ಗುರುವಾರ ತುಮಕೂರಿಗೆ ಮೋದಿ – ಎಷ್ಟು ಗಂಟೆಗೆ ಭೇಟಿ? ಎಲ್ಲಿ ಏನು ಕಾರ್ಯಕ್ರಮ?

Public TV
2 Min Read

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಜನವರಿ 2 ರಂದು ತುಮಕೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ನಗರದ ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.

ಪರಿಶೀಲನೆ ಬಳಿಕ ಪ್ರವಾಸಿಮಂದಿರದಲ್ಲಿ ಸಚಿವರು, ಸಂಸದರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ, ಅಧಿಕಾರಿಗಳು ಹಾಗೂ ಮುಖಂಡರ ಜೊತೆ ಮಾತನಾಡಿದ್ದೇನೆ. 1.50 ಲಕ್ಷ ಜನ ಭಾಗವಹಿಸಲಿದ್ದು, ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಮಧ್ಯಾಹ್ನ ಮಧ್ಯಾಹ್ನ 2.15ಕ್ಕೆ ಸಿದ್ದಗಂಗಾ ಮಠಕ್ಕೆ ಆಗಮಿಸಲಿದ್ದು, ಗದ್ದುಗೆ ದರ್ಶನ ಪಡೆದು ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಅಲ್ಲದೆ ಸಿದ್ದಗಂಗಾ ಮಠದಲ್ಲಿ ಸ್ವಾಮೀಜಿ ಅವರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಸಹ ಇದೇ ವೇಳೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3.30 ರಿಂದ 5ರ ವರೆಗೆ ಕಾರ್ಯಕ್ರಮ ನಡೆಯಲಿದ್ದು, ಎಲ್ಲ ರಸ್ತೆಗಳಲ್ಲಿ ಎಲ್‍ಇಡಿ, ಧ್ವನಿ ವರ್ಧಕ ಇರಲಿದೆ. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲಿದ್ದಾರೆ, ದೇಶದ 7 ರಾಜ್ಯದ 28 ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಮಣಿಪುರ, ಜಾರ್ಖಂಡ್ ಸಿಎಂ ಹಾಗೂ ಉತ್ತರಾಖಂಡ್ ರಾಜ್ಯಪಾಲರು ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್ ಯೊಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಧಾನಿ ಮೋದಿಗೆ-ಜನರ ಅಹವಾಲು
ತುಮಕೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಹಲವಾರು ಸವಾಲುಗಳು ಎದುರಾಗಿವೆ. ಪ್ರಧಾನಿ ಮೋದಿಯೇ ಶಂಕುಸ್ಥಾಪನೆ ಮಾಡಿದ್ದ ಎಚ್‍ಎಎಲ್ ಘಟಕ ಇನ್ನೂ ಕಾರ್ಯಾರಂಭ ಮಾಡಿಲ್ಲ. ಮೋದಿಯವರೇ ಉದ್ಘಾಟಿಸಿದ್ದ ಫುಡ್ ಪಾರ್ಕಿನಲ್ಲಿ ಅರಾಜಕತೆ ಉಂಟಾಗಿದೆ. ಹೀಗೆ ಹಲವು ಸಮಸ್ಯೆಗಳು ಪ್ರಧಾನಿಯನ್ನು ಸ್ವಾಗತಿಸಲು ಸಜ್ಜಾಗಿವೆ. ಇದಕ್ಕೆಲ್ಲ ಪ್ರಧಾನಿ ಮೋದಿ ಉತ್ತರ ನೀಡುತ್ತಾರಾ ಎಂದು ಜಿಲ್ಲೆಯ ಜನತೆ ಎದುರು ನೋಡುತಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮೂರನೇ ಬಾರಿ ತುಮಕೂರಿಗೆ ಆಗಮಿಸುತ್ತಿದ್ದಾರೆ. ಪ್ರತಿ ಬಾರಿ ಬಂದಾಗಲೆಲ್ಲ ಒಂದೊಂದು ಆಶ್ವಾಸನೆ ಕೊಟ್ಟು ಹೋಗಿದ್ದಾರೆ. ಯಾವ ಆಶ್ವಾಸನೆಯೂ ಸಂಪೂರ್ಣವಾಗಿ ಇಡೇರಿಲ್ಲ. ಅದರಲ್ಲಿ ಪ್ರಮುಖವಾಗಿ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ನಲ್ಲಿ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು 2016 ಜನವರಿ 3 ರಂದು ಸ್ವತಃ ಮೋದಿಯವರೇ ಶಂಕುಸ್ಥಾಪನೆ ಮಾಡಿದ್ದರು. 2018ರಲ್ಲಿ ಕಾಮಗಾರಿ ಪೂರ್ಣಗೊಂಡು ಹೆಲಿಕಾಪ್ಟರ್ ಹಾರಾಡಲಿದೆ ಎಂದು ಭರವಸೆ ನಿಡಿದ್ದರು. ಆದರೆ 2020 ಸಮೀಪಿಸಿದರೂ ಎಚ್‍ಎಎಲ್ ಘಟಕ ಕಾರ್ಯಾರಂಭಗೊಂಡಿಲ್ಲ. ಇದರ ಜೊತೆಗೆ ಜಿಲ್ಲೆಯ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಹಿಂದಿನ ಎಚ್.ಎಮ್.ಟಿ ಕಾರ್ಖಾನೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಇಸ್ರೋ ಸಂಸ್ಥೆಯ ಘಟಕದ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿದ್ದಾರೆ.

ಈ ಹಿಂದೆ ಪ್ರಧಾನಿ ಮೋದಿಯವರೇ ವಸಂತ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಉದ್ಘಾಟಿಸಿದ್ದ ಫುಡ್ ಪಾರ್ಕ್ ಅವ್ಯವಹಾರಗಳ ತಾಣವಾಗಿದೆ. ರೈತರ ಬೆಳೆಗಳನ್ನು ಸಂಸ್ಕರಣ ಮಾಡಿ, ಸ್ಥಳೀಯರಿಗೆ ಉದ್ಯೋಗ ಕೊಡಲಾಗುವುದು ಎಂದಿದ್ದರು. ಆದರೆ ಇಲ್ಲಿ ರೈತರ ಬೆಳೆಗಳು ಸಂಸ್ಕರಣವಾಗುತ್ತಿಲ್ಲ. ಕನ್ನಡಿಗರಿಗೆ ಡಿ ದರ್ಜೆಯ ಉದ್ಯೋಗ ಮಾತ್ರ ಸಿಗುತ್ತಿದ್ದು, ಮೇಲ್ದರ್ಜೆಯ ಉದ್ಯೋಗಗಳು ಗುಜರಾತಿಗಳ ಪಾಲಾಗುತ್ತಿದೆ ಎಂಬ ಆರೋಪ ಇದೆ. ಹಲವಾರು ಉದ್ಯಮಿಗಳು ಸಬ್ಸಿಸಿಡಿಗೋಸ್ಕರ ಕಾರ್ಖಾನೆ ತೆರೆಯುವ ನಾಟಕ ಆಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *