ಫ್ಯಾಕ್ಟ್ ಚೆಕ್: ಬ್ರಿಟನ್ ರಾಜಕುಮಾರನಿಗೆ ಬೆಂಗಳೂರು ವೈದ್ಯ ಚಿಕಿತ್ಸೆ

Public TV
2 Min Read

ನವದೆಹಲಿ: ಬೆಂಗಳೂರಿನ ಆಯುರ್ವೇದಿಕ್ ವೈದ್ಯ ಬ್ರಿಟನ್ ರಾಜಕುಮಾರನಿಗೆ ಆಯುರ್ವೆದಿಕ್ ಔಷಧಿ ಮೂಲಕ ಕೊರೊನಾದಿಂದ ಪಾರು ಮಾಡಿದ್ದಾರೆ ಎಂಬ ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರ ಹೇಳಿಕೆ ಸುಳ್ಳು ಎಂಬುದು ಇದೀಗ ಬಹಿರಂಗವಾಗಿದೆ.

ಈ ಕುರಿತು ಲಂಡನ್ ನಲ್ಲಿರುವ ಬ್ರಿಟನ್ ರಾಜಕುಮಾರರ ವಕ್ತಾರರು ಸ್ಪಷ್ಟಪಡಿಸಿದ್ದು, ಆಯುರ್ವೇದಿಕ್ ಔಷಧಿ ಮೂಲಕ ಬ್ರಿಟನ್ ರಾಜ ಗುಣಮುಖರಾಗಿದ್ದಾರೆ ಎಂಬುದನ್ನು ಅಲ್ಲಗಳೆದಿದ್ದಾರೆ. ಬ್ರಿಟಿನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್‌ ಅವರಿಗೆ ಕೊರೊನಾ ಇರುವುದು ಕಳೆದ ತಿಂಗಳು ದೃಢಪಟ್ಟಿತ್ತು. ಅಲ್ಲದೆ ಸಾರ್ಸ್-ಕೋವಿ-2 ವೈರಸ್ ನಿಂದ ಚೇತರಿಸಿಕೊಂಡಿದ್ದಾರೆ. ನಂತರ ನೆಗಿಟಿವ್ ವರದಿ ಬಂದಿದೆ.

ಇದೆಲ್ಲದರ ಮಧ್ಯೆಯೇ ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರು ಗುರುವಾರ ಗೋವಾದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದ್ದರು. ಆಯುರ್ವೇದಿಕ್ ವೈದ್ಯ ಐಸಾಕ್ ಮಥಾಯ್ ಅವರಿಂದ ನನಗೆ ಕರೆ ಬಂತು. ಇವರು ಬೆಂಗಳೂರಿನಲ್ಲಿ ‘ಸೌಖ್ಯ’ ಆಯುರ್ವೇದ ರೆಸಾರ್ಟ್ ನಡೆಸುತ್ತಿದ್ದಾರೆ. ಪ್ರಿನ್ಸ್ ಚಾರ್ಲ್ಸ್‌ ಅವರಿಗೆ ನೀಡಿದ ಆಯುರ್ವೇದ ಹಾಗೂ ಹೋಮಿಯೋಪಥಿ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ನನಗೆ ತಿಳಿಸಿದರು ಎಂದು ನಾಯ್ಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಬೆಂಗಳೂರಿನ ಆಯುರ್ವೇದಿಕ್ ವೈದ್ಯ ಐಸಾಕ್ ಮಿಥಾಯ್ ಸಹ ಈ ಕುರಿತು ಮಾಹಿತಿ ನೀಡಿದ್ದು, ಬ್ರಿಟನ್ ರಾಜ ಹಾಗೂ ಅವರ ಪತ್ನಿ ನನ್ನ ಪೇಷೆಂಟ್. ನಮ್ಮ ಆಯುರ್ವೇದ ರೆಸಾರ್ಟ್‍ನ ವೆಬ್‍ಸೈಟ್‍ಗೆ ಪ್ರಿನ್ಸ್ ಚಾರ್ಲ್ಸ್‌ ಅವರು ವಿಡಿಯೋ ಸಂದೇಶ ಕಳುಹಿಸಿದ್ದರು. ಇದು ಸಹ ನಮ್ಮ ವೆಬ್‍ಸೈಟ್ ಮುಖಪುಟದಲ್ಲಿದೆ ಎಂದಿದ್ದಾರೆ. ಆದರೆ ರೋಗಿಯ ಗೌಪ್ಯತೆಯನ್ನು ಉಲ್ಲೇಖಿಸಿ, ಚಿಕಿತ್ಸೆ ನೀಡಿರುವುದರ ಕುರಿತು ಅವರು ದೃಢಪಡಿಸಿಲ್ಲ.

ಪ್ರಿನ್ಸ್ ಚಾರ್ಲ್ಸ್‌ ಅವರು ನನ್ನ ರೋಗಿಯಾಗಿದ್ದರಿಂದ ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಅವರ ಬಗ್ಗೆ ನಾನು ಮಾತನಾಡಲು ಸಾಧ್ಯವಾಗುವುದಿಲ್ಲ. ಕೆಲವು ತಿಂಗಳ ಹಿಂದೆ ಅವರು ಇಲ್ಲಿಯೇ ಇದ್ದರು. ಕಳೆದ ತಿಂಗಳಲ್ಲಿ ನಾನು ಲಂಡನ್‍ನಲ್ಲಿ ಅವರನ್ನು ಭೇಟಿಯಾಗಿದ್ದೆ. ಅವರಿಗೆ ಏನು ಔಷಧಿ ಸಲಹೆ ನೀಡಿದೆ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಐಸಾಕ್ ಮಥಾಯ್ ಅವರು ಜ್ವರದ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವ ಯಾವುದೇ ವೈರಲ್ ವಿರುದ್ಧ ಹೋರಾಡುವ ಔಷಧಿಯ ಕುರಿತು ಸಲಹೆ ನೀಡಿದ್ದಾರೆ. ಆದರೆ ಈ ವರೆಗೆ ಕೋವಿಡ್-19(ಕೊರೊನಾ ವೈರಸ್) ರೋಗಿಗೆ ಚಿಕಿತ್ಸೆ ನೀಡಿಲ್ಲ.

ಪ್ರಿನ್ಸ್ ಚಾರ್ಲ್ಸ್‌ ಅವರು ಕೊರೊನಾ ವೈರಸ್ ವಿರುದ್ಧ ಹೋರಾಡಲು ಬೆಂಗಳೂರಿನ ಆಯುರ್ವೇದ ವೈದ್ಯರು ಸಲಹೆ ನೀಡಿದ್ದಾರೆಯೇ ಎಂದು ಲಂಡನ್‍ನ ಪ್ರಿನ್ಸ್ ಆಫ್ ವೇಲ್ಸ್ ನ ವಕ್ತಾರರನ್ನು ಪ್ರಶ್ನಿಸಲಾಗಿದ್ದು, ಈ ವೇಳೆ ಇದು ಸುಳ್ಳು ಮಾಹಿತಿ ಎಂದು ಬಹಿರಂಗವಾಗಿದೆ. ಈ ಕುರಿತು ವಕ್ತಾರರು ಸ್ಪಷ್ಟಪಡಿಸಿದ್ದು, ಇದು ತಪ್ಪು ಮಾಹಿತಿ, ಲಂಡನ್‍ನ ನ್ಯಾಷನಲ್ ಹೆಲ್ತ್ ಸರ್ವಿಸ್(ಎನ್‍ಎಚ್‍ಎಸ್)ನ ವೈದ್ಯಕೀಯ ಸಲಹೆಯನ್ನು ಪಡೆದಿದ್ದಾರೆಯೇ ಹೊರತು ಇನ್ನಾವುದೇ ಚಿಕಿತ್ಸೆಯನ್ನು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ವೈದ್ಯರು ಆಯುರ್ವೇದಿಕ್ ಚಿಕಿತ್ಸೆ ಮೂಲಕ ಪ್ರಿನ್ಸ್ ಚಾರ್ಲ್ಸ್‌ ಅವರನ್ನು ಗುಣಪಡಿಸಿದ್ದಾರೆ ಎಂಬ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಬೆಳಗ್ಗೆಯಿಂದಲೂ ಚರ್ಚೆ ನಡೆಯುತ್ತಿತ್ತು. ಇದೀಗ ಸ್ವತಃ ಪ್ರಿನ್ಸ್ ಚಾಲ್ಸ್ ಅವರ ಲಂಡನ್ ವಕ್ತಾರರು ಈ ಕುರಿತು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *