ಹಬ್ಬಕ್ಕೆ ಸಾಲು ಸಾಲು ರಜೆ – ಖಾಸಗಿ ಬಸ್ ಪ್ರಯಾಣ ದರ ಏರಿಕೆ, ನಿಮ್ಮೂರಿಗೆ ಎಷ್ಟು ನೋಡಿ!

Public TV
2 Min Read

ಬೆಂಗಳೂರು: ದೀಪಗಳ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ಕುಟುಂಬದವರೊಂದಿಗೆ ಹಬ್ಬ ಆಚರಿಸಲು ಜನ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಇದೇ ಶುಕ್ರವಾರವೇ ಹೊರಡುತ್ತಿದ್ದಾರೆ. ಆದ್ರೇ ಇದನ್ನೇ ಬಂಡವಾಳವಾಗಿಸಿಕೊಂಡ ಪ್ರೈವೇಟ್‌ ಬಸ್‌ಗಳು ಪ್ರಯಾಣಿಕರಿಂದ ಸುಲಿಗೆಗಿಳಿದಿವೆ.

ಅಜ್ಞಾನವನ್ನು ಕಳೆದು ಬದುಕಿಗೆ ಬೆಳಕನ್ನು ಕೊಡೋ ಬೆಳಕಿನ ಹಬ್ಬ ದೀಪಾವಳಿಗೆ ಕೌಂಟ್‌ಡೌನ್ ಶುರು ಆಗಿದೆ. ಬೆಂಗಳೂರಿನ ಜನ ತಮ್ಮ ಕುಟುಂಬದವರೊಂದಿಗೆ ಹಬ್ಬ ಆಚರಿಸಲು ಊರುಗಳಿಗೆ ಹೊರಡಲು ಪ್ಲಾನ್‌ ಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ರಜೆಯ ಯೋಜನೆ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಇದೇ ಶುಕ್ರವಾರ 17ರಂದು ರಾತ್ರಿಯೇ ಹೊರಡೋ ಪ್ಲಾನ್‌ ಮಾಡಿದ್ದಾರೆ. 18 ಶನಿವಾರ, 19 ಭಾನುವಾರ, 20 ನರಕ ಚತುರ್ದಶಿ, 21 ಅಮಾವ್ಯಾಸೆ, 22 ದೀಪಾವಳಿಯಿದೆ. ಹೀಗಾಗಿ ಸಾಲು ಸಾಲು ರಜೆ ಬಂದಿವೆ. ಇದನ್ನೂ ಓದಿ: ದೀಪಾವಳಿಗೆ ಬೆಂಗಳೂರಿನಿಂದ ಹೆಚ್ಚುವರಿ KSRTC ಬಸ್ – ನಿಮ್ಮ ಊರಿಗೂ ಇದ್ಯಾ ಪರಿಶೀಲಿಸಿ

ಪ್ರತಿ ಸಲ ಯಾವುದೇ ಹಬ್ಬ ಬಂದ್ರೂ ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚಿಸಿ, ಪ್ರಯಾಣಿಕರ ಜೇಬಿಗೆ ಬರೆ ಹಾಕೋದು ಮಾಮೂಲಿಯಾಗಿದೆ. ಅದ್ರಂತೆ ಇದೇ ಶುಕ್ರವಾರ ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ತೆರಳೋ ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ದುಪ್ಪಟು ಮಾಡಿವೆ. ಇನ್ನೂ ಕೆಲ ಬಸ್‌ಗಳು 50% ಟಿಕೆಟ್ ದರ ಏರಿಕೆ ಮಾಡಿದ್ದು, ಈ ಸೀಜನ್ 30%ವರೆಗೂ ಟಿಕೆಟ್ ದರ ಏರಿಕೆ ಮಾಡಿದ್ದೇವೆ ಅಂತಾರೆ ಖಾಸಗಿ ಬಸ್‌ಗಳ ಮಾಲೀಕರು.

ಖಾಸಗಿ ಬಸ್ ದುಪ್ಪಟ್ಟು ದುಬಾರಿ
ಬೆಂಗಳೂರು-ಹುಬ್ಬಳ್ಳಿ
ಹಳೆ ದರ: 900-1,000 ರೂ.
ಹೊಸ ದರ: 2,500-3,000 ರೂ.

ಬೆಂಗಳೂರು-ಬೆಳಗಾವಿ
ಹಳೆ ದರ: 1,500-1,600ರೂ.
ಹೊಸ ದರ: 2,600-4,000ರೂ.

ಬೆಂಗಳೂರು-ಗದಗ
ಹಳೆ ದರ: 1,100-1,200ರೂ.
ಹೊಸ ದರ: 1,800-2,000ರೂ.

ಬೆಂಗಳೂರು-ಮಂಗಳೂರು
ಹಳೆ ದರ: 1,300-1,400ರೂ.
ಹೊಸ ದರ: 2,300-2,700ರೂ.

ಬೆಂಗಳೂರು-ಉಡುಪಿ
ಹಳೆ ದರ: 1,500-1,700ರೂ.
ಹೊಸ ದರ: 2,000-2,300ರೂ.

ಬೆಂಗಳೂರು-ಬೀದರ್
ಹಳೆ ದರ: 1,700-1,800ರೂ.
ಹೊಸ ದರ:- 2,500-3,500ರೂ.

ಬೆಂಗಳೂರು-ರಾಯಚೂರು
ಹಳೆ ದರ: 1,000-1,200ರೂ.
ಹೊಸ ದರ: 1,900-2,700ರೂ

ಬೆಂಗಳೂರು-ಕಲಬುರಗಿ
ಹಳೆ ದರ: 1,700-1,800ರೂ.
ಹೊಸ ದರ: 2,500-2,600ರೂ.

ಇನ್ನೂ ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಟಿಕೆಟ್ ದರ ಏರಿಕೆ ಸರಿಯಲ್ಲ. ಸಾರಿಗೆ ಇಲಾಖೆಯಿಂದ ಟಿಕೆಟ್ ದರ ಏರಿಕೆ ಮಾಡಿದ ಬಸ್‌ಗಳ ಕಾರ್ಯಾಚರಣೆ ಮಾಡ್ತೇವೆ. ಜನರಿಗೆ ಸಹಾಯವಾಗಲಿ ಅಂತಾನೇ 2,500 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೆಚ್ಚುವರಿಯಾಗಿ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.

ಹಬ್ಬಕ್ಕೆ ಊರಿಗೆ ಹೋಗೋದೇ ಕಷ್ಟವಾಗಿದೆ. ತಿಂಗಳೆಲ್ಲಾ ಕಷ್ಟಪಟ್ಟು ದುಡಿದ ಹಣವನ್ನು ಬಸ್‌ಗಳಿಗೆ ಹಾಕೋದಾ? ಎಂದು ಪ್ರಯಾಣಿಕರು ಬೇಸರ ಹೊರಹಾಕ್ತಿದ್ದಾರೆ. ಒಟ್ನಲ್ಲಿ ಪ್ರತಿ ಸಲ ಹಬ್ಬ ಬಂದಾಗಲೂ ಖಾಸಗಿ ಬಸ್‌ಗಳ ಟಿಕೆಟ್ ದರ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿರೋದಂತೂ ಸತ್ಯ.

Share This Article