ಲಸಿಕೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ನೀಡಿದ್ದ ವರ್ಕ್ ಆರ್ಡರ್ ರದ್ದು- CWFI ಸ್ವಾಗತ

Public TV
2 Min Read

ಬೆಂಗಳೂರು: ಕಾರ್ಮಿಕ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನೀಡಿದ್ದ ವರ್ಕ್ ಆರ್ಡರ್ ನ್ನು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ರದ್ದುಗೊಳಿಸಿದೆ. ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(CWFI) ಸಂತಸ ವ್ಯಕ್ತಪಡಿಸಿದೆ.

ರಾಜ್ಯದಲ್ಲಿರುವ 30 ಲಕ್ಷ ಕಟ್ಟಡ ಹಾಗೂ 10 ಲಕ್ಷ ವಲಸೆ ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲು ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಿಗೆ ಕಟ್ಟಡ ಕಾರ್ಮಿಕ ಮಂಡಳಿ ಪ್ರತಿ ಡೋಸ್ ಗೆ 780 ರೂ. ದರವನ್ನು ನಿಗದಿಪಡಿಸಿತ್ತು. ಇದನ್ನು ವಿರೋಧಿಸಿ ಕಟ್ಟಡ ಕಾರ್ಮಿಕ ಸಂಘಟನೆಗಳು ತೀವ್ರ ಹೋರಾಟ ನಡೆಸಿ, ಕಟ್ಟಡ ಕಾರ್ಮಿಕ ಕಲ್ಯಾಣಕ್ಕಾಗಿ ಮೀಸಲಿಟ್ಟ ಸೆಸ್ ಹಣವನ್ನು ರಾಜ್ಯದ 400 ಖಾಸಗಿ ಆಸ್ಪತ್ರೆಗಳಿಗೆ ನೀಡುವ ತೀರ್ಮಾನ ಕೈ ಬಿಡುವಂತೆ ಆಗ್ರಹಿಸಿದ್ದವು. ಇದನ್ನೂ ಓದಿ: ಇನ್ನೂ ಮಳೆಯಾಗಲಿದೆ, ಭೂಮಿ ನಡುಗುತ್ತೆ, ಆಪತ್ತುಗಳು ಕಳೆದಿಲ್ಲ: ಕೋಡಿಶ್ರೀ

ಕಾರ್ಮಿಕರ ಹೋರಾಟದಿಂದ ಕಲ್ಯಾಣ ಮಂಡಳಿ ತನ್ನ ತೀರ್ಮಾನದಿಂದ ಹಿಂದೆ ಸರಿದಿದ್ದು, ಎಲ್ಲ ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೂ ಸರ್ಕಾರದ ವತಿಯಿಂದಲೇ ಉಚಿತ ಲಸಿಕೆ ನೀಡುವುದಾಗಿ ಪ್ರಕಟಿಸಿತ್ತು. ಆದರೆ ಆಗಲೇ ಬೆಂಗಳೂರಿನ ಆರು ಕಾರ್ಮಿಕ ಉಪವಿಭಾಗ ವ್ಯಾಪ್ತಿಯಲ್ಲಿ 2 ಲಕ್ಷ ಡೋಸ್ ಲಸಿಕೆ ನೀಡಲು ಮಂಡಳಿಯಿಂದ 15.60 ಕೋಟಿ ರೂ. ವರ್ಕ್ ಆರ್ಡರ್ ನೀಡಲಾಗಿತ್ತು. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಫೆಡರೇಶನ್ ಒತ್ತಾಯಿಸಿತ್ತು.

ಇದೀಗ ಮಂಡಳಿ ಖಾಸಗಿ ಆಸ್ಪತ್ರೆಗಳ ಒಕ್ಕೂಟವಾದ ಫನಾಗೆ ಕಳುಹಿಸಲಾದ ಆದೇಶದಲ್ಲಿ ರಾಜ್ಯ ಸರ್ಕಾರ ಎಲ್ಲ ಕಾರ್ಮಿಕರಿಗೆ ಸರ್ಕಾರಿ ಆಸ್ಪತ್ರೆಗಳ ಮೂಲಕ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಜಾರಿಗೊಳಿಸಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕೆ ಹಾಕುವ ಕಾರ್ಯಕ್ರಮ ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ. ಇದು ಅತ್ಯಂತ ಮಹತ್ವದ ಮತ್ತು ಸ್ವಾಗತಾರ್ಹ ನಿರ್ಧಾರವಾಗಿದೆ. ಈ ಕ್ರಮಕ್ಕಾಗಿ ಮಂಡಳಿ ಕಾರ್ಯದರ್ಶಿಗಳು ಮತ್ತು ಸರ್ಕಾರಕ್ಕೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (CWFI) ಅಭಿನಂದನೆ ಸಲ್ಲಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *