ನವದೆಹಲಿ: Boycott Turkey ಅಭಿಯಾನ ಯಶಸ್ವಿಯಾಗಿದ್ದು ಟರ್ಕಿಗೆ (Turkey) ಭೇಟಿ ನೀಡುವ ಭಾರತೀಯ ಪ್ರವಾಸಿಗರ (Indian Tourist) ಸಂಖ್ಯೆ ಭಾರೀ ಇಳಿಕೆಯಾಗಿದೆ.
ಹೌದು. ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಪಾಕಿಸ್ತಾನವನ್ನು (Pakistan) ಬೆಂಬಲಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಟರ್ಕಿ ಅಭಿಯಾನವನ್ನು ಆರಂಭಿಸಲಾಗಿದೆ. ಪರಿಣಾಮ ಜೂನ್ ತಿಂಗಳಿನಲ್ಲಿ ಟರ್ಕಿಗೆ ತೆರಳುವ ಭಾರತೀಯ ಸಂಖ್ಯೆ 37% ಕಡಿಮೆಯಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಟರ್ಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಭೇಟಿ ನೀಡುತ್ತಾರೆ. ಟರ್ಕಿಯ ಅಧಿಕೃತ ಪ್ರವಾಸೋದ್ಯಮ ಅಂಕಿಅಂಶಗಳ ಪ್ರಕಾರ, ಜೂನ್‌ನಲ್ಲಿ ಕೇವಲ 24,250 ಭಾರತೀಯರು ಭೇಟಿ ನೀಡಿದ್ದಾರೆ. ಕಳೆದ ವರ್ಷ 38,307 ಭಾರತೀಯರು ಭೇಟಿ ನೀಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 37% ಇಳಿಕೆಯಾಗಿದೆ. ಇದನ್ನೂ ಓದಿ: Boycott Turkey| ಟರ್ಕಿಗೆ ದೊಡ್ಡ ಹೊಡೆತ – ಸೆಲೆಬಿ ಲೈಸೆನ್ಸ್ ರದ್ದು!
ಮೇ ತಿಂಗಳಿನಲ್ಲೂ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. ಈ ಮೇನಲ್ಲಿ 31,659 ಭಾರತೀಯ ಪ್ರವಾಸಿಗರು ಟರ್ಕಿಗೆ ಹೋಗಿದ್ದರೆ ಕಳೆದ ಮೇನಲ್ಲಿ 41,554 ಭಾರತೀಯರು ತೆರಳಿದ್ದರು.
ಆಪರೇಷನ್ ಸಿಂಧೂರದ ಕಾರ್ಯಾಚರಣೆ ವೇಳೆ ಟರ್ಕಿ ನಿರ್ಮಿತ ಡ್ರೋನ್‌ಗಳನ್ನು ಪಾಕ್ ಬಳಸಿದ ವಿಚಾರ ಬೆಳಕಿಗೆ ಬಂದ ನಂತರ Boycott Turkey ಅಭಿಯಾನ ತೀವ್ರಗೊಂಡಿತ್ತು. ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ, ಟರ್ಕಿ, ಅಜರ್‌ಬೈಜಾನ್ ಮಾತ್ರ ಪಾಕ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ಈ ಮೂರು ದೇಶಗಳು ಮಾತ್ರ ಪಾಕಿಸ್ತಾನದ ಪರವಾಗಿ ಹೇಳಿಕೆಗಳನ್ನು ನೀಡಿದ್ದವು. ಇದನ್ನೂ ಓದಿ: ಪಾಕ್‌ಗೆ ಡ್ರೋನ್ ಸಪ್ಲೈ ಮಾಡಿದ ಟರ್ಕಿಗೆ ಕಂಟಕ – ಟರ್ಕಿ ಮಾರ್ಬಲ್‌ಗೆ ಬೆಂಗಳೂರಲ್ಲಿ ಬಹಿಷ್ಕಾರ
ಮೇಕ್‌ಮೈಟ್ರಿಪ್, ಈಸ್‌ಮೈಟ್ರಿಪ್ ಮತ್ತು ಕ್ಲಿಯರ್‌ಟ್ರಿಪ್‌ನಂತಹ ಪ್ರಯಾಣ ಪೋರ್ಟಲ್‌ಗಳು ಟರ್ಕಿ ಪ್ರವಾಸ ಪ್ಯಾಕೇಜ್‌ಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳಿವೆ.
ಸಾಮಾನ್ಯವಾಗಿ ಏಪ್ರಿಲ್, ಮೇ, ಜೂನ್ ತಿಂಗಳಿನಲ್ಲಿ ಮಕ್ಕಳಿಗೆ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯ ಸಂಖ್ಯೆಯ ಭಾರತೀಯರು ಈ ಅವಧಿಯಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ.
ಭಾರತೀಯ ಪ್ರವಾಸಿಗರು ಸಾಮಾನ್ಯವಾಗಿ ತಮ್ಮ ರಜೆಗಳನ್ನು ಬಹಳ ಮುಂಚಿತವಾಗಿ ಕಾಯ್ದಿರಿಸುತ್ತಾರೆ, ಆದ್ದರಿಂದ ಟರ್ಕಿ ಪ್ರವಾಸೋದ್ಯಮದ ಮೇಲೆ ಆಗಿರುವ ನಿಜವಾದ ಪರಿಣಾಮ ಜೂನ್ ನಂತರ ತಿಂಗಳಿನಲ್ಲಿ ತಿಳಿಯಲಿದೆ.
ಟರ್ಕಿಯ ಜಿಡಿಪಿಗೆ ಪ್ರವಾಸೋದ್ಯಮ 12% ಕೊಡುಗೆ ನೀಡುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಟಾಪ್ 10 ದೇಶಗಳ ಪೈಕಿ ಟರ್ಕಿಗೆ ನಾಲ್ಕನೇ ಸ್ಥಾನವಿದೆ.