ಬಿಜೆಪಿ ಸಂಸದರಿಗೆ ಧಮ್ ಇದ್ರೆ ಮೆಟ್ರೋ ದರ ಕಡಿಮೆ ಮಾಡಿಸಲಿ: ಕೇಂದ್ರದ ವಿರುದ್ಧ ಪ್ರಿಯಾಂಕ್ ಕಿಡಿ

Public TV
1 Min Read

-ಕೈ, ಬಿಜೆಪಿ ನಡುವೆ ರಾಜಕೀಯ ಜಟಾಪಟಿ!

ಬೆಂಗಳೂರು: ನಮ್ಮ ಮೆಟ್ರೋ (Namma Metro) ಟಿಕೆಟ್ ದರ ಹೆಚ್ಚಳ ವಿಚಾರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ದರ ಹೆಚ್ಚಳ ಕೇಂದ್ರದ ನಿರ್ಧಾರ ಎಂದು ಕಾಂಗ್ರೆಸ್‍ನವರು (Congress) ವಾದಿಸಿದರೆ, ಇಲ್ಲ ಇದು ರಾಜ್ಯದ ನಿರ್ಧಾರ ಎಂದು ಬಿಜೆಪಿಯವರು (BJP) ವಾದಿಸುತ್ತಿದ್ದಾರೆ. ಈ ಮೂಲಕ ಪರಸ್ಪರ ರಾಜಕೀಯ ಕೆಸರೆರಚಾಟ ನಡೆಯುತ್ತಿದೆ.

ಕಳೆದ ವಾರ ನಮ್ಮ ಮೆಟ್ರೋ ಪ್ರಯಾಣ ದರವನ್ನು (Metro Fare Hike) ಕೇಂದ್ರ ತಡೆ ಹಿಡಿದಿದೆ ಎಂದು ಹೇಳಿಕೊಂಡಿದ್ದ ಬಿಜೆಪಿಗರು, ಇಂದು ಟಿಕೆಟ್ ದರ ವಾಪಸ್ ಪಡೆಯಿರಿ ಎಂದು ಬಿಎಂಆರ್‌ಸಿಎಲ್‌ಗೆ  ಮನವಿ ಪತ್ರ ಸಲ್ಲಿಸಿದ್ದಾರೆ. ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿ, ದರ ಏರಿಕೆಗೆ ರಾಜ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಹೊಣೆಯಲ್ಲ. ಅದು ಕೇಂದ್ರ ಸರ್ಕಾರದ ಹೊಣೆ ಎಂದು ಪ್ರತಿಪಾದಿಸಿದ್ದಾರೆ. ತಾತ್ಕಾಲಿಕವಾಗಿ ದರ ಏರಿಕೆ ನಿಲ್ಲಿಸಿದರೆ ಅದು ಕೇಂದ್ರದ್ದು. ದರ ಏರಿಕೆ ಆದರೆ ಅದು ರಾಜ್ಯ ಸರ್ಕಾರದ್ದಾ? ಬಿಜೆಪಿ ಸಂಸದರಿಗೆ ಧಮ್ ಇದ್ರೆ ಮೆಟ್ರೋ ದರ ಕಡಿಮೆ ಮಾಡಿಸಲಿ ಎಂದು ಅವರು ಕಿಡಿಕಾರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸರುವ ಶಾಸಕ ಸಿ.ಕೆ ರಾಮಮೂರ್ತಿ, ಪ್ರಿಯಾಂಕ್ ಖರ್ಗೆ ಎಲುಬಿಲ್ಲದ ನಾಲಿಗೆ ಥರ ಮಾತನಾಡಬಾರದು. ದರ ಹೆಚ್ಚಳಕ್ಕೆ ಕಮಿಟಿ ಮಾಡಿದ್ದಾರೆ. ಎಲ್ಲಾ ನಗರಗಳ ದರ ನೋಡಿ. ಅವರು ಈ ರೀತಿ ಹೇಳಬಾರದು ಎಂದಿದ್ದಾರೆ.

ಇನ್ನೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೆಟ್ರೋ ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರು ಇಳಿಮುಖವಾಗಬಹುದು. ಅವಾಗ ನಮ್ಮ ಬಸ್‍ಗೆ ಜನ ಹೋಗ್ತಾರೆ. ಅಥವಾ ಅವರ ವಾಹನಗಳಲ್ಲಿ ಓಡಾಡ್ತಾರೆ ಎಂದಿದ್ದಾರೆ.

Share This Article