ಕೋಲ್ಕತ್ತಾ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ನ (Trinamool Congress) ಮಾಜಿ ಸಂಸದ ಮತ್ತು ಉದ್ಯಮಿ ಕನ್ವರ್ ದೀಪ್ ಸಿಂಗ್ (Kanwar Deep Singh) ಅವರ ಪುತ್ರನ 127 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿದೆ.
ಪಂಚಕುಲದಲ್ಲಿರುವ ಆಲ್ಕೆಮಿಸ್ಟ್ ಆಸ್ಪತ್ರೆ (40.94%) ಮತ್ತು ಓಜಾಸ್ ಆಸ್ಪತ್ರೆ (37.24%) ಷೇರನ್ನು ವಶಪಡಿಸಿಕೊಳ್ಳಲಾಗಿದೆ. 2002 ರ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಷೇರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಇಂದು ಜಾಮೀನು ಭವಿಷ್ಯ; ಕೋರ್ಟ್ ತೀರ್ಪಿಗೂ ಮುನ್ನವೇ ರಾಯರ ಮೊರೆ ಹೋದ ಪವಿತ್ರಾಗೌಡ
ಕೋಲ್ಕತ್ತಾ (Kolkata) ಪೊಲೀಸರು ಮತ್ತು ಕೇಂದ್ರ ತನಿಖಾ ದಳ ಹಾಗೂ ಲಕ್ನೋದ ಭ್ರಷ್ಟಾಚಾರ ನಿಗ್ರಹ ದಳ ಸಲ್ಲಿಸಿದ ಎಫ್‌ಐಆರ್ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಐಪಿಸಿ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು 420 (ವಂಚನೆ) ಅಡಿಯಲ್ಲಿ ಮೆಸ್ಸರ್ಸ್ ಆಲ್ಕೆಮಿಸ್ಟ್ ಟೌನ್‌ಶಿಪ್ ಪ್ರೈವೇಟ್ ಲಿಮಿಟೆಡ್, ಮೆಸ್ಸರ್ಸ್ ಆಲ್ಕೆಮಿಸ್ಟ್ ಇನ್ಫ್ರಾ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್ ಮತ್ತು ಕನ್ವರ್ ದೀಪ್ ಸಿಂಗ್ ಸೇರಿದಂತೆ ಅವರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಅಕ್ರಮ ಸಾಮೂಹಿಕ ಹೂಡಿಕೆ ಮೂಲಕ ಸಾರ್ವಜನಿಕ ಹಣವನ್ನು ವಂಚಿಸುವ ಬೃಹತ್ ಕ್ರಿಮಿನಲ್ ಪಿತೂರಿಯಂತೆ ಕಾಣುತ್ತದೆ ಎಂದು ಇ.ಡಿ ಆರೋಪಿಸಿತ್ತು.
ಕಂಪನಿಗಳು ಹೆಚ್ಚಿನ ಲಾಭ, ಪ್ಲಾಟ್‌ಗಳು ಮತ್ತು ವಿಲ್ಲಾಗಳಂತಹ ವಸತಿ ಘಟಕಗಳ ಹಂಚಿಕೆಯ ಸುಳ್ಳು ಭರವಸೆಗಳೊಂದಿಗೆ ಹೂಡಿಕೆದಾರರನ್ನು ಆಕರ್ಷಿಸಿವೆ. ಅಲ್ಲದೇ 1,848 ಕೋಟಿ ರೂ. ಹಣವನ್ನು ಸಾರ್ವಜನಿಕರಿಂದ ಅಕ್ರಮವಾಗಿ ಸಂಗ್ರಹಿಸಲಾಗಿದೆ. ನಂತರ ಆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಈ ಹಣವನ್ನು ಕಾನೂನುಬದ್ಧ ಹೂಡಿಕೆ ಎಂದು ಬಿಂಬಿಸಲು ಎರಡು ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ ಎಂದು ಇ.ಡಿ ಆರೋಪ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು 2021ರ ಜನವರಿಯಲ್ಲಿ ಕನ್ವರ್ ದೀಪ್ ಸಿಂಗ್ ಅವರನ್ನು ಬಂಧಿಸಿತ್ತು. ಈವರೆಗೆ, ಪ್ರಕರಣಕ್ಕೆ ಸಂಬಂಧಿಸಿದ 238.42 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಹೆಚ್ಚುವರಿ ಆಸ್ತಿಗಳನ್ನು ಪತ್ತೆಹಚ್ಚಲು ಮತ್ತು ಈ ದೊಡ್ಡ ಪ್ರಮಾಣದ ಹಣಕಾಸು ವಂಚನೆಯಲ್ಲಿ ಭಾಗಿಯಾಗಿರುವ ಸಂಪೂರ್ಣ ಹಣದ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಇನ್‌ಸ್ಟಾದಲ್ಲಿ ಯುವತಿಯರ ಅಸಭ್ಯ ಫೋಟೋ, ವಿಡಿಯೋ ಪೋಸ್ಟ್ – ಕಾಮುಕ ಅರೆಸ್ಟ್