ್ರಕರಣ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಆರೋಪಿ ಅಪ್ಪು ಹಾಗೂ ಆತನ ಸಹಚರರಿಗಾಗಿ ಬಲೆಬೀಸಿದ್ದಾರೆ.