ಮೇ 23ರಂದು ಮಂಡ್ಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ!

Public TV
2 Min Read

ಮಂಡ್ಯ: ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನಲೆಯಲ್ಲಿ ಮೇ 23ರಂದು ಮಂಡ್ಯ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ನಿಷೇಧಾಜ್ಞೆ ಜೊತೆಗೆ ಮದ್ಯ ಮಾರಾಟ ನಿಷೇಧ ಇರುತ್ತದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಫಲಿತಾಂಶ ಸ್ಥಳದಲ್ಲಿ ವಿಜಯೋತ್ಸವ ಆಚರಿಸುವಂತಿಲ್ಲ. ಜೊತೆಗೆ ಗೆದ್ದವರ ಬೆಂಬಲಿಗರು ಸೋತ ಅಭ್ಯರ್ಥಿಯ ಮನೆ ಮುಂದೆ ಪಟಾಕಿ ಸಿಡಿಸುವಂತಿಲ್ಲ ಎಂದು ತಿಳಿಸಿದರು.

ವಿಜೇತ ಅಭ್ಯರ್ಥಿಯ ಬೆಂಬಲಿಗರು ಸೋತ ಅಭ್ಯರ್ಥಿಗೆ ತೊಂದರೆ ಕೊಡುವ ರೀತಿಯಲ್ಲಿ ವಿಜಯೋತ್ಸವ ಆಚರಿಸಿದರೆ ಕಠಿಣ ಕ್ರಮಕೈಗೊಳ್ಳುತ್ತೇವೆ. 113 ಟೇಬಲ್‍ನಲ್ಲಿ ಮತ ಎಣಿಕಾ ಪ್ರಕ್ರಿಯೆ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಿದೆ. ಪ್ರತಿ ಟೇಬಲ್‍ಗೂ ಅಭ್ಯರ್ಥಿಗಳ ಒಬ್ಬೊಬ್ಬ ಏಜೆಂಟ್ ಬರಲು ಅವಕಾಶ ಇರುತ್ತದೆ. ಚುನಾವಣಾ ಸಿಬ್ಬಂದಿ ಹಾಗೂ ಮಾಧ್ಯಮಗಳನ್ನು ಹೊರತುಪಡಿಸಿ ಉಳಿದವರಿಗೆ ಮೊಬೈಲ್ ನಿಷೇಧ ಮಾಡಲಾಗಿದೆ. ಸಿಆರ್ ಪಿ ಎಫ್, ಬಿಎಸ್‍ಎಫ್, ಸೆಂಟ್ರಲ್ ಪ್ಯಾರಾ ಮಿಲಿಟರಿ ಪೋರ್ಸ್ ಹಾಗೂ ಸ್ಥಳೀಯ ಪೊಲೀಸರನ್ನು ಭದ್ರತೆಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಫಲಿತಾಂಶದ ಸಮಯದಲ್ಲಿ ಪರಾಭವಗೊಂಡ ಹಾಗೂ ಅವರ ಬೆಂಬಲಿಗರ ನಡುವೆ ಸಂಘರ್ಷ ಉಂಟಾಗಿ ಗ್ರಾಮಗಳಲ್ಲಿ ಹಲ್ಲೆ ನಡೆದು ಒಬ್ಬರು ಮತ್ತೊಬ್ಬರ ಮನೆಯ ಮೇಲೆ ಕಲ್ಲು ಹೊಡೆಯುವುದು, ಬೆಂಕಿ ಹಚ್ಚಿ ದುಷ್ಕøತ್ಯಗಳನ್ನ ಮಾಡುವ ಸಾಧ್ಯತೆವಿದೆ. ಇದರಿಂದಾಗಿ ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಮೇ 23ರಿಂದ ಬೆಳಗ್ಗೆ 6 ಗಂಟೆಯಿಂದ ಮೇ 24 ಮಧ್ಯರಾತ್ರಿವರೆಗೆ ಮಂಡ್ಯ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಮೇ ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಬೆಂಗಳೂರು ಕಮೀಷನರೇಟ್‍ನಲ್ಲಿ ನಿಷೇಧಾಜ್ಞೆ ಜಾರಿ ಮಾಡುವಂತೆ ಆದೇಶ ಹೊರಡಿಸಲಾಗಿದೆ.

ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಆದ್ದರಿಂದ ಫಲಿತಾಂಶದ ದಿನ ಗಲಾಟೆ ಆಗುವ ಸಾಧ್ಯತೆಯಿದೆ ಎಂಬ ಮಾಹಿತಿ ಹಿನ್ನೆಲೆ ಬೆಂಗಳೂರು ಕಮೀಷನರೇಟ್‍ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೆ 23 ರಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *