ಆರ್‌ಎಸ್‌ಎಸ್‌ ವಿರುದ್ಧದ ಸಂಘರ್ಷದಲ್ಲಿ ಪ್ರಿಯಾಂಕ್‌ ಒಂಟಿ – ಕಾಂಗ್ರೆಸ್‌ನಲ್ಲೇ ಅಪಸ್ವರ!

Public TV
2 Min Read

ಬೆಂಗಳೂರು: ಕಲಬುರಗಿಯ ಚಿತ್ತಾಪುರದಲ್ಲಿ ನಡೆದ ಆರ್‌ಎಸ್‌ಎಸ್‌ (RSS) ವಿರುದ್ಧದ ಸಂಘರ್ಷ ಕಾಂಗ್ರೆಸ್‌ನಲ್ಲಿ (Congress) ಆಂತರಿಕ ಸಂಘರ್ಷ ಹುಟ್ಟು ಹಾಕಿತಾ ಎಂಬ ಪ್ರಶ್ನೆ ಈಗ ಎದ್ದಿದೆ.

ಹೌದು. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಲಿ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಪ್ರತಿನಿಧಿಸುವ ಚಿತ್ತಾಪುರದ ಕ್ಷೇತ್ರದಲ್ಲಿ ಭಾನುವಾರ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ. ಆದರೆ ಭಾನುವಾರ ರಾಜ್ಯದ ಹಲವಾರು ಜಿಲ್ಲೆಗಳ ನಗರಗಳಲ್ಲಿ ಯಾವುದೇ ವಿರೋಧ ಇಲ್ಲದೇ ಆರ್‌ಎಸ್‌ಎಸ್‌ ಪಥಸಂಚಲನ ನಡೆದಿದೆ.

ಪ್ರಿಯಾಂಕ್‌ ಅವರ ನಿರ್ಧಾರ ಬೇರೆ ನಮ್ಮ ನಿರ್ಧಾರ ಬೇರೆ ಎಂಬಂತೆ ಉಳಿದ ಜಿಲ್ಲೆಗಳಲ್ಲಿ ಸಚಿವರು, ಶಾಸಕರು, ನಾಯಕರಿಂದ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಇದನ್ನೂ ಓದಿ:  ಈಗಲೇ ಯಾಕೆ ಪಥ ಸಂಚಲನ ಮಾಡಬೇಕು? ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ- ಆರ್‌ಎಸ್‌ಎಸ್‌ಗೆ ಪ್ರಿಯಾಂಕ್‌ ಪ್ರಶ್ನೆ

ಸರ್ಕಾರಿ ಜಾಗಗಳಲ್ಲಿ ಆರ್‌ಎಸ್ಎಸ್‌ ಚಟುವಟಿಕೆ ನಿಷೇಧಿಸಬೇಕೆಂಬ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಹಿರಿಯ ಸಚಿವರು ಸಿಎಂ ಸಿದ್ದರಾಮಯ್ಯ ಬಳಿ ಕಳೆದ ವಾರದ ಡಿನ್ನರ್‌ ಸಭೆಯ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಆರ್‌ಎಸ್‌ಎಸ್‌ಗೆ ನಾವು ನಿರ್ಬಂಧ ಹೇರಿದರೆ ಉಳಿದ ಧರ್ಮ, ಸಂಘಟನೆಗಳ ಕಾರ್ಯಕ್ರಮಗಳು ನಡೆಸಿದಾಗ ಅವುಗಳಿಗೆ ಹೇಗೆ ಅನುಮತಿ ನೀಡಿದ್ದೀರಿ ಎಂಬ ಪ್ರಶ್ನೆ ಬರುತ್ತದೆ. ಇದರಿಂದ ಸರ್ಕಾರಿ ಅಧಿಕಾರಿಗಳಿಗೂ ದೊಡ್ಡ ತಲೆನೋವಾಗಲಿದೆ. ಕೋರ್ಟ್‌ಗಳಿಗೆ ಹೋದರೆ ಅದಕ್ಕೆ ಮತ್ತಷ್ಟು ಪ್ರಚಾರ ಸಿಗುತ್ತದೆ. ವಿವಾದವಾದರೆ ಮತ್ತೆ ಜಾಸ್ತಿ ಪ್ರಮಾಣದಲ್ಲಿ ಪೊಲೀಸ್‌ ಭದ್ರತೆ ನೀಡಬೇಕು. ಹೀಗಾಗಿ ಇಲ್ಲಿಯವರೆಗೆ ಹೇಗೆ ನಡೆದಿದಿಯೋ ಅದೇ ರೀತಿ ನಡೆಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಬಹುತೇಕ ಸಚಿವರು ಸೈಲೆಂಟ್‌ ಆಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:  ಚಿತ್ತಾಪುರ ಆಯ್ತು ಈಗ ಸೇಡಂ – ಕೊನೆ ಕ್ಷಣದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಬ್ರೇಕ್‌

ಅದರಲ್ಲೂ ಮಾಜಿ ಸಚಿವ ಕೆಎನ್‌ ರಾಜಣ್ಣ ಅವರು ಬಹಿರಂಗವಾಗಿಯೇ ಸರ್ಕಾರ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈದ್ಗಾ ಮೈದಾನದಲ್ಲಿ ನಮಾಜ್ ಮಾಡುವಾಗ ರಸ್ತೆಯಲ್ಲೇ ನಮಾಜ್ ಮಾಡುತ್ತಾರೆ. ಹಾಗಾದರೆ ಅವರೆಲ್ಲ ಅನುಮತಿ ಪಡೆದು ನಮಾಜ್ ಮಾಡುತ್ತಾರಾ ಎಂದು ರಾಜಣ್ಣ ಪ್ರಶ್ನೆ ಮಾಡಿದ್ದಾರೆ.

ಸರ್ಕಾರಗಳು ಜಾರಿ ಮಾಡಲು ಸಾಧ್ಯವಾಗುವಂತಹ ಕಾನೂನನ್ನು ಮಾತ್ರ ತರಬೇಕು. ಅದನ್ನು ಬಿಟ್ಟು ಜಾರಿ ಮಾಡಲಾಗದ ಕಾನೂನು ತಂದ್ರೆ ಪುಸ್ತಕದಲ್ಲಿ ಇರಬೇಕು ಅಷ್ಟೇ ಎಂದು ಆರ್‌ಎಸ್‌ಎಸ್‌ಗೆ ನಿರ್ಬಂಧ ಹಾಕುವ ಸರ್ಕಾರದ ಧೋರಣೆಗೆ ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಬೆಳವಣಿಗೆ ನೋಡುವಾಗ ಬೇರೆ ಸಚಿವರಿಂದ ಬೆಂಬಲ ವ್ಯಕ್ತವಾಗದ ಕಾರಣ ಆರ್‌ಎಸ್‌ಎಸ್‌ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್‌ನಲ್ಲಿ ಪ್ರಿಯಾಂಕ್‌ ಖರ್ಗೆ ಏಕಾಂಗಿಯಾದ್ರಾ ಎಂಬ ಪ್ರಶ್ನೆ ಎದ್ದಿದೆ.

ಈ ಹಿಂದೆ  2023 ರಲ್ಲಿ ತಮಿಳುನಾಡು ಸರ್ಕಾರ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ  ಅನುಮತಿ ನೀಡಿರಲಿಲ್ಲ. ಕೊನೆಗೆ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿತ್ತು. ಸುಪ್ರೀಂ ಕೋರ್ಟ್‌ ಅನುಮತಿ ನೀಡಿದ ಬಳಿಕ ಆರ್‌ಎಸ್‌ಎಸ್‌ ಕಾರ್ಯಕರ್ತರು ಬಹಳ ವಿಜೃಂಭಣೆಯಿಂದ ಪಥ ಸಂಚಲನ ನಡೆಸುವ ಮೂಲಕ ತಮಿಳುನಾಡು ಸರ್ಕಾರಕ್ಕೆ ಭಾರೀ ಮುಖಭಂಗವಾಗಿತ್ತು.

Share This Article