ಬೊಮ್ಮಾಯಿಯವರ ಬಂಡಲ್‍ನಿಂದಾಗಿ ಕಲ್ಯಾಣ ಕರ್ನಾಟಕ ಹಿನ್ನೆಡೆ – ಪ್ರಿಯಾಂಕ್ ಖರ್ಗೆ ಟೀಕೆ

Public TV
5 Min Read

ಕಲಬುರಗಿ: ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ 5,000 ಕೋಟಿ ರೂ. ನೀಡುವುದಾಗಿ ಹೇಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂಗಿಗೆ ತುಪ್ಪ ಸವರಿ ಹೋಗಿದ್ದಾರೆ. ಮುಂದೆ ಚುನಾವಣೆ ಬರುತ್ತಿದೆ ಈ ಅನುದಾನ ಬಿಡುಗಡೆ ಅಸಾಧ್ಯಾ ಎಂದು ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಕೆಆರ್‌ಡಿಬಿಗೆ ಘೋಷಿತ ಅನುದಾನ 3,000 ಕೋಟಿ ರೂಪಾಯಿಯಲ್ಲಿ ಕೇವಲ 1,500 ರೂಪಾಯಿ ಕೋಟಿ ಮಾತ್ರ ಬಿಡುಗಡೆ ಮಾಡಿ ಉಳಿದ 1,500 ಕೋಟಿ ರೂಪಾಯಿಯನ್ನು ಎಸ್‍ಡಿಪಿನಲ್ಲಿ ಬಿಡುಗಡೆ ಮಾಡದೇ ಮಹಾತ್ವಾಕಾಂಕ್ಷೆ ತಾಲೂಕುಗಳೆಂದು ಮರುನಾಮಕರಣ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಆ ಅನುದಾನ ಹೆಡ್ ಆಫ್ ಅಕೌಂಟ್‍ಗೆ ಬರುವುದಿಲ್ಲ. ಘೋಷಿತ ಅನುದಾನವನ್ನೇ ಸರಿಯಾಗಿ ಬಿಡುಗಡೆ ಮಾಡದ ಸಿಎಂ ಮತ್ತೆ 5,000 ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ. ಇದನ್ನು ಗಮನಿಸಿದರೆ, ಬೊಮ್ಮಾಯಿ ಅವರು ಮೋದಿಗಿಂತಲೂ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ದೋಖಾ ಹಾಗೂ ಬೊಮ್ಮಾಯಿಯವರ ಬಂಡಲ್‍ನಿಂದಾಗಿ ಕಲ್ಯಾಣ ಕರ್ನಾಟಕ ಹಿನ್ನೆಡೆಯಾಗುತ್ತಿದೆ ಎಂದು ಹರಿಹಾಯ್ದರು.

ಸ್ಥಳೀಯ ಮುಖಂಡರ ನಿರಾಸಕ್ತಿಯಿಂದ ಕಲಬುರಗಿಯಲ್ಲಿ ಅಭಿವೃದ್ದಿಯಾಗಿಲ್ಲ ಎಂದು ಸಿಎಂ ಹೇಳಿದ್ದಾರೆ, ನಿಮ್ಮ ಅವಧಿಯಲ್ಲಿ 5 ಸಿಎಂ ಕೊಟ್ಟಿದ್ದಿರಲ್ಲ ನಿಮ್ಮ ಕೊಡುಗೆ ಏನಿದೆ? ನೀವು ನಿನ್ನೆ ಉದ್ಘಾಟನೆ ಮಾಡಿದ ಕಮೀಷನರ್ ಕಚೇರಿಗೆ ಅಡಿಗಲ್ಲು ಹಾಕಿದ್ದೇ ನಾನು. ನೀವು ಬಂದಿಳಿದ ವಿಮಾನ ನಿಲ್ದಾಣ ನಿರ್ಮಿಸಿದ್ದೇ ನಮ್ಮ ಅವಧಿಯಲ್ಲಿ, ನಿನ್ನೆ ನೀವು ಓಡಾಡಿದ ರಸ್ತೆ ನಿರ್ಮಾಣ ಮಾಡಿದ್ದೆ ನಾವು ಎಂದು ತಿರುಗೇಟು ನೀಡಿದರು.  ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ – ವಿಶ್ವವಿದ್ಯಾಲಯದಲ್ಲಿ ಭುಗಿಲೆದ್ದ ಪ್ರತಿಭಟನೆ

ಯುಪಿಎ ಅವಧಿಯಲ್ಲಿ ಮಂಜೂರಾಗಿದ್ದ ರೈಲ್ವೆ ವಲಯ, ನಿಮ್ಝ್, ಜವಳಿ ಪಾರ್ಕ್, ಏಮ್ಸ್, ಮೇಕ್ ಇನ್ ಇಂಡಿಯಾ, ಇಎಸ್‍ಐ ಮೇಲ್ದರ್ಜೆಗೆ ಏರಿಸುವ ಯೋಜನೆಗಳೆಲ್ಲ ಏನಾದವು ಎಂದು ಪ್ರಶ್ನಿಸಿದ ಅವರು, ಕಲಬುರಗಿ ಸಂಸದ ಉಮೇಶ್ ಜಾಧವ್ ಈ ಮೂರು ವರ್ಷದಲ್ಲಿ ಏನು ಮಾಡಿದ್ದಾರೆ? ಮೋದಿ ಅವರ ಮನ್ ಕಿ ಬಾತ್ ಅನ್ನು ಕನ್ನಡದಲ್ಲಿ ಅನುವಾದ ಮಾಡಿ ಹೇಳಿದ್ದು ಹಾಗೂ ಕೇಂದ್ರಿಯ ವಿವಿಯನ್ನು ಆರ್‌ಎಸ್‍ಎಸ್ ಕೇಂದ್ರವನ್ನಾಗಿ ಪರಿವರ್ತನೆ ಮಾಡುತ್ತಿರುವುದೇ ಇವರ ಸಾಧನೆಯಾಗಿದೆ. ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಗುತ್ತಿಗೆದಾರರ ಬಳಿ ಹಣವಿದ್ದರೆ ಕಾಮಗಾರಿ ಮುಂದುವರೆಸಲಿ ಎರಡು ವರ್ಷದ ನಂತರ ಬಿಲ್ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇದೇನಾ ಅಭಿವೃದ್ದಿ ಎಂದರೆ ಎಂದು ಟೀಕಿಸಿದರು.

ಕಲಬುರಗಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ದಿ ಮಾಡುವುದಾಗಿ ಬೊಮ್ಮಾಯಿ ಹೇಳಿದ್ದಾರೆ. ಕೊನೆ ಪಕ್ಷ ಇಲ್ಲಿನ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಭಾಷಣ ತಯಾರು ಮಾಡಿಕೊಳ್ಳಬೇಕಿತ್ತು. ನಿರಾಣಿ ಅವರು ಮಿಷನ್ 20/20 ಎನ್ನುತ್ತಾರೆ. 2019ರಲ್ಲಿ ಕೊರೆದ ಕೊಳವೆ ಬಾವಿಗಳ ಬಿಲ್ ಪಾವತಿಯಾಗಿಲ್ಲ ಇನ್ನೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಅಭಿವೃದ್ದಿ ಮಾಡುತ್ತಾರೆ ಎಂದು ಪ್ರಿಯಾಂಕ್ ಪ್ರಶ್ನಿಸಿದರು. ಇದನ್ನೂ ಓದಿ: ಎಸ್‍ಟಿ ಮೀಸಲಾತಿಯನ್ನು ಶೇ.6 ರಿಂದ ಶೇ.10ಕ್ಕೆ ಹೆಚ್ಚಿಸುತ್ತೇವೆ: ಕೆಸಿಆರ್

ಕಲಬುರಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಜವಳಿ ಪಾರ್ಕ್ ಯೋಜನೆಯಲ್ಲಿ ಅವ್ಯವಹಾರವಾಗಿದೆ ಎಂದು ನಾನು ಹೇಳಿದರೆ ಪ್ರಿಯಾಂಕ್ ಖರ್ಗೆ ಬರೀ ಆರೋಪ ಮಾಡುತ್ತಾರೆ ಎನ್ನುತ್ತಾರೆ. ಹಾಗಾಗಿ ನಾನು ಲಿಖಿತ ಪ್ರಶ್ನೆ ಕೇಳಿದಾಗ ಇಲಾಖೆಯ ಉನ್ನತ ಅಧಿಕಾರಿಗಳು ಉತ್ತರಿಸಿ, ಈ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ತನಿಖೆ ನಡೆಯುತ್ತಿದೆ. ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ತಯಾರಿಸಿ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಇದರರ್ಥ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದಂತಲ್ಲವೇ ಎಂದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ದಿ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಕಾನೂನು ಬಾಹಿರವಾಗಿ ಕೆಕೆಆರ್‌ಡಿಬಿಯ ಅನುದಾನ ಬಿಡುಗಡೆ ಮಾಡಿರುವುದ ಕುರಿತು ನಾನು ಅಧಿವೇಶನದಲ್ಲಿ ಪ್ರಶ್ನೆ ಎತ್ತಿದಾಗ, ಕಾನೂನು ಸಚಿವರು ಹಾಗೆ ಮಾಡಲು ಬರುವುದಿಲ್ಲ. ಒಂದು ವೇಳೆ ಬಿಡುಗಡೆ ಮಾಡಿದ್ದರೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ನಂತರ, ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವರಾದ ಮುನಿರತ್ನ ಅವರು ಕೆಕೆಆರ್‌ಡಿಬಿಯಿಂದ ಸಂಘಕ್ಕೆ ಬಿಡುಗಡೆಯಾದ ಅನುದಾನದ ಬಳಕೆ ಹಾಗೂ ಮಾಡಿರುವ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ಮಾಡಿ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶ ಮಾಡಿರುತ್ತಾರೆ. ಆದರೆ, ತನಿಖೆ ಈಗ ನಿಂತಿದೆ. ಯಾರ ಒತ್ತಡದಿಂದಾಗಿ ತನಿಖೆ ನಡೆಯುತ್ತಿಲ್ಲ ಎನ್ನುವುದು ಗೊತ್ತಾಗಬೇಕು. ಇಷ್ಟಾದರೂ ಸಂಘದ ವಿರುದ್ದ ಯಾಕೆ ಕ್ರಮ ಜರುಗಿಸಿಲ್ಲ? ಇದನ್ನು ಗಮನಿಸಿದರೆ ಕಲಬುರಗಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಕೆಕೆಆರ್‌ಡಿಬಿಯ ಅನುದಾನ ದುರ್ಬಳಕೆಯಾಗುತ್ತಿದೆ. ಹಾಗಾಗಿ ಕೆಕೆಆರ್‌ಡಿಬಿಯನ್ನು ಸಿಸಿಆರ್‌ಡಿಬಿ ( Collection and Corruption Regional Development Board ) ಎಂದು ಮರುನಾಮಕರಣ ಮಾಡುವುದು ಉಚಿತ ಎಂದು ಕುಟುಕಿದರು.

ಸಿಎಂ ಇಲ್ಲಿಗೆ ಯಾಕೆ ಬಂದಿದ್ದು? ರಾಜ್ಯ ಸರ್ಕಾರದ ವ್ಯಾಪಕ ಭ್ರಷ್ಟಾಚಾರವನ್ನು ಕಲಬುರಗಿಯ ಜನರಿಗೆ ತಿಳಿಸುವುದಕ್ಕಾ? ಎಂದು ಖಾರವಾಗಿ ಹೇಳಿದ ಶಾಸಕರು, ರಾಜ್ಯ ಸರ್ಕಾರ ಖಾಲಿ ಹುದ್ದೆಗಳನ್ನು ತುಂಬುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಒಟ್ಟು 2,50,000 ಹುದ್ದೆಗಳು ಖಾಲಿ ಇದ್ದು, ಅವುಗಳಲ್ಲಿ 20,000 ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. ಇದಕ್ಕೆ ಉತ್ತರ ಕೊಡಿ ಎಂದರೆ ಮಾತು ಬದಲಿಸಿ ಕಾಂಗ್ರೆಸ್ ಕಾಲದಲ್ಲಿಯೂ ಭ್ರಷ್ಟಾಚಾರ ನಡೆದಿತ್ತು ಎಂದು ಹೇಳುತ್ತಾರೆ. ಭ್ರಷ್ಟಚಾರ ನಡೆದಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಹಾಕಿಸಿ ಎಂದು ಸಿಎಂಗೆ ಸವಾಲೊಡ್ಡಿದರು.

ಒತ್ತಾಯ: ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳನ್ನು ಈ ಕೂಡಲೇ ತುಂಬಬೇಕು. ಘೋಷಿತ ಅನುದಾನ 3,000 ಕೋಟಿ ರೂಪಾಯಿಯನ್ನು ಸಮರ್ಪಕವಾಗಿ ಹಾಗೂ ಕಾನೂನುಬದ್ಧವಾಗಿ ಕೆಕೆಆರ್‌ಡಿಬಿಗೆ ಬಿಡುಗಡೆ ಮಾಡಬೇಕು. ಸಂಘದ ಅಡಿಯಲ್ಲಿ ನಡೆದ ಅವ್ಯವಹಾರದ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಖರ್ಗೆ ಅವರು, ಇಷ್ಟನ್ನು ಮಾಡಿದರೆ ಬೊಮ್ಮಾಯಿಯವರಿಗೆ ನಿಜವಾಗಿ ಧಮ್ ಇದೆ ಅರ್ಥವಾಗುತ್ತದೆ ಎಂದರು. ಜೊತೆಗೆ ನೀವೇ ಘೋಷಿಸಿರುವಂತೆ 5,000 ಕೋಟಿ ರೂ. ಬಿಡುಗಡೆ ಮಾಡಿದರೆ ನಿಮ್ಮ ಫೋಟೋಗಳನ್ನು ನಾವೇ ಹಾಕಿಸುತ್ತೇವೆ ಎಂದು ಹೇಳಿದರು.

ಲೋಕಾಯುಕ್ತಕ್ಕೆ ದೂರು: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಸಂಘದಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸುವುದಾಗಿ ಕಾನೂನು ಸಚಿವರು ಭರವಸೆ ನೀಡಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ನಾವು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದ್ದೇವೆ ಎಂದರು.

ಅಪ್ಪುಗೌಡರು ಸಿಎಂ ಆಗಲಿ: ಕಲಬುರಗಿಯ ಅಪ್ಪನ ಕೆರೆಯನ್ನು ಒತ್ತುವರಿ ಮಾಡಿ ಮಹನೀಯರ ಪ್ರತಿಮೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರಿಯಾಂಕ್ ಆರೋಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೆಯ ಪಾಟೀಲ ಅವರು ನನ್ನ ರಾಜಕೀಯ ಏಳಿಗೆ ಸಹಿಸದೇ ಪ್ರಿಯಾಂಕ್ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಪ್ರಿಯಾಂಕ್, ಅಪ್ಪುಗೌಡರು ಈಗ ಶಾಸಕರಿದ್ದಾರೆ, ಮುಂದೆ ಸಚಿವರಾಗಿ ಅಥವಾ ಸಿಎಂ ಆಗಲಿ ಅದು ನನಗೆ ವ್ಯತ್ಯಾಸ ತರದು. ನಾನೇಕೆ ಅವರ ರಾಜಕೀಯ ಏಳಿಗೆ ಸಹಿಸಲ್ಲ? ನಾನು ಕೆರೆ ಒತ್ತುವರಿ ಆಗಿದೆ ಎಂದಿರುವುದನ್ನು ಅವರೇಕೆ ವೈಯಕ್ತಿಕವಾಗಿ ತೆಗೆದುಕೊಳ್ಳಬೇಕು? ಕೆರೆ ಒತ್ತುವರಿ ಆಗಿಲ್ಲದಿದ್ದರೆ, ಜಿಲ್ಲಾಧಿಕಾರಿ ಯಾಕೆ ಕಾಮಗಾರಿಯನ್ನು ತಡೆಹಿಡಿದಿದ್ದಾರೆ. ಅಪ್ಪುಗೌಡರು ದಾಖಲೆಗಳನ್ನು ಡಿಸಿ ತೋರಿಸಲಿ. ನನಗೆ ಉತ್ತರಿಸುವುದೇ ಬೇಡ ನನ್ನ ಪ್ರಶ್ನೆಗಳು ಜನಸಮಾನ್ಯರ ಪ್ರಶ್ನೆಗಳು ಜನರಿಗೆ ಉತ್ತರ ನೀಡಲಿ ಎಂದು ತಿಳಿಸಿದರು.

ಡಿಕೆಶಿ ಅಭಿಪ್ರಾಯವೂ ಪ್ರಾಮುಖ್ಯ: ಕೆಲಸ ಮಾಡುವವರಿಗೆ ಮಾತ್ರ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹೇಳಿರುವುದಕ್ಕೆ ಕಾಂಗ್ರೆಸ್‍ನಲ್ಲಿಯೇ ಕೆಲವರು ವಿರೋಧಿಸಿದ್ದು ಟಿಕೆಟ್ ನೀಡುವುದು ವರಿಷ್ಠರು ಎಂದಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, ಶಾಸಕರು ಅಧ್ಯಕ್ಷರು ಕೂಡಾ ಆಂತರಿಕ ಸಮೀಕ್ಷೆ ನಡೆಸುತ್ತಿದ್ದಾರೆ ಅವರ ಅಭಿಪ್ರಾಯವೂ ಪ್ರಮುಖವಾಗುತ್ತದೆ ಎಂದರು. ಸುದ್ದಿಗೋಷ್ಠಿ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಶಿವಾನಂದ ಪಾಟೀಲ, ಶಿವು ಹೊನಗುಂಟಿ, ಈರಣ್ಣ ಝಳಕಿ ಹಾಗೂ ಮತ್ತಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *