ದೇಶದ ಮೊದಲ ಮಂಗಳಮುಖಿ ಎಸ್‍ಐ ಪ್ರೀತಿಕಾ

Public TV
2 Min Read

ಚೆನ್ನೈ: ಉದ್ಯೋಗಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ ಮಂಗಳಮುಖಿ ಪ್ರೀತಿಕಾ ಯಾಶಿನಿ ಈಗ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕವಾಗುವ ಮೂಲಕ ದೇಶದ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ಪ್ರೀತಿಕಾ ಪಾತ್ರರಾಗಿದ್ದಾರೆ.

ಚೆನ್ನೈ ಸಮೀಪದ ವಂಡಲೂರಿನಲ್ಲಿ 1028 ಮಂದಿ ಅಭ್ಯರ್ಥಿಗಳ ಜೊತೆ ಪ್ರೀತಿಕಾ 1 ವರ್ಷ ತರಬೇತಿಯನ್ನು ಪಡೆದು ಈಗ ಉದ್ಯೋಗಕ್ಕೆ ಸೇರಿದ್ದಾರೆ. ಮೊದಲ ದಿನ ನಾನು ಭಾವೋದ್ವೇಗಕ್ಕೆ ಒಳಗಾಗಿದ್ದೆ, ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಸಹಕಾರ ನೀಡಿದರು ಎಂದು ಪ್ರೀತಿಕಾ ಹೇಳಿದ್ದಾರೆ.

ಸಬ್ ಇನ್ಸ್ ಪೆಕ್ಟರ್ ಉದ್ಯೋಗ ಕೊನೆಗೂ ಸಿಕ್ಕಿದೆ. ಮುಂದೆ ಯುಪಿಎಸ್‍ಸಿ ಪರೀಕ್ಷೆ ಬರೆದು ಐಪಿಎಸ್ ಆಗಿ ಆಯ್ಕೆಯಾಗಬೇಕೆಂಬ ಕನಸು ಇದೆ ಎಂದು ಪ್ರೀತಿಕಾ ತಿಳಿಸಿದ್ದಾರೆ.

ಗಂಡು ಮಗುವಾಗಿ ಹುಟ್ಟಿ ಬೆಳೆದ ಪ್ರದೀಪ್ ಕುಮಾರ್ ಕಂಪ್ಯೂಟರ್ ಅಪ್ಲಿಕೇಷನ್ಸ್ ಪದವಿ ಓದಿದ್ದರು. ನಂತರ ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮೂಲಕ ಪ್ರೀತಿಕಾ ಆಗಿ ಬದಲಾದರು. ಮಗ ಲಿಂಗಪರಿವರ್ತನೆಯಾಗಿದ್ದನ್ನು ನೋಡಿ ಪೋಷಕರು ಶಾಕ್ ಆಗಿದ್ದರು. ತಂದೆ ತಾಯಿ ಮಗನಾಗಿ ಬದಲಾಗಲು ವಿವಿಧ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ತನ್ನ ಜೀವನವನ್ನು ರೂಪಿಸಿಕೊಳ್ಳಲು ಪ್ರೀತಿಕಾ ತನ್ನ ಹೆತ್ತವರನ್ನೂ ತೊರೆದು ಬಂದಿದ್ದರು. ಮಂಗಳಮುಖಿಯರ ಜೊತೆ ಸೇರಿಕೊಂಡಿದ್ದ ಇವರು ಆರಂಭದಲ್ಲಿ ಮಹಿಳೆಯರ ಹಾಸ್ಟೆಲ್‍ನಲ್ಲಿ ವಾರ್ಡನ್ ಉದ್ಯೋಗ ಮಾಡಿಕೊಂಡಿದ್ದರು.

ಏನಾಗಿತ್ತು?
2015ರಲ್ಲಿ ಪ್ರೀತಿಕಾ ಪೊಲೀಸ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಹೆಣ್ಣು ಅಥವಾ ಗಂಡು ವಿಭಾಗಕ್ಕೆ ಸೇರದೇ ಇರುವ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ಅರ್ಜಿ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಪ್ರೀತಿಕಾ ಮದ್ರಾಸ್ ಹೈಕೋರ್ಟ್ ಮೆಟ್ಟಲು ಹತ್ತಿದರು. ಮದ್ರಾಸ್ ಹೈಕೋರ್ಟ್ ಮುಂಗಳಮುಖಿಯರಿಗೆ ಅವಕಾಶ ನೀಡಬೇಕೆಂದು ಹೇಳಿ ತಮಿಳುನಾಡು ಸರ್ಕಾರಕ್ಕೆ ಆದೇಶ ನೀಡಿತ್ತು. ದೈಹಿಕ ಪರೀಕ್ಷೆಯಲ್ಲಿ ನೂರು ಮೀಟರ್ ಓಟವನ್ನು ಪೂರ್ಣಗೊಳಿಸಬೇಕಾಗಿದ್ದ ನಿಗದಿತ ಅವಧಿಗಿಂತಲೂ 1.1 ಸೆಕೆಂಡ್ ಹಿಂದೆ ಇದ್ದ ಕಾರಣ ಅನರ್ಹರಾಗಿದ್ದರು. ಈ ಸಮಯದಲ್ಲೂ ಕೋರ್ಟ್ ಪ್ರೀತಿಕಾ ಪರವಾಗಿ ಆದೇಶ ನೀಡಿತ್ತು.

ಈ ಆದೇಶದ ಪ್ರಕಾರ 2016 ಫೆ. 15ರಂದು ಸಿಟಿ ಪೊಲೀಸ್ ಕಮಿಷನರ್ ಸ್ಮಿತ್ ಸರನ್ ಪ್ರೀತಿಕಾ ಸೇರಿದಂತೆ 22 ಮಂಗಳಮುಖಿಯರಿಗೆ ಎಸ್ ಐ ಹುದ್ದೆಗೆ ನೇಮಕವಾಗುವಂತೆ ಸೂಚನೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *