ಪ್ರತಿ ಜಿಲ್ಲೆಯಲ್ಲಿ ಒಂದು ಆಯುರ್ವೇದ ಆಸ್ಪತ್ರೆ ಸ್ಥಾಪನೆ: ಮೋದಿ

Public TV
1 Min Read

ನವದೆಹಲಿ: ದೇಶದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಆಯುರ್ವೇದ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಆಯುರ್ವೇದವು ಪುರಾತನ ಭಾರತೀಯ ಸಂಸ್ಕತಿಯ ಕೊಡುಗೆಯಾಗಿದ್ದು, ಮತ್ತೆ ಪ್ರಕೃತಿ ಚಿಕಿತ್ಸೆಯ ಕಡೆಗೆ ಸಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಆಯುರ್ವೇದ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

ಖಾಸಗಿ ಸಂಸ್ಥೆಗಳು ಸಹ ಈ ಯೋಜನೆಯಲ್ಲಿ ಭಾಗವಹಿಸುವ ಅಗತ್ಯವಿದ್ದು, ಆಯುರ್ವೇದ ಮಹತ್ವವನ್ನು ಸಾರುವ ದೃಷ್ಟಿಯಿಂದ ತಮ್ಮ ಬದ್ಧತೆಯನ್ನು ತೋರ್ಪಡಿಸುವ ಅಗತ್ಯವಿದೆ ಎಂದರು.

ದೇಶದಲ್ಲಿ ಕಳೆದ 30 ವರ್ಷಗಳಿಂದ ಐಟಿ ಕ್ರಾಂತಿಯನ್ನು ಕಂಡಿದ್ದೇವೆ. ಪ್ರಸ್ತುತ ಆಯುರ್ವೇದ ಅಡಿಯಲ್ಲಿ ಆರೋಗ್ಯ ಜಾಗೃತಿ ಕುರಿತ ಕ್ರಾಂತಿ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ದೇಶಾದ್ಯಂತ ಪ್ರತಿ ಜಿಲ್ಲೆಗೂ ಒಂದು ಆಯುರ್ವೇದ ಕೇಂದ್ರವನ್ನು ಸ್ಥಾಪಿಸಲು ಸಿದ್ಧವಿದೆ. ಈ ಕುರಿತು ಆಯುಷ್ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಪ್ರಪಂಚದಾದ್ಯಂತ ಎಲ್ಲರಿಗೂ ಆರೋಗ್ಯದ ಕುರಿತ ಜಾಗೃತಿ ಹೆಚ್ಚಳವಾಗುತ್ತಿದ್ದು, ಆಯುರ್ವೇದ ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸಲು ಉತ್ತಮ ಸಮಯವಿದು. ಮುಂದೆ ಆಯುರ್ವೇದ ವಿದ್ಯಾರ್ಥಿಗಳಿಗೆ ಈ ಕುರಿತು ಉತ್ತಮ ಪಠ್ಯವನ್ನು ಸಿದ್ಧಪಡಿಸಲಾಗುವುದು. ಅಲ್ಲದೇ ವಿಶ್ವ ವಿದ್ಯಾಲಯಗಳಲ್ಲಿ ಹೆಚ್ಚಿನ ಸೀಟುಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಆಯುಷ್ ಮತ್ತು ಕೃಷಿ ಇಲಾಖೆಯ ರೈತರಿಗೆ ಔಷಧಿಯ ಸಸಿಗಳ ಬಗ್ಗೆ ಮಾಹಿತಿ ನೀಡಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಆರ್ಯುವೇದ ಸಸಿಗಳನ್ನು ಬೆಳೆಯುವುದರ ಮೂಲಕ ರೈತರ ಆದಾಯವು ಹೆಚ್ಚಾಗುತ್ತದೆ. 2022ರ ವೇಳೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗುವ ಸಮಯದಲ್ಲಿ ರೈತರ ಆದಾಯ ದ್ವಿಗುಣವಾಗಲು ನಾನಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದು, ಇದರಲ್ಲಿ ಇದು ಒಂದು ಎಂದು ಮೋದಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *