ಯಾತ್ರಾರ್ಥಿಯ ಪಾದ ಮಸಾಜ್ ಮಾಡಿದ ಎಸ್‍ಪಿ- ವಿಡಿಯೋ ವೈರಲ್

Public TV
2 Min Read

ಲಕ್ನೋ: ಪೊಲೀಸ್ ಅಧಿಕಾರಿಯೊಬ್ಬರು ಹರಿದ್ವಾರಕ್ಕೆ ಹೊರಟಿದ್ದ ಯಾತ್ರಾರ್ಥಿಯ ಪಾದವನ್ನು ಮಸಾಜ್ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಉತ್ತರಪ್ರದೇಶದ ಶಾಮ್ಲಿಯ ಎಸ್‍ಪಿ ಅಜಯ್ ಕುಮಾರ್ ಪಾಂಡೆ ಯಾತ್ರಾರ್ಥಿಯ ಪಾದಕ್ಕೆ ಮಸಾಜ್ ಮಾಡಿದ್ದಾರೆ. ಹರಿದ್ವಾರಕ್ಕೆ ಉತ್ತರಪ್ರದೇಶದ ಮೂಲಕ ಹೋಗುವ ಯಾತ್ರಾರ್ಥಿಗಳಿಗೆ ಡಯಾಗ್ನಾಸ್ಟಿಕ್ ಕ್ಯಾಂಪ್ ಏರ್ಪಡಿಸುವುದಾಗಿ ಉತ್ತರಪ್ರದೇಶದ ಸೂಪರಿಂಟೆಂಡ್ ಆಫ್ ಪೊಲೀಸ್ ಘೋಷಿಸಿಲಾಗಿತ್ತು. ಅದರಂತೆ ಕ್ಯಾಂಪ್ ಆರಂಭವಾಗಿದೆ. ಈ ವೇಳೆ ಯಾತ್ರಾರ್ಥಿಯೊಬ್ಬನ ಕಾಲಿಗೆ ಯೂನಿಫಾರಂ ಧರಿಸಿಕೊಂಡೇ ಎಸ್‍ಪಿ ಅಜಯ್ ಕುಮಾರ್ ಪಾಂಡೆ ಅವರು ಮಸಾಜ್ ಮಾಡುತ್ತಿರುವ ವಿಡಿಯೋ ಸೆರೆ ಹಿಡಿಯಲಾಗಿತ್ತು. ಈ ವಿಡಿಯೋ ಸದ್ಯ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

ಶಾಮ್ಲಿ ಪೊಲೀಸ್ ಅಧಿಕೃತ ಟ್ವಿಟ್ಟರ್ ಖಾತೆಯಿಂದಲೇ ಈ ವಿಡಿಯೋ ಪೋಸ್ಟ್ ಆಗಿದೆ. ಸುರಕ್ಷತೆಯ ಜೊತೆಗೆ ಸೇವೆಯನ್ನೂ ಮಾಡುತ್ತೇವೆ ಎಂದು ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ವಿಡಿಯೋ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿದೆ.

ಯೂನಿಫಾರಂ ಧರಿಸಿಕೊಂಡು ಬೇರೆಯವರ ಕಾಲು ಒತ್ತುತ್ತಿರುವುದು ಸರಿಯಲ್ಲ ಎಂದು ಹಲವರು ಎಸ್‍ಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಪ್ರಚಾರಕ್ಕಾಗಿ ಹೀಗೆಲ್ಲ ಮಾಡಲಾಗುತ್ತಿದೆ, ಇದು ನಿಜವಾದ ಕಾಳಜಿಯಲ್ಲ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದಂತೆ ಸ್ವತಃ ಎಸ್‍ಪಿ ಅಜಯ್ ಕುಮಾರ್ ಪಾಂಡೆ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ಅಹಂಕಾರವಿಲ್ಲದೆ, ನಿಸ್ವಾರ್ಥದಿಂದ ಆ ಯುವ ಯಾತ್ರಾರ್ಥಿಯ ಪಾದವನ್ನು ಒತ್ತಿದ್ದೆ. ಆತ ಬಹಳ ಸುಸ್ತಾಗಿದ್ದ. ಆದ್ದರಿಂದ ಯುವಕನ ಕಾಲಿಗೆ ಮಸಾಜ್ ಮಾಡಿದೆ ಎಂದರು.

ನಾವು ಸಾರ್ವಜನಿಕ ವಲಯದಲ್ಲಿ ಜನರೊಂದಿಗೆ ಬೆರೆತು ಕೆಲಸ ಮಾಡಬೇಕಾಗುತ್ತದೆ. 200-300 ಕಿ.ಮೀ. ದೂರ ಹಸಿವು ಮತ್ತು ಬಾಯಾರಿಕೆಯಿಂದ ಯಾತ್ರಾರ್ಥಿಗಳು ನಡೆಯಬೇಕೆಂದರೆ ಅದು ಸುಲಭದ ಕಾರ್ಯವಲ್ಲ. ಆದ್ದರಿಂದ ನಾವು ಅವರಿಗೆ ಅನುಕೂಲವಾಗಲೆಂದು ಮೆಡಿಕಲ್ ಕ್ಯಾಂಪ್ ಮಾಡಿದ್ದೆವು ಎಂದು ತಿಳಿಸಿದರು.

ಅಜಯ್ ಕುಮಾರ್ ಅವರ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ವಾರ್ಷಿಕ ಹರಿದ್ವಾರ ಯಾತ್ರೆಗೆ ಬರುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲೆಂದು ಜುಲೈ 30ರವರೆಗೆ ದೆಹಲಿ- ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ಅಲ್ಲದೆ ಪಶ್ಚಿಮ ಉತ್ತರ ಪ್ರದೇಶದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಶಿವನ ಭಕ್ತಾಧಿಗಳು ವಾರ್ಷಿಕ ಯಾತ್ರೆಯನ್ನು ಕೈಗೊಳ್ಳುವುದನ್ನ ಕನ್ವಾರ್ ಯಾತ್ರೆ ಎನ್ನುತ್ತಾರೆ. ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳಿಗೆ ಕನ್ವಾರಿಯಸ್ ಎನ್ನುತ್ತಾರೆ. ಈ ಯಾತ್ರಾರ್ಥಿಗಳು ಹರಿದ್ವಾರ, ಉತ್ತರಖಂಡ್ ಗೋಮುಖ ಮತ್ತು ಗಂಗೋತ್ರಿ, ಬಿಹಾರದ ಸುಲ್ತಾನ್‍ಗಂಜ್‍ಗೆ ಭೇಟಿ ನೀಡಿ ಪವಿತ್ರ ಗಂಗಾ ನದಿಯ ಜಲವನ್ನು ತರುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *